ಗುರುನಿಕರ ಸಂಸೇವ್ಯ ಸತಿಪತಿಯ ಬಿಂಬ ಪ
ಪರಮ ಪಾವನ ನಾಮ ಪಾಹಿ ಪಾಹೀ ಎನ್ನ ಅ.ಪ
ಪತಿತಪಾವನ ಪರಮಗತಿ ನೀನು ಸರ್ವಸ್ವ
ಸತತ ತತ್ವದ ಪಾಲಿಸು ಎನ್ನ ಶಿರದಿ
ಹಿತದಿಂದ ನೆಲಸಿರಲಿ ಹರಿದಾಸ್ಯ ಕೊಟ್ಟೆನಗೆ
ರತಿ ಬಿಡಿಸು ವಿಷಯದಲಿ ಮನ ನಿನ್ನ ಬಿಡದಿರಲಿ 1
ನಿನ್ನ ಕ್ರಿಯ ಗುಣರೂಪ ನಿನ್ನ ತಿಳಿಯದೆ ನಡೆದೆ
ಘನ್ನಭಾವವ ನೀಡು ಪೂರ್ಣದಯದಿ
ಅನ್ಯವೆಂದಿಗು ಒಲ್ಲೆ ಅನ್ನನೀಯನಗಾಗು
ಪೂರ್ಣಪ್ರಜ್ಞರ ದೈವ ಪನ್ನಗಾದ್ರಿನಿಲಯ 2
ಲಕ್ಷ್ಮೀನಿಲಯ ಜಯೇಶವಿಠಲನೆ ವಿಧಿವಂದ್ಯ
ಲಕ್ಷ್ಯನಿನ್ನಲಿ ನೆಲಸು ಸತತ ಬಿಡದೆ
ಪೃಷ್ಯೇಶ ತವ ಕರುಣ ಬಂದು ಎನ್ನೊಳು ಬೀಳೆ
ತಕ್ಷಣವೆ ಭವ ಹಿಂಗಿ ಮೋಕ್ಷಸುಖ ಕರಗತವೊ 3
***