Showing posts with label ಹರಿಕಥಾಮೃತಸಾರ ಸಂಧಿ 19 ankita jagannatha vittala ಬಿಂಬೋಪಾಸನ ಸಂಧಿ HARIKATHAMRUTASARA SANDHI 19 BIMBOPASANA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 19 ankita jagannatha vittala ಬಿಂಬೋಪಾಸನ ಸಂಧಿ HARIKATHAMRUTASARA SANDHI 19 BIMBOPASANA SANDHI. Show all posts

Wednesday 27 January 2021

ಹರಿಕಥಾಮೃತಸಾರ ಸಂಧಿ 19 ankita jagannatha vittala ಬಿಂಬೋಪಾಸನ ಸಂಧಿ HARIKATHAMRUTASARA SANDHI 19 BIMBOPASANA SANDHI

   

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ

ಬಿಂಬೋಪಾಸನ ಸಂಧಿ 19  ರಾಗ - ಪಂತುವರಾಳಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ

ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ

ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು

ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ||1||


ಅಣ್ಣ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ

ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು

ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ

ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ||2||


ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು

ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ

ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ

ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ||3||


ನಾದ ಭೋಜನ ಶಬ್ದದೊಳು ಬಿಂಬು ಓದನ ಉದಕದೊಳಗೆ

ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ

ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ

ಅನವರತ ಚಿಂತಿಸು ಈ ಪರಿಯಲಿಂದ||4||


ವೇದ ಮಾನಿ ರಮಾ ಅನುಪಾಸ್ಯ ಗುಣ ಉದಧಿ ಗುಣ ತ್ರಯ ವಿವರ್ಜಿತ

ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡ ಆದಿ ವಿಲಕ್ಷಣನು

ಸಾಧು ಸಮ್ಮತವೆನಿಸುತಿಹ ನಿಷುಸೀದ ಗಣಪತಿಯೆಂಬ ಶ್ರುತಿ ಪ್ರತಿಪಾದಿಸುವುದು

ಅನವರತ ಅವನ ಗುಣ ಪ್ರಾಂತ ಗಾಣದಲೆ||5||


ಕರೆಸುವನು ಮಾಯಾ ರಮಣ ತಾ ಪುರುಷ ರೂಪದಿ ತ್ರಿಸ್ಥಳಗಳೊಳು

ಪರಮ ಸತ್ಪುರುಷಾರ್ಥದ ಮಹತ್ತತ್ವದೊಳಗಿದ್ದು

ಸರಸಿಜ ಭವಾಂಡ ಸ್ಥಿತ ಸ್ತ್ರೀ ಪುರುಷ ತನ್ಮಾತ್ರಗಳ

ಏಕೋತ್ತರ ದಶ ಇಂದ್ರಿಯಗಳ ಮಹಾ ಭೂತಗಳ ನಿರ್ಮಿಸಿದ||6||


ಈ ಶರೀರಗ ಪುರುಷ ತ್ರಿ ಗುಣದಿ ಸ್ತ್ರೀ ಸಹಿತ ತಾನಿದ್ದು

ಜೀವರಿಗೆ ಆಶೆ ಲೋಭ ಅಜ್ಞಾನ ಮದ ಮತ್ಸರ ಕುಮೋಹ ಕ್ಷುಧ

ಹಾಸ ಹರ್ಷ ಸುಷುಪ್ತಿ ಸ್ವಪ್ನ ಪಿಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ

ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ||7||


ತ್ರಿವಿಧ ಗುಣಮಯ ದೇಹ ಜೀವಕೆ ಕವಚದಂದದಿ ತೊಡಿಸಿ

ಕರ್ಮ ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೇವರನಾ

ಕವಿಸಿ ಮಾಯಾರಮಣ ಮೋಹವ ಭವಕೆ ಕಾರಣನಾಗುವನು

ಸಂಶ್ರವಣ ಮನನವ ಮಾಳ್ಪರಿಗೆ ಮೋಚಕನು ಎನಿಸುತಿಪ್ಪ||8||


ಸಾಶನಾಹ್ವಯ ಸ್ತ್ರೀ ಪುರುಷರೊಳು ವಾಸವಾಗಿಹನು ಎಂದರಿದು

ವಿಶ್ವಾಸಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ

ಕ್ಲೇಶ ನಾಶನ ಅಚಲಗಳೊಳು ಪ್ರಕಾಶಿಸುತಲಿಹ

ಅನಶನ ರೂಪ ಉಪಾಸನವ ಮಾಳ್ಪರಿಗೆ ತೋರ್ಪನು ತನ್ನ ನಿಜರೂಪ||9||


ಪ್ರಕಾರಾಂತರ ಚಿಂತಿಸುವುದು ಈ ಪ್ರಕೃತಿಯೊಳು ವಿಶ್ವಾದಿ ರೂಪವ

ಪ್ರಕಟ ಮಾಳ್ಪೆನು ಯಥಾ ಮತಿಯೊಳು ಗುರುಕೃಪಾಬಲದಿ

ಮುಕುರ ನಿರ್ಮಿತ ಸದನದೊಳು ಪೊಗೆ ಸ್ವಕೀಯ ರೂಪವ ಕಾಂಬ ತೆರದಂತೆ

ಅಕುಟಿಲಾತ್ಮ ಚರಾಚರದಿ ಸರ್ವತ್ರ ತೋರುವನು||10||


ಪರಿಚ್ಛೇದ ತ್ರಯ ಪ್ರಕೃತಿಯೊಳಗೆ ಇರುತಿಹನು ವಿಶ್ವಾದಿ ರೂಪಕ

ಧರಿಸಿ ಆತ್ಮಾದಿ ತ್ರಿ ರೂಪವ ಈಷಣತ್ರಯದಿ

ಸುರುಚಿ ಜ್ಞಾನಾತ್ಮ ಸ್ವರೂಪದಿ ತುರಿಯ ನಾಮಕ ವಾಸುದೇವನ ಸ್ಮರಿಸು

ಮುಕ್ತಿ ಸುಖ ಪ್ರದಾಯಕನು ಈತನಹುದೆಂದು||11||


ಕಮಲಸಂಭವ ಜನಕ ಜಡ ಜಂಗಮರ ಒಳಗೆ ನೆಲೆಸಿದ್ದು

ಕ್ರಮ ವ್ಯುತ್ಕ್ರಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ

ಕ್ಷಮ ಕ್ಷಾಮ ಕ್ಷಮೀಹನಾಹ್ವಯ ಸುಮನಸ ಅಸುರರೊಳಗೆ

ಅಹಂ ಮಮನಮಮ ಎಂದು ಈ ಉಪಾಸನೆ ಏವ ಪ್ರಾಂತದಲಿ||12||


ಈ ಸಮಸ್ತ ಜಗತ್ತು ಈಶಾವ್ಯಾಸವು ಎನಿಪುದು

ಕಾರ್ಯ ರೂಪವು ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ

ಶ್ರೀಶಗೆ ಜಡ ಪ್ರತಿಮೆಯೆನಿಪುದು ಮಾಸದು ಒಮ್ಮಿಗು ಸನ್ನಿಧಾನವು

ವಾಸವಾಗಿಹ ನಿತ್ಯ ಶಾಲಗ್ರಾಮದ ಉಪಾದಿ||13||


ಏಕಮೇವಾದ್ವಿತೀಯ ರೂಪ ಅನೇಕ ಜೀವರೊಳಿದ್ದು

ತಾ ಪ್ರತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ

ಮೂಕ ಬಧಿರ ಅಂಧಾದಿ ನಾಮಕ ಈ ಕಳೇವರದೊಳಗೆ ಕರೆಸುವ

ಮಾಕಳತ್ರನ ಲೌಕಿಕ ಮಹಾ ಮಹಿಮೆಗೆ ಏನೆಂಬೆ||14||


ಲೋಕ ಬಂಧು ಲೋಕನಾಥ ವಿಶೋಕ ಭಕ್ತರ ಶೋಕ ನಾಶನ

ಶ್ರೀ ಕರಾರ್ಚಿತ ಸೋಕದಂದದಲಿಪ್ಪ ಸರ್ವರೊಳು

ಸಾಕುವನು ಸಜ್ಜನರ ಪರಮ ಕೃಪಾಕರ ಈಶ ಪಿನಾಕಿ ಸನ್ನುತ

ಸ್ವೀಕರಿಸುವ ಅನತರು ಕೊಟ್ಟ ಸಮಸ್ತ ಕರ್ಮಗಳ||15||


ಅಹಿತ ಪ್ರತಿಮೆಗಳು ಎನಿಸುವವು ದೇಹ ಗೇಹ ಅಪತ್ಯ ಸತಿ ಧನ

ಲೋಹ ಕಾಷ್ಠ ಶಿಲಾಮೃದ್ ಆತ್ಮಕವು ಆದ ದ್ರವ್ಯಗಳು

ನೇಹ್ಯದಲಿ ಪರಮಾತ್ಮ ಎನಗೆ ಇತ್ತೀಹನು ಎಂದರಿದು ಅನುದಿನದಿ

ಸಮ್ಮೋಹಕೆ ಒಳಗಾಗದಲೆ ಪೂಜಿಸು ಸರ್ವ ನಾಮಕನ||16||


ಶ್ರೀ ತರುಣಿ ವಲ್ಲಭಗೆ ಜೀವರು ಚೇತನ ಪ್ರತಿಮೆಗಳು

ಓತಪ್ರೋತನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಹೋತ ಸರ್ವ ಇಂದ್ರಿಯಗಳೊಳು ಸಂಪ್ರೀತಿಯಿಂದ ಉಂಡುಣಿಸಿ ವಿಷಯ

