Showing posts with label ನಿವರ್ತಿ ಸಂಗಮಕ್ಕಾವ vijaya vittala ankita suladi ನಿವರ್ತಿ ಸಂಗಮ ಸುಳಾದಿ NIVARTI SANGAMAKKAAVA NIVARTI SANGAMA SULADI. Show all posts
Showing posts with label ನಿವರ್ತಿ ಸಂಗಮಕ್ಕಾವ vijaya vittala ankita suladi ನಿವರ್ತಿ ಸಂಗಮ ಸುಳಾದಿ NIVARTI SANGAMAKKAAVA NIVARTI SANGAMA SULADI. Show all posts

Sunday 17 January 2021

ನಿವರ್ತಿ ಸಂಗಮಕ್ಕಾವ vijaya vittala ankita suladi ನಿವರ್ತಿ ಸಂಗಮ ಸುಳಾದಿ NIVARTI SANGAMAKKAAVA NIVARTI SANGAMA SULADI


Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ನಿವರ್ತಿ ( ನಿವೃತ್ತಿ ) ಸಂಗಮ ಸುಳಾದಿ 


 ರಾಗ : ಭಾಗೇಶ್ರೀ 


 ಧ್ರುವತಾಳ 


ನಿವರ್ತಿ ಸಂಗಮಕ್ಕಾವನಾದರು ಬಂದು 

ಭಾವ ಶುದ್ಧದಲಿನ್ನು ಸೇವಿಸಲೂ 

ಹ್ಯಾವರಿಕೆ ಸಂಸಾರವಸ್ತಿ ಪರಿಹಾರ 

ಝಾವಾದೊಳಗೆ ಮಾನವನುತ್ತುಮಾಗೆ 

ಜೀವನ ಮುಕ್ತಿ ಸಿದ್ಧವಾವಬಗೆಯಲ್ಲಿ 

ಕಾವ ಕರುಣದಿಂದ ಕಾವನಯ್ಯಾ 

ಈ ವಸುಧೆಯೊಳೀ ಪಾವನ ಕ್ಷೇತ್ರಕ್ಕೆ 

ಸಾವಿರಾಕ್ಷನು ಬಯಸುವನು ವಾಸ 

ದೇವ ಋಷಿ ಗಂಧರ್ವಾವಳಿಗಳು ನಿತ್ಯ ವಾಲ 

ಗವ ಬಿಡದೀ ವಿಧಿ ಮಾಡುವರು 

ವೈವಸ್ಥನಾಮ ನಮ್ಮ ವಿಜಯವಿಠಲ 

ದೇವನು ಮನಮೆಚ್ಚಿ ಫಲವೀವನು ॥೧॥


 ಮಟ್ಟತಾಳ 


ಕಾಶಿಯ ಪುರದಲ್ಲಿ ಭೂಸುರನ ಮಡದಿ 

ಹೇಸದೆ ನಿತ್ಯ ಒಬ್ಬ ಶ್ವಪಚನಲಿ ಪೋಗಿ 

ವಾಸರೋಸರದಲ್ಲಿ ದೋಷರಾಶಿಯ ವಾರ 

ಣಾಸಿಯೊಳಗೆ ಮಿಂದು ನಾಶವಗೈಸುತಿರೆ 

ಭಾಸುರ ಸುರ ಗಂಗೆ ದೋಷಕೆ ಗದಗದಿಸಿ 

ಲೇಶಾದ ಊರ್ಜಿತ ಕಾಸ ನಾಮಕ ವಿಜಯವಿಠಲನ 

ಮೀಸಲ ಮನದಲ್ಲಿ ಪೂಜಿಸಿ ಪಡೆದಳಭಯಾ ॥೨॥


 ತ್ರಿವಿಡಿತಾಳ 


ಶೃತಿವಾಕ್ಯವೆಂದು ಶ್ರೀಪತಿ ಪೇಳಿದನು ತನ್ನ 

ಸುತೆಗೆ ನಿವೃತ್ತಿ ಸಂಗಮಾಖ್ಯಾನ 

ಅತಿ ವೇಗದಲಿ ಸಮ್ಮತವಾಗಿ ಪೋಗಿ ಸ-

ನ್ನುತಿಸಿ ಮಿಂದು ಪಾಪಾಹತಗೈಸುವದೆನಲು 

ಪತಿಕರಿಸಿ ಮಾತು ಹಿತವೆಂದರಿದು ಭಾಗಿ 

ರಥೀ ಬರಲುದ್ಯೋಗ ಮಾಡಿದಳು ಅ-

ಮಿತ ವಿಕ್ರಮ ನಮ್ಮ ವಿಜಯವಿಠಲನ್ನ 

ಸತತ ಹೃದಯದೊಳು ಮಿತಿಯಲ್ಲಿ ನೆನವುತ ॥೩॥


