ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಕಾಮಕ್ರೋಧಗಳನ್ನು ಬಿಟ್ಟು ಇಂದ್ರಿಯನಿಗ್ರಹ ಪೂರ್ವಕ ಮನೋನಿಗ್ರಹವೇ ಮುಖ್ಯ.
ಈ ಮನಸ್ಸೇ ದೇಹಾಖ್ಯ ರಥಕ್ಕೆ ಸಾರಥಿ.)
ರಾಗ ತೋಡಿ
ಝಂಪೆತಾಳ
ಮನವೆ ನೀ ನೆನೆಸದಿರು ಮನಸಿಜನ ಮರುಳಾಟ
ಕನಸಿನೊಳಗಾದರೂ ಎಂದೆಂದಿಗೂ
ಧನಸೂರೆ ಮತಿಹಾನಿ ಗತಿಕಂಡಲ್ಲಿ ಕೆಡಗು
ಜನ ಸುಡಿಗೆ ಕುಳಿತಕಡೆ ಜಗದೊಳಗೆ
ತನು ಶುದ್ದವಾಗದು ಎಣಿಸುವನು ಯಮರಾಯ
ಇನಶಶಿ ಉಳ್ಳ ಪರಿಯಂತ ನರಕಾ
ಗುಣಿಸು ನಿನ್ನೊಳು ಸುಮನಸ ವಿಜಯವಿಟ್ಠಲ
ಘನ ಸುಲಭನೆಂದು ವಖ್ಖಣಿಸು ದಾಸನೆನಿಸು ॥ 1 ॥
ಮಟ್ಟತಾಳ
ದಶೇಂದ್ರಿಯಗಳ ನಿನ್ನೊಶ ಮಾಡಿಕೊಂಡು
ದಶದಿಕ್ಕಿಗೆ ವೈದು ಹಸಗೆಡಿಸಿ ದು -
ರ್ವ್ಯಸನಕ್ಕೆ ಹಾಕದೆ ಹಸನಾಗಿ ಇರು ಸ್ವ -
ವಶ ವಿಜಯವಿಟ್ಠಲ ಅಸಮ ದೈವವೆಂದು ॥ 2 ॥
ತ್ರಿವಿಡಿತಾಳ
ನೀನೇ ಮನುಷ್ಯರು ಏನೇನು ಮಾಡುವ
ಸ್ನಾನಾದಿಗಳಿಗೆ ಪ್ರಧಾನವೆ ಮನವೆ
ನೀನೆ ನಿಲ್ಲಲು ಎನಗೆ ಧ್ಯಾನ ಪೂರ್ವಕದಿಂದ
ಜ್ಞಾನಕ್ಕೆ ಅಧಿಕಾರಿ ಎನಿಸುವೆನೊ
ನೀನೆ ಸಕಲೇಂದ್ರಿಯಗಳಿಗರಸೆಂದು ಪೇಳಲು
ನೀನೆ ನೀನೆ ಎಂದು ಸ್ತುತಿಸಿದೆನೊ
ನೀನೊಲಿದು ಸರ್ವಜ್ಞ ವಿಜಯವಿಟ್ಠಲನ್ನ
ಕಾಣಿಸುವದು ಎನ್ನ ಹೃದಯ ಮದ್ಯದಲ್ಲಿ ॥ 3 ॥
ಅಟ್ಟತಾಳ
ಹುಲಿಯ ಕಟ್ಟಲಿಬಹುದು ಕಲಿಯ ಬಂಧಿಸಲಾಪೆ
ಜಲನಿಧಿಯೊಳು ಪೊಕ್ಕು ನೆಲೆಯ ತರಲಿ ಉಂಟು
ಸುಳಿಯುವ ಘಾಳಿಯನು ಹೊಕ್ಕಳಿಸಿ ತರಬಲಾಪೆ
ಕುಲಗಿರಿಗಳು ಪಿಡಿದೊಲಿದು ಅಲ್ಲಾಡಿಪೆ
ಒಳಗಿದ್ದ ಮನವೆ ನಿನ್ನಳವೀಗ ತಿಳಿಯದು
ಗೆಳೆಯ ನೀನಾಗು ಶುಭಾಂಗ ವಿಜಯವಿ -
ಟ್ಠಲನ ಕೂಡ ಬೆರೆದಾಡು ಭರವಸ ಸಾರೂ ॥ 4 ॥
ಆದಿತಾಳ
ಕಾರಣ ಬಂಧ ಮೋಕ್ಷಕ್ಕೆ ಕಾರ್ಯಕಾರಣ ನೀನು
ಹಾರಿ ಹಾರಿ ಹೋಗದೆ ಸೇರಿಕೊಂಡು ಎನ್ನೊಳು
ಪಾರಮಾರ್ಥವ ಬಯಸಿ ವೀರ ವಿಜಯವಿಟ್ಠಲನ್ನ
ಸೇರಿ ಸತತದಲ್ಲಿ ನೋಡು ನೋಡು ನೋಡು ನೋಡು ನೋಡು ॥ 5 ॥
ಜತೆ
ಎತ್ತ ಪೋಗದಲೆ ಸಾರಥಿಯಾಗಿ ಅನುದಿನ
ಉತ್ತರ ವಿಜಯವಿಟ್ಠಲನಲ್ಲಿ ಸೇರುವ ॥
***