ಶ್ರೀ ವಿಜಯದಾಸಾರ್ಯ ವಿರಚಿತ ಅರುಣಾಚಲ ಮಹಾತ್ಮೆ ಸುಳಾದಿ
ರಾಗ ವಲಚಿ
ಧ್ರುವತಾಳ
ಅರುಣಾಚಲೇಶ್ವರಾ ಕರುಣವ ಮಾಡಯ್ಯ
ಹರಣಾ ನಿನ್ನದು ನಾಗಾಭರಣ ದೇವ
ತರುಣ ಭಕುತಿಯಲ್ಲಿ ಶರಣು ಪೋಗುವೆ ನಿನಗೆ
ಮರಣ ಕಾಲಕ್ಕೆ ದೈತ್ಯಾಹರಣ ಹರಿಯಾ -
ಚರಣ ಯುಗಳ ದಿವ್ಯ ಸ್ಮರಣೆ ಒದಗುವಂತೆ
ಕರಣ ಶುದ್ಧಿಯಲ್ಲಿ ಉದ್ಧರಣ ಮಾಡೋ
ಧರಣಿಧರಾ ನಮ್ಮ ವಿಜಯವಿಟ್ಠಲನ ಶ್ರೀ -
ಚರಣಾ ಮನದಲ್ಲಿಟ್ಟ ಅರುಣ ಕಪರ್ದಿ ॥ 1 ॥
ಮಟ್ಟತಾಳ
ಏಳು ಯೋಜನ ಉದ್ದ ಶೈಲವಿಪ್ಪದು ಕಾಣೊ
ಏಳು ಯೋಜನ ಸುತ್ತಾ ಲೋಲ ಪುಣ್ಯಭೂಮಿ
ಭೂಲೋಕದ ಒಳಗೆ ಕೇಳಿರಿ ಇದಕ್ಕೆಲ್ಲ
ಮೇಲಾದ ಯಾತ್ರಿ ಪೇಳುವರಾರೈಯ್ಯಾ
ಏಳು ವಾಸರವಿದ್ದ ಆಳುಗಳ ಪುಣ್ಯ
ಪೇಳಲು ಎನ್ನಳವೆ ಏಳೇಳು ಜನ್ಮಕ್ಕೆ
ಪಾಲಸಾಗರಶಯ್ಯಾ ವಿಜಯವಿಟ್ಠಲನ್ನಾ
ಆಳಾಗಿಲ್ಲಿಪ್ಪಾ ಶೈಲಜಪತಿ ಶಿವನೂ ॥ 2 ॥
ರೂಪಕತಾಳ
ಗೌರಿ, ಅರುಣ, ಗೌತಮ ಭಕ್ತರೆಲ್ಲಾ
ಧರಣಿಯೊಳಗೆ ತಿರಿಗಿ ಈ ಗಿರಿಯಲ್ಲಿ ತಪಮಾಡಿ
ಹರುಷಾದಿಂದಲಿ ತಮಗೆ ಸರಿಬಂದ ಮನೋಭೀಷ್ಟಾ
ಭರದಿಂದಲಿ ಪಡೆದು ಶ್ರೀ ಹರಿಯಾ ಕರುಣಾದಲ್ಲಿ
ಮೆರೆದು ಮೈ ಮರೆದು ವಿಸ್ತರವಾಗಿ ಇದ್ದರು
ಸುರರು ವರ್ಣಿಪಲರಿದು ವರ ಗೌತುಮ ಕ್ಷೇತ್ರಾ
ಚರಿಸುವದೇಕ ಸೌರಂಭ ಮನದಲಿ
ಕುರುಬಲಾ ಸಂಹಾರಿ ವಿಜಯವಿಟ್ಠಲರೇಯನ
ಪರಮ ಭಕುತನಾದ ನರಗೆ ಸಿದ್ಧಿಪದು ॥ 3 ॥
ಝಂಪೆತಾಳ
ಸುದರುಶನ ಶೈಲ ಮುದದಿಂದ ಜ್ಞಾನದಲಿ
ಒದಗಿ ಒಂದಾದರು ಪ್ರದಕ್ಷಣೆ ಹೃದಯದಲಿ ಆ -
ನಂದ ಉದಧಿಯೊಳಗೆ ಮುಳುಗಿ
ಪದೊಪದಿಗೆ ನರಹರಿಯ ಧ್ಯಾನಿಸುತ್ತ
ಚದುರತನದಲೀ ಗಿರಿಯ ದಧಿಯಾ
ಮರ್ದಿಸಿದ ತೆರದಿ ನಿನ್ನ ಮನಸು ಮರ್ದಿಸಿಕೊಳುತಾ
ಹದುಳನಾಗಿ ಸುತ್ತಿ ಬರಲೂ ವಂದಡಿಗಶ್ವ -
ಮೇಧದ ಫಲವಕ್ಕು ಸದಮಲರಿಗೆ
ಸುದರಶನ ಪಾಣಿ ವಿಜಯವಿಟ್ಠಲನ
ಪದಗಳರ್ಚಿಸಿ ಸಂಪದವಿಯಲ್ಲಿ ಸೇರೋ ॥ 4 ॥
