Showing posts with label ಅನುಗಾಲ ನಿನ್ನ ದಯವು ನಮಗಿರಲಿ ಗುರುವೆ lakumeesha. Show all posts
Showing posts with label ಅನುಗಾಲ ನಿನ್ನ ದಯವು ನಮಗಿರಲಿ ಗುರುವೆ lakumeesha. Show all posts

Monday 6 September 2021

ಅನುಗಾಲ ನಿನ್ನ ದಯವು ನಮಗಿರಲಿ ಗುರುವೆ ankita lakumeesha

ankita ಲಕುಮೀಶ 

ರಾಗ: [ವಲಚಿ] ತಾಳ: [ಆದಿ]


ಅನುಗಾಲ ನಿನ್ನ ದಯವು ನಮಗಿರಲಿ ಗುರುವೆ

ಗುಣನಿಧಿಯೆ ಶ್ರೀ ರಾಘವೆಂದ್ರ ಕಲ್ಪತರುವೇ


ಮನ ನಿನ್ನ ಹೃದಯದಲಿ ಇನಕುಲೇಶನ ಕಾಂಬ

ಕ್ಷಣಕ್ಷಣಕೆ ಸ್ಥಿರಗೊಳಿಸಿ ನೀ ತೋರು ಪ್ರಭುವೇ ಅ ಪ


ಕಲಿಜನರ ನಾ ಸೇರಿ ಮಲಿನ ಕರ್ಮವಗೈದು

ಹಲವು ಬವಣೆಯ ದುಷ್ಟ ಸುಳಿಯೊಳಗೆ ಬಿದ್ದೆ

ಎಳೆಯನಪರಾಧಗಳ ನೀ ಮರೆದು ಕರಪಿಡಿದು

ಚಲ್ವನಿಲಶಾಸ್ತ್ರಸುಧೆ ಪರಿಮಳವ ತಿಳಿಸೋ 1

ಬುದ್ಧಿಗೇಡಿಯು ನಾನು ಹದ್ದುಮೀರಿ ನಡೆದೆ

ಪದ್ಮನಿನ್ನಂಘ್ರಿ ಬಿಡೆ ಉದ್ಧರಿಸಬೇಕಯ್ಯ

ಮಧ್ವರಾಯರ ಮತದ ದುಗ್ದಾಬ್ಧಿ ಪೂರ್ಣಶಶಿ

ಮುದ್ದು ವೃಂದಾವನದಿಂದ ಎದ್ದೋಡಿ ಬಂದು ಸಲಹೈ 2

ಹೆತ್ತಪಿತ ಖಳ ಹಿಂದೆ ಚಿತ್ರಹಿಂಸೆ ನಿನಗೀಯೆ

ಚಿತ್ತದುಗುಡವ ತರದೆ ಮತ್ತವಗೆ ಗತಿಯ ಕೇಳ್ದೆ

ಪ್ರತ್ಯರ್ಥಿ ಗಜ ಸಿಂಹ ಎತ್ತಿ ಕರಗಳ ಮುಗಿವೆ

ಸುತ್ತುವಾಪದ ನಿರುತ ಕಿತ್ತುತಲಿ ಸಲಹೋ 3

ಮೂರರಾಶೆಯ ಬಿಡಿಸು ಮೂರನ್ನೆ ಕರುಣಿಸು

ಮೂರೆರಡು ಅರಿ ಗೆಲಿಸು ಮೂರು ಭ್ರಮೆಗಳ ಓಡಿಸು

ಮೂರ್ಮೂರುಗಳ ಕೊಡಿಸು ಮೂರ್ಲೋಕ ದೊರೆಯಲ್ಲಿ

ಮೂರೊಂದುಅವತಾರಿ ಮೂರುಕಾಲದಿ ನಿತ್ಯ 4

ನಿನ್ನಂಥ ಕರುಣಿಗಳ ಇನ್ನೆಲ್ಲಿ ನಾ ಕಾಣೆ

ಎನ್ನಂಥ ಪಾಪಿಗಳು ಇನ್ನಿಲ್ಲ ಜಗದಲ್ಲಿ

ಮನ್ನಿಸೆನ್ನಪರಾಧ ಮಂತ್ರಾಲಯಾಧೀಶ

ಚನ್ನ ಶ್ರೀಲಕುಮೀಶನ್ನ ಉನ್ನಂತ ಭಕುತಾ 5

***

ಮೂರರಾಶೆ=ಹೆಣ್ಣು, ಹೊನ್ನು, ಮಣ್ಣು; 

ಮೂರನ್ನೆ=ಜ್ಞಾನ, ಭಕ್ತಿ, ವೈರಾಗ್ಯ; 

ಮೂರೆರಡು ಅರಿ=ಅರಷಡ್ವರ್ಗಗಳು-ಕಾಮ, 

ಕ್ರೋಧ, ಲೋಭ, ಮೋಹ, ಮದ, ಮತ್ಸರ; 

ಮೂರು ಭ್ರಮೆ=ಈಷಣತ್ರಯ-ಸತಿಮೋಹ, 

ಸುತಮೋಹ, ಅತಿದ್ರವ್ಯ ಮೋಹ, 

(ದಾರೇಷಣ, ಪುತ್ರೇಷಣ, ವಿತ್ತೇಷಣ); 

ಮೂರ್ಮೂರುಗಳು=ನವವಿಧ ಭಕ್ತಿ-ಶ್ರವಣ, 

ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, 

ವಂದನ, ದಾಸ್ಯ, ಸಖ್ಯ, ಆತ್ಮನಿವೇದನ; 

ಮೂರೊಂದುಅವತಾರಿ=ಪ್ರಹ್ಲಾದ, ಬಾಹ್ಲೀಕ, 

ವ್ಯಾಸರಾಜ, ರಾಘವೇಂದ್ರ; ಮೂರುಕಾಲ=ಪ್ರಾತಃ, 

ಮಧ್ಯ, ಸಾಯಂಕಾಲ;

***