Showing posts with label ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ gopalakrishna vittala. Show all posts
Showing posts with label ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ gopalakrishna vittala. Show all posts

Monday, 2 August 2021

ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ankita gopalakrishna vittala

ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ

ಭೋಗ ನರಸಿಂಹಸ್ವಾಮಿ ಪ.


ನಾಗಶಯನನೆ ದೇವ ಕರಿಗಿರಿ ನಿಲಯ ಹರಿ

ಯೋಗಿ ಶ್ರೀಗುರು ಹೃದಯ ನಿಲಯ ಅ.ಪ.


ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ

ಪರಿಪರೀ ಸೇವೆಯನು ಭಕ್ತರಿಂ ಕೊಳುತ

ಪರಮಾತ್ಮ ಪಂಚಾಮೃತದ ಅಭಿಷೇಕವನು

ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1

ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು

ಪರಿಪರಿಯ ಪೂಜೆ ಅಲಂಕಾರವನೆ ಮಾಡಿ

ತರತರದ ಷಡ್ರಸವ ಭೋಜನವಗೈಸುತಲಿ

ವರ ಮಂಗಳಾರತಿಯನೆತ್ತಿದುದ ಕಂಡೆ 2

ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ

ಮನ್ನಿಸಿ ದರುಶನವ ಇನ್ನು ಕರುಣಿಸಿದೆ

ನಿನ್ನ ಸಮರಿನ್ಯಾರೊ ಪನ್ನಗಶಯನನೆ

ಧನ್ಯರೋ ನಿನ್ನ ಪದವ ನಂಬಿದವರು3

ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ

ಅಂತರಂಗದಿ ನಿನ್ನ ಧ್ಯಾನಿಸುವರ

ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ

ಅಂತರಂಗವ ತಿಳಿದು ಸಂತೈಸೊ ಎನ್ನ 4

ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು

ಕಾಪಾಡಿದೆಯೊ ಪರಮಪ್ರೇಮದಿಂದ

ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ

ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5

****