ನಿರ್ವಾತ ದೇಶಗ ದೀಪದಿಂದಲಿಪ್ಪ ನಿರ್ಭಯದಿ||17||


ಭೂತ ಸೋಕಿದ ಮಾನವನು ಬಹು ಮಾತನಾಡುವ ತೆರದಿ

ಮಹಾ ಭೂತ ವಿಷ್ಣ್ವಾವೇಷದಿಂದಲಿ ವರ್ತಿಪುದು ಜಗವು

ಕೈತವೋಕ್ತಿಗಳಲ್ಲ ಶೇಷ ಫಣಾತ ಪತ್ರಗೆ

ಜೀವ ಪಂಚಕ ವ್ರಾತವೆಂದಿಗು ಭಿನ್ನ ಪಾದಾಹ್ವಯದಿ ಕರೆಸುವುದು||18||


ದಿವಿಯೊಳಿಪ್ಪವು ಮೂರು ಪಾದಗಳು ಅವನಿಯೊಳಗಿಹುದೊಂದು

ಈ ವಿಧ ಕವಿಭಿರೀಡಿತ ಕರೆಸುವ ಚತುಷ್ಪಾತು ತಾನೆಂದು

ಇವನ ಪಾದ ಚತುಷ್ಟಯಗಳ ಅನುಭವಕೆ ತಂದು ನಿರಂತರದಿ

ಉದ್ಧವನ ಸಖ ಸರ್ವಾಂತರಾತ್ಮಕನು ಎಂದು ಸ್ಮರಿಸುತಿರು||19||


ವಂಶ ಬಾಗಿಲು ಬೆಳೆಯೆ ಕಂಡು ನರಾಂಶದಲಿ ಶೋಭಿಪುದು

ಬಾಗದ ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ

ಕಂಸ ಮರ್ದನ ದಾಸರಿಗೆ ನಿಸ್ಸಂಶಯದಿ ಎರಗದಲೆ

ನಾ ವಿದ್ವಾಂಸನು ಎಂದು ಅಹಂಕರಿಸೆ ಭವಗುಣದಿ ಬಂಧಿಸುವ||20||


ಜ್ಯೋತಿ ರೂಪಗೆ ಪ್ರತಿಮೆಗಳು ಸಾಂಕೇತಿಕ ಆರೋಪಿತ

ಸುಪೌರುಷ ಧಾತು ಸಪ್ತಕ ಧೈರ್ಯ ಶೌರ್ಯ ಔದಾರ್ಯ ಚಾತುರ್ಯ

ಮಾತು ಮಾನ ಮಹತ್ವ ಸಹನ ಸುನೀತಿ ನಿರ್ಮಲ ದೇಶ ಬ್ರಾಹ್ಮಣ

ಭೂತ ಪಂಚಕ ಬುದ್ಧಿ ಮೊದಲಾದ ಇಂದ್ರಿಯ ಸ್ಥಾನ||21||


ಜೀವ ರಾಶಿಯೊಳು ಅಮೃತ ಶಾಶ್ವತ ಸ್ಥಾವರಗಳೊಳು ಸ್ಥಾಣು ನಾಮಕ

ಆವಕಾಲದಲಿಪ್ಪ ಅಜಿತಾನಂತನು ಎಂದೆನಿಸಿ

ಗೋವಿದಾಂಪತಿ ಗಾಯನಪ್ರಿಯ ಸಾವಯವ ಸಹಸ್ರ ನಾಮ

ಪರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ||22||


ಮಾಧವನ ಪೂಜಾರ್ಥವಾಗಿ ನಿಷೇಧ ಕರ್ಮವ ಮಾಡಿ

ಧನ ಸಂಪಾದಿಸಲು ಸತ್ಪುಣ್ಯ ಕರ್ಮಗಳು ಎನಿಸಿಕೊಳುತಿಹವು

ಸ್ವೋದರಂಭರಣಾರ್ಥ ನಿತ್ಯಡಿ ಸಾಧು ಕರ್ಮವ ಮಾಡಿದರು ಸರಿ

ಯೈದುವನು ದೇಹಾಂತರವ ಸಂದೇಹವು ಇನಿತಿಲ್ಲ||23||


ಅಪಗತಾಶ್ರಯ ಎಲ್ಲರೊಳಗಿದ್ದು ಉಪಮನು ಎನಿಪ ಅನುಪಮ ರೂಪನು

ಶಫರ ಕೇತನ ಜನಕ ಮೋಹಿಪ ಮೋಹಕನ ತೆರದಿ

ತಪನ ಕೋಟಿ ಸಮಪ್ರಭಾ ಸಿತವಪುವು ಎನಿಪ ಕೃಷ್ಣಾದಿ ರೂಪಕ

ವಿಪಗಳಂತೆ ಉಂಡುಣಿಪ ಸರ್ವತ್ರದಲಿ ನೆಲೆಸಿದ್ದು||24||


ಅಡವಿಯೊಳು ಬಿತ್ತದಲೆ ಬೆಳೆದಿಹ ಗಿಡದ ಮೂಲಿಕೆ

ಸಕಲ ಜೀವರ ಒಡಲೊಳಿಪ್ಪ ಆಮಯವ ಪರಿಹರಗೈಸುವಂದದಲಿ

ಜಡಜ ಸಂಭವ ಜನಕ ತ್ರಿಜಗದ್ವಡೆಯ ಸಂತೈಸೆನಲು

ಅವರು ಇದ್ದೆಡೆಗೆ ಬಂದೊದಗುವನು ಭಕ್ತರ ಭಿಡೆಯ ಮೀರದಲೆ||25||


ಶ್ರೀ ನಿಕೇತನ ತನ್ನವರ ದೇಹ ಅನುಬಂಧಿಗಳಂತೆ ಅವ್ಯವಧಾನದಲಿ ನೆಲೆಸಿಪ್ಪ

ಸರ್ವದ ಸಕಲ ಕಾಮದನು

ಕೊಟ್ಟರು ಭುಂಜಿಸುತ ಮದ್ದಾನೆಯಂದದಿ ಸಂಚರಿಸು

ಮತ್ತೇನು ಬೇಡದೆ ಭಜಿಸುತಿರು ಅವನ ಅಂಘ್ರಿ ಕಮಲಗಳ||26||


ಬೇಡದಲೆ ಕೊಡುತಿಪ್ಪ ಸುರರಿಗೆ ಬೇಡಿದರೆ ಕೊಡುತಿಹನು ನರರಿಗೆ

ಬೇಡಿ ಬಳಲುವ ದೈತ್ಯರಿಗೆ ಕೊಡನು ಒಮ್ಮೆ ಪುರುಷಾರ್ಥ

ಮೂಢರು ಅನುದಿನ ಧರ್ಮ ಕರ್ಮವ ಮಾಡಿದರು ಸರಿ

ಅಹಿಕ ಫಲಗಳ ನೀಡಿ ಉನ್ಮತ್ತರನು ಮಾಡಿ ಮಹಾ ನಿರಯವೀವ||27||


