..
ನಂದ ತೀರಥರಾಯ ಅಸ್ಮದ್ಗುರೋರ್ಗುರು
ನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ ಪ
ನಂದನಂದನ ಪಾದ ಕಮಲಕೆ
ನಂದ ಮಧುಕರ ನಂದದಲಿ ನಿಜ
ಮಂದ ಜನರಿಗೆ ನಂದ ಕೊಡುವಾ
ನಂದ ಮೂರ್ತಿ ಆನಂದಕಾರಿಯೆ ಅ.ಪ
ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ
ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ -
ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ
ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ
ಶುದ್ಧ ಶ್ರೀ ಹರಿಮತದ ಶುಭ
ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ
ಸಿದ್ಧಗಣಕಧಿನಾಥನೆಂದೂ ಪ್ರ -
ಸಿದ್ಧಗೈಸಿದಿ ಶುದ್ಧ ಮೂರುತಿ 1
ಬದರಿಕಾಶ್ರಮವನ್ನು ಐದಿದ್ಯೊ ಮುದದಿ
ಪದುಮನಾಭನನ್ನು ಬಲಗೈಸಿ ನಿನ್ನ
ಬದಿಗ ಜನರಿಗಿನ್ನೂ ಸುವಾಕ್ಯ
ದಿಂದಲಿ ಪೇಳಿದದು ನಿಜ
ಪದುಮನಾಭನೆ ಪರಮದೈವನು
ಪದುಮೆ ಮೊದಲು ಬ್ರಹ್ಮಾಂತ ಜೀವರ
ಪದದಿ ಗುಣದ ತಾರತಮ್ಯವ
ಹೃದಯ ಮಂದಿರದಲ್ಲಿ ಪೇಳಿದ 2
ಘನ್ನಮಹಿಮನೆ ಎನ್ನಮನ ವಚನ ಕಾಯದಿ
ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ
ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ
ನಿನ್ನ ಜನರೀಗಿನ್ನ ನೀಡಯ್ಯ ಮುನ್ನ
ನಿನ್ನ ಒಳಗೆ ನಿರುತ ಇರುವ
ಘನ್ನ ಗುರುಜಗನ್ನಾಥವಿಠಲನ
ಎನ್ನ ಮನದಲಿ ತೋರಿಸೆಂದು
ನಿನ್ನ ಪದಯುಗವನ್ನು ಭಜಿಸಿದೆ 3
***