ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತರ ರಿಣಕಂಜಿ ಅಡಗಿದರೇ | ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ
ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ | ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ | ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು | ಉತ್ತಮ ನರಮೃಗದಂತಡವಿಯ ಸೇರಿ1
ಬಡತನ ದೋರಲೆಂದು ಯಾಚಕನಾದರೇನು | ಕಡಲ ಬೊರಿಯಾ ಮನೆ ಮಾಡಿರಲೇನು | ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ | ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2
ಮುನಿಯಂತೆ ದಿಗಂಬರ ರೂಪವ ತಾಳಲೇನು | ಜನದ ಕಲಿಕೀ ಮಾತು ಕಡೆಗಾಣುದೇ | ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ | ಸಂತೈಸಿ ಶರಣರ ರಕ್ಷಿಸಯ್ಯಾ 3
***