ತರಣಿ ಸರ್ವತ್ರದಲಿ ಕಿರಣವ ಹರಹಿ ತತ್ತದ್ ವಸ್ತುಗಳನು ಸರಿಸಿ

ಅದರ ಅದರಂತೆ ಛಾಯವ ಕಂಗೊಳಿಪ ತೆರದಿ

ಅರಿಧರ ಏಜಾನೇಜ ಜಗದೊಳಗಿರುವ ಛಾಯಾ ತಪವೆನಿಸಿ

ಸಂಕರುಷಣಾಹ್ವಯ ಅವರವರ ಯೋಗ್ಯತೆಗಳಂತೆ ಇಪ್ಪ||28||


ಈ ವಿಧದಿ ಸರ್ವತ್ರ ಲಕ್ಷ್ಮೀ ಭೂ ವನಿತೆಯರ ಕೂಡಿ

ತನ್ನ ಕಳಾ ವಿಶೇಷಗಳ ಎಲ್ಲ ಕಡೆಯಲಿ ತುಂಬಿ ಸೇವ್ಯತಮ

ಸೇವಕನು ತಾನೆನಿಸಿ ಮಾಯಾದೇವಿ ರಮಣ

ಪ್ರವಿಷ್ಟ ರೂಪವ ಸೇವೆ ಮಾಳ್ಪ ಶರಣ್ಯ ಶಾಶ್ವತ ಕರುಣಿ ಕಮಲಾಕ್ಷ||29||


ಪ್ರಣವ ಕಾರಣ ಕಾರ್ಯ ಪ್ರತಿಪಾದ್ಯನು ಪರಾತ್ಪರ

ಚೇತನಾಚೇತನ ವಿಲಕ್ಷಣ ಅನಂತ ಸತ್ಕಲ್ಯಾಣ ಗುಣಪೂರ್ಣ

ಅನುಪಮನು ಉಪಾಸಿತ ಗುಣ ಉದಧಿ ಅನಘ ಅಜಿತ ಅನಂತ

ನಿಷ್ಕಿಂಚನ ಜನಪ್ರಿಯ ನಿರ್ವಿಕಾರ ನಿರಾಶ್ರಯ ಅವ್ಯಕ್ತಾ||30||


ಗೋಪ ಭೀಯ ಭವಾಂಧಕಾರಕೆ ದೀಪವಟ್ಟಿಗೆ

ಸಕಲ ಸುಖ ಸದನ ಉಪರಿಗ್ರಹವು ಎನಿಸುತಿಪ್ಪುದು ಹರಿಕಥಾಮೃತವು

ಗೋಪತಿ ಜಗನ್ನಾಥ ವಿಠಲ ಸಮೀಪದಲಿ ನೆಲೆಸಿದ್ದು

ಭಕ್ತರನು ಆಪವರ್ಗರ ಮಾಡುವನು ಮಹ ದುಃಖ ಭಯದಿಂದ||31||

********


harikathAmRutasAra gurugaLa karuNadindApanitu kELuve

parama BagavadBaktaru idanAdaradi kELuvudu||


mukta biMbanu turiya jIvanmukta biMbanu viSva

Sruti saMsakta biMbanu taijasanu asRujyarige prAj~ja

SaktanAdaru sariye sarva udrakta mahimanu

duHKa suKagaLa vaktRu mADutalippa kalpAntadali bapparige||1||


aNNa nAmaka prakRutiyoLage accinnanu Agiha prAj~janAmadi

sonna oDala modalAda avaroLu annAda taijasanu

annada aMbuda nABa viSvanu Binna nAma kriyegaLindali

tannoLage tA ramipa pUrNAnanda j~jAnamaya||2||


bUdiyoLage aDagippa anaLana upAdi cEtana prakRutiyoLu

annAda annAhvayadi karesuva brahma Siva rUpi

Odana prada viShNu parama AhlAdava Ivuta

tRupti baDisuva agAdha mahimana citra karmavanu Ava baNNisuva||3||


nAda BOjana SabdadoLu biMbu Odana udakadoLage

GOSha anuvAdadoLu SAntAKya jaTharAgniyoLage irutippa

vaidika suSabdadoLu putra sahOdara anugaroLu ati SAntana pAda kamala

anavarata cintisu I pariyalinda||4||


vEda mAni ramA anupAsya guNa udadhi guNa traya vivarjita

svOdarasthita niKiLa brahmAnDa Adi vilakShaNanu

sAdhu sammatavenisutiha niShusIda gaNapatiyeMba Sruti pratipAdisuvudu

