ಪಾಲಿಸೊ ಶ್ರೀನಿವಾಸ ಜಗದೀಶ ಪ
ಮೇಲುಗಿರೀಶ ಹೃತ್ಕುಮುದನಿವಾಸ
ಸತೀಶ ನೀನೆ ಅವಿನಾಶನೆ ಅನಿಶ ಅ.ಪ
ಅನಿಮಿತ್ತ ಬಂಧು ನೀ ನಿನ್ಹೊರತು ಅನ್ಯರುಂಟೇ
ಅನಪೇಕ್ಷನು ನೀ ದೀನರಕ್ಷನೆ
ನಾನೇನರ್ಪಿಸಬಲ್ಲೆ ನೀ ಬಲ್ಲೆ ಅನುದಿನ
ಮನೋವಾಚಕಾಯದಿ ನಾನೆಸಗುವುದು ಬಲ್ಲೆ ಅಲ್ಲಲ್ಲೇ
ಘನಮಹಿಮನೆ ಎನ್ನ ಮನದಲ್ಲಿ ಅನುದಿನ
ನಿನ್ನ ನೆನೆಯುವುದನೆ ಇತ್ತು ಕೊನೆಗಾಣಿಸು ಇನ್ನು 1
ಸತ್ಯಸಂಕಲ್ಪ ನೀ ನಿತ್ಯನೂತನಪ್ರಭುವೇ
ಅತ್ಯಧಿಕದಿ ಭಕ್ತೋತ್ತಮರು
ನಿತ್ಯ ಸೇವಿಸುತಿಹರೋ ಅವರ ಭೃತ್ಯನೆನಿಪ ಸಂ-
ಪತ್ತನಿತ್ತು ಆಪತ್ತು ಹರಿಸಿ ಭಕ್ತಿಯ ನೀಡಯ್ಯ
ಮತ್ತೆ ಕರ್ಮ ಬೆನ್ಹತ್ತಿ ಹತ್ತಿ ಆಸೆ
ಪೊತ್ತು ಕೊನೆಗೆ ನಾ ಉನ್ಮತ್ತನಾದೆ 2
ಪ್ರಣವಸ್ತಗೆ ದೇವಾ ನೀ ಪ್ರಣತ ಕಾಮದ ಕಾವಾ
ಪ್ರಣತ ಜನರ ಮುಖ್ಯಪ್ರಾಣಾಂತರ್ಗತ
ಫಣಿರಾಜಶಯ್ಯ ಹೇ ಜೀಯ್ಯ ಗುಣಮಣಿ ಶ್ರೀ ವೇಂಕಟೇಶ ಕ-
ರುಣಾಕರ ಇನ್ನು ನಿನಗೆಣೆಯ ದೊರೆಯೆ
ಮಣಿದು ಬೇಡುವೆ ನಿನ್ನ ದಣಿಸಲಾಗದು ಇನ್ನೂ
ಧಣಿಯು ನೀ ಉರಗಾದ್ರಿವಾಸ ವಿಠಲ 3
***