Showing posts with label ವಾಸುದೇವ ನಿನ್ನ ಮರ್ಮಕರ್ಮಂಗಳ rangavittala. Show all posts
Showing posts with label ವಾಸುದೇವ ನಿನ್ನ ಮರ್ಮಕರ್ಮಂಗಳ rangavittala. Show all posts

Wednesday, 11 December 2019

ವಾಸುದೇವ ನಿನ್ನ ಮರ್ಮಕರ್ಮಂಗಳ ankita rangavittala

ಮುಖಾರಿ ರಾಗ ಅಟತಾಳ

ವಾಸುದೇವ ನಿನ್ನ ಮರ್ಮಕರ್ಮಂಗಳ
ದೇಶದೇಶದಲ್ಲಿ ಪ್ರಕಟಿಸಲೊ ||ಪ||
ಬೇಸರದೆ ಎನ್ನ ಹೃದಯಕಮಲದಲ್ಲಿ
ವಾಸವಾಗಿ ಸುಮ್ಮನಿದ್ದೀಯೊ ||ಅ.ಪ||

ತರಳತನದಲಿದ್ದು ದುರುಳನಾಗಿ ಬಂದು
ಒರಳಿಗೆ ಕಟ್ಟಿಸಿಕೊಂಡುದನು
ತುರುವ ಕಾಯಲಿ ಪೋಗಿ ಕಲ್ಲಿಯೋಗರವನು
ಗೊಲ್ಲರ ಕೂಡೆ ನೀ ಉಂಡುದನು
ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ
ಅರಿಯದಂತೆ ಕದ್ದು ಮೆದ್ದುದನು
ಕೆರಳಿಸಿದೆಯಾದರೆ ಒದರುವೆ ಎಲೊ ನರ-
ಹರಿ ಎನ್ನ ಬಾಯಿಗೆ ಬಂದುದನು ||೧||

ಕಟ್ಟಿ ಕರೆವ ಏಳುದಿನದ ಮಳೆಗೆ ವೋಗಿ
ಬೆಟ್ಟವ ಪೊತ್ತದ್ದು ಹೇಳಲೊ
ಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿ
ಹೊಟ್ಟೆಯ ಹೊರೆದದ್ದು ಹೇಳಲೊ
ದುಷ್ಟ ಹಾವಿನ ಹೆಡೆಯನು ತುಳಿದಾಡಿದ
ದುಷ್ಟತನವನು ಹೇಳಲೊ
ನೆಟ್ಟುನೆ ಅಂಬರಕೆತ್ತಿದನ ಹೊಯ್ದು
ಹಿಟ್ಟು ಕುಟ್ಟಿಟ್ಟುದ ಹೇಳಲೊ ||೨||

ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟ
ಬೆಡಗತನವನಿಲ್ಲಿ ಹೇಳಲೊ
ಹಿಡಿಯಬಂದ ಕಾಲಯವನಗಂಜಿ ಕಲ್ಲ
ಪಡೆಯ ಹೊಕ್ಕಿದ್ದು ಹೇಳಲೊ
ಮಡಿದ ಮಗನ ಗುರುವಿಗೆ ಕೊಡಬೇಕೆಂಬ
ಸಡಗರತನವಿಲ್ಲಿ ಹೇಳಲೊ
ಮಡದಿಮಾತಿಗೆ ಪೋಗಿ ನೀ ಪಾರಿಜಾತವ
ತಡೆಯದೆ ತಂದದ್ದು ಹೇಳಲೊ ||೩||

ಮೌನಗೌರಿಯ ನೋನ (?) ಬಂದ ಹೆಂಗಳನೆಲ್ಲ
ಮಾನವ ಕೊಂಡದ್ದು ಹೇಳಲೊ
ತಾನಾಗಿ ಮೊಲೆಯನೂಡಿಸಬಂದವಳನ್ನು
ಪ್ರಾಣವ ಕೊಂಡದ್ದು ಹೇಳಲೊ
ಕಾನನದೊಳು ತುರುವಿಂಡುಗಳನು ಕಾಯ್ದ
ಹೀನತನವನಿಲ್ಲಿ ಹೇಳಲೊ
ಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯ
ಹಾನಿಯ ಮಾಡಿದ್ದು ಹೇಳಲೊ ||೪||

ಧರಣಿಮಗನ ಕೊಂದು ತರುಣಿಯರನು ತಂದ
ದುರುಳತನವನಿಲ್ಲಿ ಹೇಳಲೊ
ಜರೆಯಮಗನಿಗಂಜಿ ಪುರವ ಬಿಟ್ಟು ಹೋಗಿ
ಶರಧಿಯ ಪೊಕ್ಕದ್ದು ಹೇಳಲೊ
ಧರೆಯೊಳಗಧಿಕ ಶ್ರೀರಂಗಪಟ್ಟಣದಲ್ಲಿ
ಸ್ಥಿರವಾಗಿ ನಿಂತದ್ದು ಹೇಳಲೊ
ಶರಣಾಗತರ ಕಾವ ರಂಗವಿಠಲನ್ನೆ
ಪರಮ ದಯಾಳೆಂದು ಹೇಳಲೊ ||೫||
********