anavarata avana guNa prAnta gANadale||5||


karesuvanu mAyA ramaNa tA puruSha rUpadi tristhaLagaLoLu

parama satpuruShArthada mahattatvadoLagiddu

sarasija BavAnDa sthita strI puruSha tanmAtragaLa

EkOttara daSa indriyagaLa mahA BUtagaLa nirmisida||6||


I SarIraga puruSha tri guNadi strI sahita tAniddu

jIvarige ASe lOBa aj~jAna mada matsara kumOha kShudha

hAsa harSha suShupti svapna pipAsa jAgrati janma sthiti mRuti

dOSha puNya jayApajaya dvaMdvagaLa kalpisida||7||


trividha guNamaya dEha jIvake kavacadaMdadi toDisi

karma pravahadoLu sancAra mADisutippa jEvaranA

kavisi mAyAramaNa mOhava Bavake kAraNanAguvanu

saMSravaNa mananava mALparige mOcakanu enisutippa||8||


sASanAhvaya strI puruSharoLu vAsavAgihanu endaridu

viSvAsapUrvaka Bajisi tOShisu svAvarOttamara

klESa nASana acalagaLoLu prakASisutaliha

anaSana rUpa upAsanava mALparige tOrpanu tanna nijarUpa||9||


prakArAntara ciMtisuvudu I prakRutiyoLu viSvAdi rUpava

prakaTa mALpenu yathA matiyoLu gurukRupAbaladi

mukura nirmita sadanadoLu poge svakIya rUpava kAMba teradaMte

akuTilAtma carAcaradi sarvatra tOruvanu||10||


paricCEda traya prakRutiyoLage irutihanu viSvAdi rUpaka

dharisi AtmAdi tri rUpava IShaNatrayadi

suruci j~jAnAtma svarUpadi turiya nAmaka vAsudEvana smarisu

mukti suKa pradAyakanu Itanahudendu||11||


kamalasaMBava janaka jaDa jangamara oLage nelesiddu

krama vyutkramadi karmava mADi mADisutippa bEsarade

kShama kShAma kShamIhanAhvaya sumanasa asuraroLage

ahaM mamanamama endu I upAsane Eva prAntadali||12||


I samasta jagattu ISAvyAsavu enipudu

kArya rUpavu nASavAdaru nityavE sari kAraNa prakRuti

SrISage jaDa pratimeyenipudu mAsadu ommigu sannidhAnavu

vAsavAgiha nitya SAlagrAmada upAdi||13||


EkamEvAdvitIya rUpa anEka jIvaroLiddu

tA pratyEka karmava mADi mOhisutippa tiLisadale

