Audio by Mrs. Nandini Sripad
ರಾಗ ಪಂತುವರಾಳಿ
ಧ್ರುವತಾಳ
ಒಪ್ಪುವ ಮಾನಿಸ ದೇಹಂಗಳೆಲ್ಲ
ಬ್ರಹ್ಮಪುರಕೊಂಬತ್ತು ದ್ವಾರಗಡಾ
ಎಪ್ಪತ್ತೆರಡು ಸಾಸಿರ ನಾಡಿಯೊಳು
ಇಪ್ಪವು ಗಡಾ ಬೀದಿ ಬೀದಿಯಂತೆ
ಅಪ್ರತಿ ಮಧ್ಯೇಕ ನಾಡಿ ರಾಜ ಬೀದಿ ಷ -
ಟ್ಪದ್ಮವದರೊಳು ಬಗೆ ಬಗೆಯ
ಸರ್ಪಶಯನನೋಲಗ ಶಾಲೆ ಗಡಾ ಸೂರ್ಯ-
ನ ಪ್ರಭೆ ಪಂಜು ಬೆಳಕು ಗಡಾ
ತಪ್ಪದೆ ಸುಖವೆಂಬೊ ಸಕ್ಕರೆ ಹೇರು
ಒಪ್ಪದು ಗಡಾ ಗಡಾ ದ್ವಾರದಲ್ಲಿ
ಅಪ್ರತಿ ಮೊದಲಾದ ದೇವಕ್ಕಳೆಲ್ಲ ಬ್ರ -
ಹ್ಮಪಾಲಕರಾದರು ಪಟ್ಟಣ ಸ್ವಾಮಿಗೆ
ಅರ್ಪಿಸುವರು ಗಡಾ ಹಯವದನನಿಗೆ ಅವ -
ನಪ್ಪಣೆಯಲ್ಲಿ ತಮಗಲ್ಪ ಗಡಾ
ಅಪ್ರೀಯವಾದ ದುಃಖಗಳೆಂಬುಳ್ಳಿಯ ಹೇರು
ಅಲ್ಪಸಾರ ಜೀವದಂಗಡಿಯಲ್ಲಿ ಗಡಾ ॥ 1 ॥
ಮಠ್ಯತಾಳ
ಬೀದಿ ಬೀದಿಯಲ್ಲಿ ಇರಳು ಹಗಲು
ಕಾದುಕೊಂಡಿಹರು ತಳವಾರರೈವರು
ಮಾಧವಗತಿಪ್ರೀಯರಿವರೆಂದೆಂದು
ಹಾದಿಯ ಕೊಡರು ದೈತ್ಯ ಚೋರರಿಗೆ
ಅಧಿಕಾರಿಕ ಮಂಡಲಕ್ಕಗ್ರೇಸರರು
ಈ ಧರೆಯೊಳು ಹಯವದನ ನಾಳುಗಳು
ಮಾಧವಗತಿಪ್ರೀಯರಿವರೆಂದೆಂದೂ ॥ 2 ॥
ರೂಪಕತಾಳ
ಭಿಕ್ಷುಕ ಮೊದಲಾದ ಎಲ್ಲ ಪಟ್ಟಣದೊಳು
ಪೊಕ್ಕು ಬೇಡುವರು ಬೀದಿ ಬೀದಿಯಲ್ಲಿ
ಅಕ್ಕಟಾ ಈ ಜೀವ ಒಂದೇ ನಾಡಿ ವಾಸ
ರಕ್ಷಿಸಿ ಕೊಂಬುವದಲ್ಲಿಹ ಮೂವರು
ಪಕ್ಷಿವಾಹನಗಲ್ಲದೀ ದೇಹ ದೊರೆತನ
ದುಃಖ ಜೀವರಿಗೆಂತಪ್ಪದೊ ಹಯವದನ ॥ 3 ॥
ಝಂಪೆತಾಳ
ಇಂತಿ ಪಟ್ಟಣ ನಾಡಿ ಒಂದೇ ಎಂಬ
ಭ್ರಾಂತಮಯ ವಾದೀ ಶರೆಯ ಮನೆಯೊಳು