 ಅಟ್ಟತಾಳ 


ಅಂದು ಮಂದಾಕಿನಿ ವಂದಿಸಿತಾ  ವಾಯಿ 

ಸಂದಾದಿಂದಲಿ ನಿತ್ಯ ಗಂಧವಾಹನ ಯೋಗಾ

ವಿಂದಲಿ ಬಿಡದಲೆ ಬಂದು ಶುಚಿಯಾಗಿ 

ಮಿಂದು ಪೋಗುತಲಿರಲ್ಲೊಂದು ದಿವಸ ಮು-

ನೇಂದ್ರಾನು ನೀಕ್ಷಿಸಿ ಸುದರುಶನ ಮಾಡಿ 

ಅಂದಾಗ ನುಡಿಸಿದ ಇಂದು ನಿನ್ನ ರೂಪೇ-

ನೆಂದು ಬೆಸೆಗೊಳಲಂದು ಪೇಳಿ ಪಾಪ-

ದಿಂದ ಮುಕ್ತಳಾದಳೆಂದು ತಿಳಿದು ಭಕ್ತಿ 

ಇಂದಾನು ಸರಿಸಿ ವಂದಿಸಿ ಸದ್ಭಕ್ತಿಲಿ ವಿಜಯವಿಠಲನ 

ಬಾಂಧವನೆಂದು ಮುಂದಣವನು ಕೇಳಿ ॥೪॥


 ಆದಿತಾಳ 


ಯಮನ ತನುಜಾದಿಗಳು ಸಮರದೊಳಗೆ ಭೀ-

ಷಣ ಮೊದಲಾದ ಪರಾಕ್ರಮರ ಸದೆ ಬಡಿದಾ ಉ-

ತ್ತುಮ ಪಾಪವನ್ನು ಉಪಶಮನವನು ಪದಕ್ಕೊಂದು 

ಅಮಲಶುಭ ವಸನ ತಮಕೇರಿ ನೊಳಗದ್ದಿ 

ಶಮದಮೆಯಲ್ಲಿ ಅನುಕ್ರಮದಿರಿಸ ಪುಣ್ಯಕ್ಷೇತ್ರ 

ಅಮಿತದಲ್ಲಿ ಚರಿಸಿ ಅಮಲೋಸನಾಗದಿರೆ 

ನಮಿಸಿ ಪಾಂಡವರು ನಿಗಮದರ್ಥ ತಿಳಿದು 

ಸಮ್ಮುದದಲ್ಲಿ (ಸಂಗಮ) ಮೀಯೆ ದೋಷ 

ತಿಮಿರ ಪೋಯಿತು ಪ-

ರಮ ಶುಭ್ರವಾಗಿ ವಸ್ತ್ರ ಹಿಮಕರನಂತೆ ಪೊಳಿಯೇ 

ಅಮರರು ಎದ್ದು ಕುಸುಮವೃಷ್ಟಿಗರಿಯೆ ಮುನಿ 

ಸಮವಿಷಮರೆಲ್ಲ ಸಂಗಮವ ಕೊಂಡಾಡುತಿರೆ 

ಕ್ಷಮಿಹನಾಮಾ ವಿಜಯವಿಠಲರೇಯನ 

ಸಮಚಿತ್ತದಲ್ಲಿ ನೆನದು ಹಿಮಕರಾನ್ವಯರೊಲಿಯೂ ॥೫॥


 ಜತೆ 


ಸಪ್ತಗಂಗಿಯ ಸ್ನಾನಾ ಗೈಯೆ ಕ್ಲಿಪ್ತಾವರಿತು ಸಿರಿ 

ಆಪ್ತನಾಗುವ ಸಪ್ತ ಜಿಂಹ್ವಾ ವಿಜಯವಿಠಲ ॥೬॥

*********


[10:17 AM, 1/16/2021] Nandini Sripad Blog: 

ನಿವರ್ತಿ ( ನಿವೃತ್ತಿ ) ಸಂಗಮ ಕ್ಷೇತ್ರದ ಮಾಹಿತಿ 

(ತೀರ್ಥಪ್ರಬಂಧ)


ನಿವೃತ್ತಿ ಸಂಗಮೋ ಭಾತಿ ಯತ್ರ ಮರ್ತ್ಯಮುಪಾಶ್ರಿತಾಃ।

ನಿವರ್ತಂತೇಖಿಲಾ ದೋಷಾಃ ಸಂಯುನಕ್ತಿ ಶುಭಾವಲೀಮ್॥

 ಅರ್ಥ  : ಯತ್ರ= ಎಲ್ಲಿ ; ಮರ್ತ್ಯಂ=ಮನುಷ್ಯನನ್ನು ; ಉಪಾಶ್ರಿತಾಃ=ಆಶ್ರಯಿಸಿ ಕೊಂಡಿರುವ ; ಅಖಿಲಾಃ= ಸಕಲ ; ದೋಷಾಃ=ದೋಷಗಳು ; ನಿವರ್ತಂತೇ= ಪರಿಹಾರವಾಗುವವೋ ; ಮತ್ತು(ಯಃ=ಯಾವುದು); ಮರ್ತ್ಯಂ= ಮನುಷ್ಯನನ್ನು ; ಶುಭಾವಲೀಂ=ಶುಭಸಂಚಯವನ್ನು ; ಸಂಯುನಕ್ತಿ = ಕೂಡಿಸಿಕೊಡುವುದೋ; (ಸಃ=ಅಂತಹ) ; ನಿವೃತ್ತಿಸಂಗಮಃ=ನಿವೃತ್ತಿಸಂಗಮವು ; ಭಾತಿ=ಶೋಭಿಸುತ್ತಿದೆ.