ತ್ರಿವಿಡಿತಾಳ
ಅರುಣ ಪರ್ವತದಲ್ಲಿ ಹರನು ಶ್ರೀರಾಮನಾ
ಸ್ಮರಣೆ ಮಾಡುತಲಿಪ್ಪ ಹರುಷದಲ್ಲಿ
ವರ ಚಿದಾಂಬರದಲ್ಲಿ ಗೋವಿಂದರಾಯನಾ
ಚರಣ ದೆಶೆಯಲ್ಲಿ ಈಶಾ ಕುಣಿಯುತಿಪ್ಪ
ನರಸಿಂಹನ ಧ್ಯಾನವಾವಾಗ ಜಂಬುಕೇ -
ಶ್ವರದಲ್ಲಿ ಉಮಾಪತಿ ಮಾಳ್ಪಾನಯ್ಯಾ
ಭರದಿಂದ ಮಾವಿನ ತರುವಿನಾಶ್ರಯದಲ್ಲಿ
ಇರುತಿಪ್ಪ ಹರಿಮಹಿಮೆ ಲಾಲಿಸುತ್ತಾ
ವರಕಾಳಹಸ್ತಿ ಎಂಬೋ ಕ್ಷೇತ್ರದಲ್ಲಿ ಶಿವನು
ಅರುಹುವಾ ಹರಿಚರಿತೆ ವೈಧಾತ್ರಗೇ
ಧರಣಿ ಮಧ್ಯದಲ್ಲಿ ಈ ಪರಿ ಐದು ಕ್ಷೇತ್ರದಲಿ
ಹರಿಯ ಸೇವೆಯಾ ಹರನು ಮಾಡುವನೂ
ಹರಿಯೆ ಗತಿ ಹರಗೆ ನಿಜವೆಂದು ತಿಳಿದು ತೀ -
ವರದಿಂದ ಒಡಂಬಡುವದು ಜನರೂ
ಪರದೈವ ವಿಜಯವಿಟ್ಠಲರೇಯಾ ಸೂವರ್ನ -
ಗಿರಿ ವಾಸಾ ಸರ್ವೇಶಾ ಸಕಲ ಸುರರ ಪೋಷಾ ॥ 5 ॥
ಅಟ್ಟತಾಳ
ಇಂದ್ರಾದಿ ಅಷ್ಟತೀರ್ಥದಲಿ ಪೋಗಿ
ಮಿಂದು ಮುದದಲಿ ಅಚ್ಯುತನ ಧ್ಯಾನಾ -
ದಿಂದ ಸಾಧನಗೈದು ಶುದ್ಧ ಭಕುತಿಯಲ್ಲಿ
ಕುಂದದಲೆ ಮಾಡಿ ಹಿಂದಿನ ಕರ್ಮಗ -
ಳೊಂದಾದರಿರದಂತೆ ವಂದಿಸಿ ಜನರು ವರಗಳನು ಪಡೆವದು
ಮಂದರಧರ ಶಿರಿ ವಿಜಯವಿಟ್ಠಲರೇಯಾ
ಮಂದಮತಿಯ ಬಿಡಿಸಿ ನಂದದಿ ಸಲಹುವಾ ॥ 6 ॥
ಆದಿತಾಳ
ಅರುಣಗಿರಿಯ ಯಾತ್ರೆ ಇನ್ನು ಸುರರಿಗೆ ದುರ್ಲಭವೊ
ಹರಿಯ ಭಜಿಸಿ ಮುಪ್ಪುರಹರನು ಈ ಗಿರಿಯಾದ
ನರನೊಬ್ಬ ಬಂದು ಅಂತಃಕರಣದಿಂದಲಿ ಯಾತ್ರಿ
ಭರದಿಂದ ಮುಗಿಸಲು ಹರಿ ಸಂತೃಪ್ತನಾಹನು
ಸ್ಥಿರವಾಗಿ ಈ ಗಿರಿಗೆ ಹರಿದು ಇಲ್ಲಿಗೆ ಬರಲೂ
ಪರಂಪರೆಯಾಗಿ ಸುಖಾಂತರದೊಳು ಲೋಲಾಡಿ
ಮಿರುಗುವ ಕಾಯಾದಲ್ಲಿ ತಿರಗುವಾ ಸರ್ವದಲ್ಲಿ
ಶರಜನ್ಮನಯ್ಯಾನೊಡಿಯಾ ವಿಜಯವಿಟ್ಠಲರೇಯಾ
ಎರವು ಮಾಡದೆ ತನ್ನವರ ಸಂಗಡಾಡಿಸುವಾ ॥ 7 ॥
ಜತೆ
ಅರುಣಾಚಲದ ಯಾತ್ರೆ ಮಾಡಿದ ನರರಿಗೆ
ಅರುಣಾಚಲವಾಸ ವಿಜಯವಿಟ್ಠಲ ಒಲಿವಾ ॥
*******