mUka badhira andhAdi nAmaka I kaLEvaradoLage karesuva

mAkaLatrana laukika mahA mahimege EneMbe||14||


lOka bandhu lOkanAtha viSOka Baktara SOka nASana

SrI karArcita sOkadandadalippa sarvaroLu

sAkuvanu sajjanara parama kRupAkara ISa pinAki sannuta

svIkarisuva anataru koTTa samasta karmagaLa||15||


ahita pratimegaLu enisuvavu dEha gEha apatya sati dhana

lOha kAShTha SilAmRud Atmakavu Ada dravyagaLu

nEhyadali paramAtma enage ittIhanu eMdaridu anudinadi

sammOhake oLagAgadale pUjisu sarva nAmakana||16||


SrI taruNi vallaBage jIvaru cEtana pratimegaLu

OtaprOtanAgiddu ellaroLu vyApAra mADutiha

hOta sarva iMdriyagaLoLu saMprItiyinda unDuNisi viShaya

nirvAta dESaga dIpadindalippa nirBayadi||17||


BUta sOkida mAnavanu bahu mAtanADuva teradi

mahA BUta viShNvAvEShadindali vartipudu jagavu

kaitavOktigaLalla SESha PaNAta patrage

jIva pancaka vrAtavendigu Binna pAdAhvayadi karesuvudu||18||


diviyoLippavu mUru pAdagaLu avaniyoLagihudondu

I vidha kaviBirIDita karesuva catuShpAtu tAnendu

ivana pAda catuShTayagaLa anuBavake tandu nirantaradi

uddhavana saKa sarvAntarAtmakanu endu smarisutiru||19||


vaMSa bAgilu beLeye kanDu narAMSadali SOBipudu

bAgada vaMSa pASadi kaTTi Erupa DoMba mastakake

kaMsa mardana dAsarige nissaMSayadi eragadale

nA vidvAMsanu endu ahankarise BavaguNadi bandhisuva||20||


jyOti rUpage pratimegaLu sAnkEtika ArOpita

supauruSha dhAtu saptaka dhairya Saurya audArya cAturya

mAtu mAna mahatva sahana sunIti nirmala dESa brAhmaNa

BUta pancaka buddhi modalAda indriya sthAna||21||


jIva rASiyoLu amRuta SASvata sthAvaragaLoLu sthANu nAmaka

AvakAladalippa ajitAnantanu endenisi

gOvidAMpati gAyanapriya sAvayava sahasra nAma

parAvarESa pavitrakarma vipaScita susAma||22||


mAdhavana pUjArthavAgi niShEdha karmava mADi

dhana saMpAdisalu satpuNya karmagaLu enisikoLutihavu

