ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆ ಹರಿ ಇದ್ದಾನೆ | ಸಿಕ್ಕುವಾ ಸದ್ಗುರು ಕರುಣದಲಿ P
ಆದಿ ಅನಾದಿಯ ಹಾದಿ ವಿಡಿದು | ಸಾಧಿಸಿ ನೋಡಿರಯ್ಯ ಸಜ್ಜನರು | ವೇದಾಂತದ ಸುಸಾರವಿದು | ಭೇದಿಸಿದವರಿಗೆ ಭಿನ್ನವಿಲ್ಲ 1
ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ | ಚೆನ್ನಾಗಿ ನೋಡುವದು ಉನ್ಮನದಲಿ | ಇನ್ನೊಬ್ಬರಿಗೆ ತಾ ತಿಳಿಯದು | ಧನ್ಯವಾದರು ಅನುಭವಿಗಳು2 ಸೆರಗು ಸಿಲ್ಕಲಿಲ್ಲ ನಾಲ್ಕರಲಿ | ಅರಹು ಆಗಲಿಲ್ಲ ಆರರಲಿ | ಪೂರಿಸಲಿಲ್ಲ ಭಾವ ಮೂರಾಗಲಿ | ತೋರಿದ ಸದ್ಗುರು ಎನ್ನೊಳಗೆ 3
ಮೋಸಹೋಯಿತು ಜಗ ವೇಷದಲಿ | ವಾಸತಿಳಿಯದೆ ವಾಸುದೇವನ | ಕಾಸಿನ ಆಶೆಗೆ ದಾಸರಾಗಿ | ಘಾಸಿ ಆಯಿತು ಭವಪಾಶದಲಿ 4
ಸಣ್ಣದೊಡ್ಡದರೊಳು ಸಾಕ್ಷವಾಗಿ | ಬಣ್ಣ ಬಣ್ಣದಲಿ ತಾ ಭಾಸುತಿಹ್ಯ | ಕಣ್ಣಾರೆ ಕಂಡು ಗುರು ಕೃಪೆಯಿಂದ | ಧನ್ಯವಾದ ಮೂಢ ಮಹಿಪತಿಯು 5
***