ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ಪೇಳಮ್ಮಯ್ಯ ಪ.
ಗಂಗಾಧರನರ್ಧಾಂಗಿಯಾಗಿ ಶ್ರೀ
ರಂಗ ತಾನು ಇಲ್ಲಿರುತಿಹನಮ್ಮ ಅ.ಪ.
ಶಂಖ ಚಕ್ರ ತ್ರಿಶೂಲವ ಧರಿಸಿಹನ್ಯಾರೇ ಪೇಳಮ್ಮಯ್ಯ
ಶಂಕರ ಸಹಿತಲಿ ನೆಲಸಿಹ ಕುರುಹನು
ಶಂಕಿಸದಂದದಿ ತೋರುವನಮ್ಮ 1
ಈ ಪರಿರೂಪವ ಧರಿಸಲು ಕಾರಣವೇನೇ ಪೇಳಮ್ಮಯ್ಯ
ಪಾಪಿ ಗುಹನ ವರಬಲವನೆ ಕೆಡಹಲು
ಈ ಪರಿರೂಪವ ಧರಿಸಿಹನಮ್ಮ 2
ಇದ್ದರೆ ಈ ಪರಿ ಶುದ್ಧ ಸಾತ್ವಿಕರಿಗೆ ಹ್ಯಾಗೇ ಪೇಳಮ್ಮಯ್ಯ
ಮಧ್ವಮತರಿಗೆ ಮನದಲಿ ಪ್ರೇರಕ
ಶುದ್ಧ e್ಞÁನವನಿತ್ತು ಸಲಹುವನಮ್ಮ 3
ವಿಷ್ಣು ಭಕ್ತರ ಮನಸಿಗೆ ತೋರುವ ಮತಿ ಏನೇ ಪೇಳಮ್ಮಯ್ಯ
ಶ್ರೇಷ್ಠ ವೈಷ್ಣವೊತ್ತಮ ಹರನನು ತಾ
ಬಿಟ್ಟಿರಲಾರದ ಗುಟ್ಟು ಕಾಣಮ್ಮ 4
ಇನಕೋಟಿತೇಜನ ಈ ಪರಿ ಲೀಲೆ ಇದೇನೆ ಪೇಳಮ್ಮಯ್ಯ
ಮನಸಿಗೆ ಪ್ರೇರಕ ಹರನೊಲುಮಿಲ್ಲದೆ
ಹರಿಯು ತಾನು ಒಲಿಯನು ಕಾಣಮ್ಮ 5
ಹರಿಹರ ರೂಪವ ಧರಿಸಿದ ಪರಿ ಹ್ಯಾಗೇ ಪೇಳಮ್ಮಯ್ಯ
ಸುರವಂದ್ಯನು ಪರಿಪರಿರೂಪಾಗ್ವಗೆ ಈ
ಪರಿ ಧರಿಸುವದೊಂದರಿದೇನಮ್ಮ 6
ಹರಿಹರ ಕ್ಷೇತ್ರದಿ ನೆಲಸಿಹ ಸ್ವಾಮಿಯ ಭಜಿಸುವದ್ಹ್ಯಾಗೇ ಪೇಳಮ್ಮಯ್ಯ
ಹರನಂತರ್ಗತ ಹರಿಯೊಲುಮಿಂದಲಿ
ಕರಕರೆ ಭವವನು ಕಳೆಯಬೇಕಮ್ಮ 7
ಶ್ರೀಸತಿ ಪಾರ್ವತಿ ಸಹಿತದಿ ನೆಲಸಿಹನ್ಯಾರೇ ಪೇಳಮ್ಮಯ್ಯ
ದಾಸರನಿಧಿ ಗೋಪಾಲಕೃಷ್ಣವಿಠ್ಠಲ
ಶೇಷಭೂಷಣ ಸಹ ಶ್ರೀನಿವಾಸ ಕಾಣಮ್ಮ 8
****