svOdaraMBaraNArtha nityaDi sAdhu karmava mADidaru sari

yaiduvanu dEhAntarava sandEhavu initilla||23||


apagatASraya ellaroLagiddu upamanu enipa anupama rUpanu

SaPara kEtana janaka mOhipa mOhakana teradi

tapana kOTi samapraBA sitavapuvu enipa kRuShNAdi rUpaka

vipagaLaMte uMDuNipa sarvatradali nelesiddu||24||


aDaviyoLu bittadale beLediha giDada mUlike

sakala jIvara oDaloLippa Amayava pariharagaisuvandadali

jaDaja saMBava janaka trijagadvaDeya santaisenalu

avaru iddeDege bandodaguvanu Baktara BiDeya mIradale||25||


SrI nikEtana tannavara dEha anubandhigaLante avyavadhAnadali nelesippa

sarvada sakala kAmadanu

koTTaru Bunjisuta maddAneyandadi sancarisu

mattEnu bEDade Bajisutiru avana anGri kamalagaLa||26||


bEDadale koDutippa surarige bEDidare koDutihanu nararige

bEDi baLaluva daityarige koDanu omme puruShArtha

mUDharu anudina dharma karmava mADidaru sari

ahika PalagaLa nIDi unmattaranu mADi mahA nirayavIva||27||


taraNi sarvatradali kiraNava harahi tattad vastugaLanu sarisi

adara adaraMte CAyava kangoLipa teradi

aridhara EjAnEja jagadoLagiruva CAyA tapavenisi

saMkaruShaNAhvaya avaravara yOgyategaLaMte ippa||28||


I vidhadi sarvatra lakShmI BU vaniteyara kUDi

tanna kaLA viSEShagaLa ella kaDeyali tuMbi sEvyatama

sEvakanu tAnenisi mAyAdEvi ramaNa

praviShTa rUpava sEve mALpa SaraNya SASvata karuNi kamalAkSha||29||


praNava kAraNa kArya pratipAdyanu parAtpara

cEtanAcEtana vilakShaNa ananta satkalyANa guNapUrNa

anupamanu upAsita guNa udadhi anaGa ajita ananta

niShkiMcana janapriya nirvikAra nirASraya avyaktA||30||


gOpa BIya BavAndhakArake dIpavaTTige

sakala suKa sadana uparigrahavu enisutippudu harikathAmRutavu

gOpati jagannAtha viThala samIpadali nelesiddu

Baktaranu Apavargara mADuvanu maha duHKa Bayadinda||31||

********* *