ರಾಗ – ಸಾರಂಗ ತಾಳ – ಆದಿತಾಳ
ಇಷ್ಟು ದಿನ ಭೂವೈಕುಂಠ ಎಷ್ಟು ದೂರವೆನುತಿದ್ದೆ
ದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ || ಪ ||
ಚಿತ್ರಬೀದಿ ವಿರಾಜಿತ ಚಾರುನೂಪುರಶೋಭಿತ
ಸಪ್ತ ಪ್ರಕಾರ ಸಂಪೃಷ್ಟ ಉತ್ತಮ ಶ್ರೀರಂಗಶಾಯಿ || ೧ ||
ಹೇಮಕವಾಟಗಳಿಂದ ಹೇಮಸೋಪಾನಗಳಲ್ಲಿ
ಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ || ೨ ||
ಚತುರ ವೇದಗಳಲ್ಲಿ ಚತುರಮೂರ್ತಿ ವೀರ್ಯದಲ್ಲಿ
ಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ || ೩ ||
ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯ
ಕುಂಕುಮಾಂಕಿತಚರಣ ಪಂಕಜಾಕ್ಷ ಶ್ರೀರಂಗೇಶ || ೪ ||
ಪುಣ್ಯ ವಿದ್ಯಾ ದಯಾನಿಧೆ ಪನ್ನಗಶಾಯಿ ಶೋಭಿತ
ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀಹಯವದನ || ೫ |
********