ಅವತಾರತ್ರಯ ಸ್ಮರಣ ಕೀರ್ತನೆ ಸುಗುಣವಿಠಲ
ಸತತ ಕಾಯೋ ಎನ್ನ ಹನುಮ ಭೀಮ ಮಧ್ವ ಗುರುವೇ ||ಪ||
ಪತಿತರ ಪಾವನ ಗೈವ ಸದ್ಗುರುವೇ ||ಅ.ಪ||
ಧಾರುಣಿಯೊಳು ಕೇಸರಿ ತನಯನು ನೀನಾಗಿ |
ರಾಮರ ಸೇವೆಯ ಮಾಡಿ ನಿರುತಾ ||
ಬಿಂಕದಲಿ ಸಾಗರವಾ ದಾಟಿ ಜಾನಕಿಗೆ ಮುದ್ರಿಕೆಯಿತ್ತು |
ವಾರ್ತೆಯ ನರುಹಿದಂಥ ಹನುಮಂತಾ ||೧||
ಧರ್ಮಕ್ಷೇತ್ರದಿ ನೀನು ಉಗ್ರ ಪ್ರತಾಪವ ತೋರಿ |
ಶ್ರೀಕೃಷ್ಣನ ಸೇವಿಸಿ, ಭಾಗವತಶಿರೋರತ್ನ ನೆನಿಸಿ||
ದ್ರೌಪದಿದೇವಿಯ ಮನದ್ಹರಿಕೆ ಪೂರೈಸಿ ,|
ಕುಂಭಿಣಿಯೊಳು ಮೆರೆದ ಭೀಮ ಬಲವಂತ || ೨||
ಕಲಿಯುಗದಿ ಅದ್ವೈತಮತವ ವಿದ್ವಂಸನ ಮಾಡಿ |
ಶುದ್ಧ ತಾತ್ಪರ್ಯ ಪದ್ದತಿಯ ತೋರಿ .||
ವೇದವ್ಯಾಸರ ಪೂಜಿಸಿ ಪಂಚಿಕೆಗಳ ರಚಿಸಿ |
ಸುಜನರಿಗೆ ಸನ್ಮಾರ್ಗವ ತೋರಿದ ಪೂರ್ಣಪ್ರಜ್ಞನೆ ಆನಂದತೀರ್ಥ ||೩||
ಅವತಾರತ್ರಯಗಳಿಂದ ಅಜಪಿತನ ಸೇವಿಸಿ|
ಜಗಕೆ ತ್ರಾಣನೆನಿಸಿದ ಮುಖ್ಯಪ್ರಾಣ||
ಕುಂದು ಎಣಿಸದೆ ಎಮ್ಮನು ಕಾಯೋ ಸತತ ನೀನು |
ಕಂದರ್ಪಪಿತ ಸುಗುಣವಿಠಲನ ನಿಜದೂತ||೪||
********