Showing posts with label ನರಹರಿಯ ಗುಣ ಕೊಂಡಾಡುವುದೇ ಲೇಸು hanumesha vittala. Show all posts
Showing posts with label ನರಹರಿಯ ಗುಣ ಕೊಂಡಾಡುವುದೇ ಲೇಸು hanumesha vittala. Show all posts

Tuesday, 1 June 2021

ನರಹರಿಯ ಗುಣ ಕೊಂಡಾಡುವುದೇ ಲೇಸು ankita hanumesha vittala

ನರಹರಿಯ ಗುಣ ಕೊಂಡಾಡುವುದೇ ಲೇಸು

ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ


ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ

ಒಳ್ಳೆಯವನೆನಿಸುವ ಬಡತನವೇ ಲೇಸು

ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ

ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1


ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ

ಸಾಲಿಲ್ಲದ ಮನೆಯಲ್ಲಿಹುದೇ ಲೇಸು

ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ

ಲೋಲನಾ ಪಾದದಲ್ಲಿರುವುದೇ ಲೇಸು 2


ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ

ತನ್ನವಳ ಕೂಡ ಬಡಿದಾಡುವುದೇ ಲೇಸು

ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ

ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3


ತಾನು ಮಾಡಿದೆನೆಂಬುದಕಿಂತ ಹರಿಯ

ಆಧೀನವೆಂದರಿಯುವುದು ಪರಮ ಲೇಸು

ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ

ಜ್ಞಾನಿಯಾದವನ ಸಲಹುವುದೇ ಲೇಸು 4


ದುಷ್ಟ ಮನುಜನು ಮಾಡುವ ಕೃಪೆಗಿಂತಲೂ

ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು

ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ

ವಿಠಲನ ಧ್ಯಾನದ ಸುಖವೇ ಲೇಸು 5

****