ನೋಡಬಲ್ಲಿರೆ ದಿವ್ಯ ಉಡುಪಿ ಕ್ಷೇತ್ರ
ನಾಡಿನೊಳಗಲ್ಲಿ ಪೋದವನೆ ಸತ್ಪಾತ್ರ ಪ.
ಶ್ರೇಷ್ಠ ಸದ್ಗುರು ಚರಣ ಕಮಲಗಳಿಗಭಿನಮಿಸಿ
ಅಷ್ಟು ದೇವತೆಗಳಿಗೆ ಅಭಿವಂದಿಸಿ
ಮುಟ್ಟಿ ಹಿರಿಯರ ಚರಣ ಮಹದಾಜ್ಞೆ ಸ್ವೀಕರಿಸಿ
ಪಟ್ಟ ಬ್ರಹ್ಮನ ಪದಕೆ ಸಿರಿಹರಿಗೆ ಎರಗಿ 1
ಎಷ್ಟು ಜನ್ಮದ ಫಲವೊ ಈ ಯಾತ್ರೆ ಕೈಕೊಳಲು
ಶ್ರೇಷ್ಠ ಶ್ರೀ ಮಧ್ವಮುನಿ ಮತದಿ ಜನಿಸಿ
ದಿಟ್ಟ ವೈಷ್ಣವರಾದ ಭಕ್ತಸಂಗವ ಕೂಡಿ
ಬಿಟ್ಟು ಮನ ಕಲ್ಮಷಗಳೆಲ್ಲ ಮುಂದೋಡಿ2
ಭರತಖಂಡದಿ ಪುಟ್ಟಿ ವಾಯುಮತ ಪೊಂದಿದಕೆ
ಹರುಷದಲಿ ಈ ಯಾತ್ರೆ ಗೈದಲ್ಲದೆ
ಹರಿದು ಪೋಗದು ಜೀವದe್ಞÁನದಂಧತೆಯು
ಪರಮ ಸುe್ಞÁನದಾತನ ನೋಡಬನ್ನಿ 3
ಮಧ್ವರಾಯರ ಕರುಣ ಮುದ್ದು ಕೃಷ್ಣನ ಕತೆಯು
ಸದ್ವೈಷ್ಣವರ ಸಂಗ ಸನ್ಮೋದ ಲಾಭ
ಹೃದ್ವನಜದಲಿಪ್ಪ ಹರಿಯ ಕಾಣಲು ಮಾರ್ಗ
ಗೆದ್ದು ಭವದಬ್ಧಿ ದಾಟುವಿರಿ ನೀವಿನ್ನು 4
ಶ್ರೀ ಪತಿಯು ಬಾಲರೂಪದಿ ಇಲ್ಲಿ ನೆಲಸಿಹನು
ಗೋಪಿಕಾಜನಪ್ರಿಯ ಗೋಪಿಬಾಲ
ಗೋಪಾಲಕೃಷ್ಣವಿಠ್ಠಲನ ನೋಡುವ ಪುಣ್ಯ
ಈ ಪರಮ ಪುರುಷನೇ ತಂದಿತ್ತನೆಂದೂ 5
****