ನಿವೃತ್ತಿಸಂಗಮವು ಕೃಷ್ಣವೇಣಿ, ಮಲಾಪಹಾರಿ , ತುಂಗಭದ್ರಾ, ಭೀಮರಥಿ, ತುಂಗಾ, ಭದ್ರಾ ಮತ್ತು ಭವನಾಶಿನೀ ಎಂಬ ಏಳು ನದಿಗಳ ಸಂಗಮ.

(ಕೃಷ್ಣವೇಣೀ ಮಲಾಪಹಾರೀ ಭೀಮರಥೀ ತುಂಗಭದ್ರಾ ಭವನಾಶನಾಖ್ಯ ಸಪ್ತನದೀನಾಂ ಸಂಗಮೋ ನಿವೃತ್ತಿಸಂಗಮ ಇತ್ಯುಚ್ಯತೇ।)


ನಿವೃತ್ತಿಸಂಗಮದಲ್ಲಿ ಪಾಪಗಳ ನಿವೃತ್ತಿಯೂ , ಪುಣ್ಯಗಳ ಪ್ರಾಪ್ತಿಯೂ ಆಗುತ್ತದೆ ಎಂಬ ಭಾವ.

(ತಸ್ಯ ಸಕಲದೋಷನಿವರ್ತಕತ್ವಾತ್ ಶುಭಸಂಗಮಯಿತೃತ್ವಾಚ್ಚ ನಿವೃತ್ತಿ ಸಂಗಮತ್ವಮಿತಿ ಭಾವಃ)


ಪರಿಹಾರ ಮತ್ತು ಪ್ರಾಪ್ತಿ ಎಂಬ ಹೆಸರಿನಲ್ಲಿಯ ಪದಗಳಿಗೆ ಪಾಪ ನಿವೃತ್ತಿ ಮತ್ತು ಪುಣ್ಯ ಸಂಗಮ  ಎಂಬ ಅರ್ಥವನ್ನು ತೀರ ಸಹಜ ರೀತಿಯಲ್ಲಿ ವರ್ಣಿಸುವ ಇಲ್ಲಿ ಕವಿ ಪ್ರತಿಭೆಯು ಅತ್ಯಪೂರ್ವವಾದುದು.


ನಿವೃತ್ತಿಸಂಗಮವು ಪ್ರಧಾನವಾಗಿ ಕೃಷ್ಣ ಮತ್ತು ತುಂಗಭದ್ರಾ ನದಿಗಳು ಸಂಗಮವಾಗುವ ಸ್ಥಳ. ಇದು ಕರ್ನೂಲಿನಿಂದ 30 ಕಿ.ಮೀ ದೂರದಲ್ಲಿರುವ ಒಂದು ದುರ್ಗಮ ಸ್ಥಳ. ಈಗ ಶ್ರೀಶೈಲದ ಅಣೆಕಟ್ಟಿನ ನಿರ್ಮಾಣದಿಂದಾಗಿ ನದಿಯಲ್ಲಿ ಮುಳುಗಿ ಹೋಗಿದೆ ; ಬೇಸಿಗೆಯಲ್ಲಿ ಮಾತ್ರ ಇದರ ಸ್ವಲ್ಪ ಭಾಗ ಗೋಚರಿಸುತ್ತದೆ ; ಇದು ಶ್ರೀ ಉತ್ತರಾದಿಮಠದ ಶ್ರೀ ಸತ್ಯನಿಧಿತೀರ್ಥರ ಮೂಲಬೃಂದಾವನದ ಸ್ಥಳವು ಆಗಿತ್ತು ; ನೀರಿನಲ್ಲಿ ನಿವೃತ್ತಿಸಂಗಮವು ಮುಳುಗುವ ಮುನ್ನ ಅಲ್ಲಿಯ ಆ ಮೂಲಬೃಂದಾವನವನ್ನು ಕರ್ನೂಲಿನ ಉತ್ತರಾದಿ ಮಠದ ಆವರಣದಲ್ಲಿ ಅಲ್ಲಿಯ ಸಮಗ್ರ ಅವಶೇಷಗಳ ಸಮೇತ ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ಸ್ಥಳಾಂತರಿಸಿ ಪುನಃ ಪ್ರತಿಷ್ಟಾಪಿಸಿರುವರು.


🙏ಶ್ರೀಕೃಷ್ಣಾರ್ಪಣಮಸ್ತು🙏

🙏ಶ್ರೀಮಧ್ವೇಶಾರ್ಪಣಮಸ್ತು🙏

******