ಅಂತವಿಲ್ಲದ ಜೀವರಾಸಿಯಲ್ಲಿ ಪೊಗಿಸಿ
ಚಿಂತಿಗೊಳಗು ಮಾಡಿ ಕರ್ಮಪಾಶದಿ ಕಟ್ಟಿ
ಸಂತತವಾಳುತಿಹ ಹರಿಪುರವಿದು
ಸಂತೆ ಜೀವರಿಗೆ ಎಂತಪ್ಪೊದೆ ಹಯವದನ ॥ 4 ॥
ತ್ರಿಪುಟತಾಳ
ತಾಯಿ ಪೊಟ್ಟಿಯೊಳಿರಲು ದೇಹವಾರಿಚ್ಛೆ
ಬಾಯಿಬಿಟ್ಟಳುವಾಗ ದೇಹವಾರಿಚ್ಛೆ್ಛ
ಕಾಯ ತನ್ನಗಲುತಿಹ ದೇಹವಾರಿಚ್ಛೆ
ರಾಯ ಬಿಟ್ಟಿ ಹಿಡಿಯೆ ದೇಹವಾರಿಚ್ಛೆ
ಪಾಯಿಸವ ಸುರಿವಾಗ ಹೇಯವಾರಿಚ್ಛೆ
ಶ್ರೀಯರಸ ಹಯವದನ ಹರಿಪುರದರಸು ॥ 5 ॥
ಧ್ರುವತಾಳ
ಅನಿಲಾನು ಅನಳಾನು ಅಣುತೃಣವೆಂದು ಮುನ್ನ
ಕೆಣಕಲಾರದೆ ದುರ್ಮದದಿ ತಿರುಗಿದರೇನು
ಇನಿತು ತತ್ವದ ಜೀವರನು ಮುನ್ನೆ ಹರಿ ತಾನು
ಅನೇಕ ರೂಪದಿ ಪೊಕ್ಕು ನಡೆಸಿ ಕೊಂಬೆ ನೆನಲು
ಅನಿಮಿಷರಿಗಲ್ಲದೆ ಘನತೆ ನರರಿಗುಂಟೆ
ಗುಣನಿಧಿ ಹಯವದನನಾಧೀನ ಜಗವೆಲ್ಲ ॥ 6 ॥
ಅಟ್ಟತಾಳ
ದೇಹ ಬಂಧನವ ಬಿಡಿಸುವರೆ ಹರಿಯಾಕೆ
ದೇಹದಾತ ನೀನಾದಡೆ ಮರುಳೆ
ದೇಹಕೆ ಕ್ಲೇಶ ಸಂಕಟವಿದ್ಯಾತಕೆ
ದೇಹದಾತ ಶ್ರೀಹಯವದನನೆ ದೇಹಿಗೆ
ದೇಹಾ ದೇಹದ ಯೋಗ ವಿಯೋಗಕಧಿಪತಿಯೆ ॥ 7 ॥
ಆದಿತಾಳ
ನಿನ್ನದಂತಿಹ ಇಂದ್ರಿಯ
ನಿನ್ನದಂತಿಂದ್ರಿಯ ದರಸುಗಳಿರಲು
ನಿನ್ನದಂತಸುಗಳ ವಾರ್ತನೆ
ನಿನ್ನದಂತೆ ದೇಹ ವಿಚಾರ ತನುವಿದಾರದು
ನಿನ್ನದಂತೆ ದೇಹ ನೀ ನಿದ್ರೆಗೈಯು
ಮನ್ನದಿ ನಂಬು ಜೀವ ಸಿರಿಹಯವದನಾ ॥ 8 ॥
ಜತೆ
ದೇಹಿ ಅರಸು ನೀನೆ ದೇಹದರಸು ನೀನೆ
ಶ್ರೀಹಯವದನನೆ ಸರ್ವರರಸು ನೀನೆ ॥
***********