Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿ ಸ್ವತಂತ್ರ ಸುಳಾದಿ
( ಶ್ರೀಹರಿಯ ಗುಣರೂಪ ಕ್ರಿಯಾದಿಗಳ ವರ್ಣನೆ )
ರಾಗ ಸಾರಂಗ ಧ್ರುವತಾಳ
ಒಂದು ನಿನ್ನ ಮೂರುತಿ ಬೊಮ್ಮಾಂಡದಿ ಇಪ್ಪುದು
ಒಂದು ನಿನ್ನ ಮೂರುತಿ ಬೊಮ್ಮಾಂಡ ಸುತ್ತಿಹ್ಯದು
ಒಂದು ನಿನ್ನ ಮೂರುತಿ ಬೊಮ್ಮಾಂಡದ ಹೊರಗೆ
ಗಂಧಾ ಪೂಸಿದಂತೆ ಅವ್ಯಾಕೃತ ವ್ಯಾಪಿಸಿ
ಇಂದಿರೆ ಅಭಿಮಾನಿ ಆತತ್ತ್ರಾ ನಿತ್ಯಾವಸ್ತ
ಎಂದಿಗೆ ಅಲ್ಲಿ ಬಿಡದೆ ಇಪ್ಪಾ ಮಹಾಮೂರುತಿ
ಒಂದೆ ನಿನ್ನ ಮೂರುತಿ ಮೂಲಾವತಾರ ಐಕ್ಯಾ
ಒಂದೇ ಬಲ ಜ್ಞಾನ ಆನಂದ ನಿರ್ದೋಷ
ಎಂದಿಗೂ ಜೀವ ಜಡದಿಂದ ಅಗಲದೇ ಇಪ್ಪ
ಸುಂದರವಿಗ್ರಹ ಗೋಪಾಲವಿಠ್ಠಲ
ನಿಂದು ಭಕುತಾರಲ್ಲಿ ಇಪ್ಪ ಕರುಣಿ ॥ 1 ॥
ಮಠ್ಯತಾಳ
ಸರ್ವಾಪರೋಕ್ಷಿ ಸರ್ವಜ್ಞಾನೆ
ಸರ್ವಾನಂದಾ ಗುಣಗಣ ಪರಿಪೂರ್ಣ
ಸರ್ವೋತ್ತಮಾ ಸಾಕ್ಷಾತಕಾರಾ
ಸರ್ವದಿ ವ್ಯಾಪ್ತಾ ಸರ್ವ ಚೇಷ್ಟಾ
ನಿರ್ವಿಕಾರಾ ನಿತ್ಯ ತೃಪ್ತಾ
ಗರ್ವಹರ ಗರುಡಗಮನಾ
ನಿರ್ವಧಿಕ ಅಂತರ್ಯಾಮಿ ರೂಪಾ
ಘನದಲ್ಲಿ ಅಣು ಅಡಕ ಮೂಲರೂಪದಿ
ಅಣು ಘನ ಕಾರ್ಯಗಳು ನಿನ್ನ ಭಕುತರಿಗಾಗಿ
ದಿನ ದಿನಗಳಲ್ಲಿ ಮಾಡುತಲಿ ಇಪ್ಪೆ
ಘನ ಅಣು ಪರಿಪೂರ್ಣ ಗೋಪಾಲವಿಠ್ಠಲಾ
ನಿನಗಲ್ಲಾದೀ ಶಕುತಿ ಭಣಗುಗಳಿಗುಂಟೆ ॥ 2 ॥
ತ್ರಿಪುಟತಾಳ
ನೀಷೇಧಾ ವೀಶೇಷ ವಿಭಾಗ ಮಾಡಲಾಗಿ
ನೀಷೇಧಾ ವಿಶೇಷ ವಸ್ತು ನೀನೆ
ವೀಶೇಷಾ ವೀಶೇಷಾ ವಿಭಾಗ ಮಾಡಲಾಗಿ
ವೀಶೇಷಾ ನೀಷೇಧಾ ವಸ್ತು ನೀನೆ
ಸಾಸಿರಕೆ ಬೆಲೆ ನೀನೆ ಕಾಸಿಗೆ ಬೆಲೆ ನೀನೆ
ಲೇಸು ಹ್ರಾಸಕೆ ಎಲ್ಲಾ ಶೇಷ ನೀನೆ
ದೋಷರಹಿತ ಭಕ್ತಪೋಷ ಆವಲಿದ್ದರು
ಕೇಶವಾಚ್ಚ್ಯುತಾನಂತಾ ನಾಶರಹಿತ
ವಾಸುದೇವ ಮುಕುಂದ ಗೋಪಾಲವಿಠ್ಠಲ ದಾಸಾ
ದಾಸ ದಾಸರ ಪೊರೆವ ಭಾರ ನಿನ್ನದೊ ದೇವ ॥ 3 ॥
ಅಟ್ಟತಾಳ
ಗೋವಿಂದ ಗೋಪಾಲ ಗೋವರ್ಧನ ಧರ
ಗೋವಳರೊಡಿಯಾನೆ ಗೋವುಗಳ ಪಾಲ
ಜೀವ ಜಡದಿ ಭಿನ್ನ ಪಾವನ್ನ ಮೂರುತಿ
ಈವ ಕಾವ ಇಷ್ಟಾ ಯಾವತ್ತರಲಿ ವ್ಯಾಪ್ತ
ಕಾವಕರುಣಿ ರಂಗ ಗೋಪಾಲವಿಠ್ಠಲ
ಕೋವಿದರಿಗೆ ನಿನ್ನ ಕುರುಹಾ ತೋರಿರ್ವಿ ॥ 4 ॥
ಆದಿತಾಳ
ನಿನ್ನ ಇಚ್ಛೆಯಿಂದಲಿ ಜಗವ ಸೃಷ್ಟಿಸುವಿ
ನಿನ್ನ ಇಚ್ಛೆಯಿಂದಲಿ ಅವತಾರ ಮಾಡುವಿ
ನಿನ್ನ ಇಚ್ಛೆಯಿಂದಲಿ ಜಗವ ಪಾಲಿಸುವಿ
ನಿನ್ನ ಇಚ್ಛೆಯಿಂದಲಿ ಜಗವ ಸಂಹರಿಸುವಿ
ನಿನ್ನಗೆ ನೀನೆ ಪ್ರೇರಣೆ ಮಾಡುವಿ
ನಿನ್ನಿಂದ ನೀನೆ ಆನಂದ ಬಡುವಿ
ಭಿನ್ನ ವಸ್ತುವಿನಿಂದ ಇನ್ನಪೇಕ್ಷೆಯು
ಇನ್ನಿಲ್ಲ ಇನ್ನಿಲ್ಲ ಚಿನ್ನುಮಯ ನಿನಗೆ
ಇನ್ನು ಆವಾವ ಜೀವರುಗಳಿಗೆ
ಉನ್ನಾಹ ವ್ಯಕುತಿ ಮಾಡುವ ನೀನೆ
ಘನ್ನ ದಯಾನಿಧಿ ಗೋಪಾಲವಿಠ್ಠಲ
ನಿನ್ನ ಮಹಿಮೆಗೆ ನಾ ನಮೊ ನಮೊಯೆಂಬೆ ॥ 5 ॥
ಜತೆ
ಸ್ವಾತಂತ್ರ ಸ್ವಾಧೀನ ಪಾರಾತಂತ್ರಾದಿ ದೂರ
ಆತಂತ್ರರಾ ಪೊರೆಯೊ ಗೋಪಾಲವಿಠಲ ॥
*************