Showing posts with label ಆಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ankita hayavadana. Show all posts
Showing posts with label ಆಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ankita hayavadana. Show all posts

Wednesday, 1 September 2021

ಆಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ankita hayavadana

..

ಆ ಹರಿ ನಾನೆಂಬ ಕುಮತವ ಸುಡು ಸುಡು

ದೇಹಿಯುಣವುಣದವನ ನೋಡುತಲಿಹ ಪ.


ನೀರೊಳು ಬಹುಕಾಲ ಪೊಕ್ಕು ಮುಳುಗಿದವ

ಭಾರದ ಗಿರಿಯನುದ್ಧರಿಸಿರುವ

ಈರೇಳು ಲೋಕದ ಹೊರೆಯನೆಲ್ಲವ ಹೊತ್ತು

ಹಾರುವ ಹಕ್ಕಿಯ ಹೆಗಲನೇರಿ ಬಹ 1


ಜಲಚರ ಸ್ಥಲಚರ ಯಾಚಕನೆನಿಸಿ ಮ-

ತ್ತಲಸದೆ ಮಾತೃವಧೆಯ ಮಾಡಿದ

ಛಲದಿಂದಸುರರ ಕೊಂದು ಸಿಂಧುವ ದಾಟಿ

ಬಲುಗಳ್ಳನೆನಿಸಿ ಮಾವನ ಸೀಳ್ದವ 2


ಸತಿಯರ ವ್ರತವ ಕೆಡಿಸಿ ಕುಮಾರ್ಗವ ತೋರಿ

ಕ್ಷಿತಿಯೊಳು ಯುಗದ ರಾಯರ ಕೊಲ್ಲುವ

ಶ್ರುತಿನಿಷಿದ್ಧಪಥದಿ ನಡೆದು ಪಾಪಕಂಜದೆ

ಯತಿಶ್ರುತಿತತಿಗಳೆಲ್ಲರ ಹೊಂದಿದ 3


ಸಾವಿರ ಫಣದ ಫಣಿಯೊಳ್ಕಟ್ಟುವಡೆದಾಗ

ಹಾವಿನ ಮೈಮೇಲೆ ಒರಗಿದವ

ಜೀವರೆಲ್ಲರ ಕೊಂದು ಧರೆಯನೆಲ್ಲವ ನುಂಗಿ

ಸ್ಥಾವರದೊಂದೆಲೆಯನೆ ಪೊಂದಿಹ 4


ಉರಿವ ಕಿಚ್ಚ ನುಂಗಿ ಜ್ವಲಿಸುವಗ್ನಿಯೊಳು

ಸ್ಥಿರವಾದ ಪ್ರಬಲದೈತ್ಯರ ವೈರವ

ಸಿರಿ ಹಯವದನನ್ನ ದಾಸರ ದಾಸನು

ಚರಣಸೇವಕನೆಂಬ ಮತವೆ ಲೇಸು 5

***