Showing posts with label ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ purandara vittala. Show all posts
Showing posts with label ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ purandara vittala. Show all posts

Friday, 6 December 2019

ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ purandara vittala

ರಾಗ ಪೂರ್ವಿಕಲ್ಯಾಣಿ ಆದಿತಾಳ

ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ
ನಾಥ ನಾರಾಯಣ ಹರಿ ಕೃಷ್ಣ ಎಂಬುವ ಕೀರ್ತನೆಯನು ದೂಷಿಸಿ ನಗುತಿ ||ಅ||

ಮೂಢತನದಿ ಮಲಮೂತ್ರದ ಭಾಂಡಕೆ ಬಹು ಶೃಂಗಾರವ ಮಾಡುತಿ
ಗಾಢಾಂಧಕಾರದ ಮದ ಉನ್ಮತ್ತದಿ ಕವಿದು ಮುಗ್ಗುಂಡಿಗೆ ಬೀಳುತಿ
ಪಾಡಿ ಪೊಗಳಿ ನಿನ್ನ ಬದಿಯಲ್ಲಿರುವರು ಕಾದುಕೊಂಡಿಹರೆಂದು ನೋಡುತಿ
ಪೀಡಿಸಿ ಕಾಲನ ದೂತರು ಎಳೆವಾಗ ಬೇಡಿ ನೀ ಭಯದಲಿ ಕೂಗುತಿ ||

ಖಂಡ ಮಾಂಸಗಳು ತುಂಬಿದ ದೇಹವ ಕಂಡು ಸಂತೋಷದಿ ಉಬ್ಬುತಿ
ಕಂಡ ಕಂಡದಾಪೇಕ್ಷಿಸಿ ಮನದಲಿ ಉಂಡೇನೆನ್ನುತ ಹಿಗ್ಗುತಿ
ಕಂಡುಕೊಳ್ಳದೆ ಮುಂದಿನ ಮಾರ್ಗವ ಪುಂಡಾಟಗಳನು ಆಡುತಿ
ಕಂಡ್ಯಮದೂತರು ಕೊಂಡೊಯ್ದು ನಿನ್ನನು ದಂಡಿಸುವಾಗ ಕಣ್ ಕಣ್ ಬಿಡುತಿ ||

ದುಷ್ಟ್ಯಮ ದೂತರು ಕಟ್ಟಿ ಎಳೆಯಲು ಬಿಟ್ಟು ಪೋಪುದೀ ಪ್ರಾಣವು
ಕಟ್ಟಿದ ಮನೆಯನು ಬಿಟ್ಟು ಹೋಗುವಂತೆ ಬಿಟ್ಟು ಪೋಪುದೀ ಜೀವವು
ಒಟ್ಟಿದ ಕಸವು ಸುಟ್ಟು ಹೋಗುವ ಹಾಗೆ ಸುಟ್ಟು ಪೋಪುದೀ ದೇಹವು
ಹುಟ್ಟಿದ ಮಕ್ಕಳು ಕೊಟ್ಟಿಗೆ ಪಶುಗಳು ಪೆಟ್ಟಿಗೆ ನಗ ಬೆನ್ನಟ್ಟಿ ಬಾರವು ||

ಇರುಳು ಹಗಲು ನರಹರಿಯನು ತುತಿಸದೆ ನರ ಪಶುಗಳ ಕೊಂಡಾಡುತಿ
ಸುರಧೇನುವು ತಾನಿರುತಿರೆ ನೆರೆಮನೆ ಹುಳಿಮಜ್ಜಿಗೆಯನು ಬೇಡುದಿ
ಹರಿವ ಭಾಗೀರಥಿ ಎದುರೆಲ್ಲಿರೆ ನೀ ಒರತೆಯ ಜಲಪಾನ ಮಾಡುತಿ
ಮುರಹರ ನಗಧರ ಮುಕುಂದ ಎನ್ನದೆ ನರಕ ಬಾಧೆಗೆ ಗುರಿಯಾಗುತಿ ||

ಸಿಟ್ಟಿಲಿ ನೀ ಹರಿದಾಸರ ಮುಖವನು ದೃಷ್ಟಿಸಿ ನೋಡದೆ ಹೋಗುತಿ
ಮುಷ್ಟಿಯೊಳಗೆ ಒಂದಿಷ್ಟು ಕೊಡದೆ ನಿನ್ನ ಹೊಟ್ಟೆ ತುಂಬುವುದೆ ನೋಡುತಿ
ಬಟ್ಟಬಯಲ ಸಂಸಾರದಲನುದಿನ ದಿಟ್ಟತನದಲೋಲಾಡುತಿ
ನೆಟ್ಟನೆ ಪುರಂದರ ವಿಠಲನೆನದೆ ಮುಕ್ತಿ ಬಟ್ಟೆಯ ಕಾಣದೆ ಹೋಗುತಿ ||
***

pallavi

yAtake nODuti yamana pAshake bILuti

anupallavi

nAtha nArAyaNa hari krSNa embuva kIrtaneyanu dUSisi naguti

caraNam 1

mUDhatanadi mala mUtrada bhANDake bahu shrngArava mADuti
gADhAndhakArada mada unmattadi kavitu mugguNDige bILuti
pADi pogaLi ninna badiyalliruvaru kAdu koNDiharendu nODuti
pIDisi kAlana tUtaru eLevAga bEDi nI bhayadali kUguti

caraNam 2

khaNDa mAmsagaLu tumbida dEhava kaNDu santOSadi ubbuti
kaNDa kaNDadA pEkSisi manadali unDenennuta higguti
kaNDukoLLade mundina mArgava puNDATagaLanu Aduti
kaNDyama dUtaru koNDoidu ninnanu daNDisuvAga kaN kaN biDuti

caraNam 3

duSTyama dUtaru kaTTi eLeyalu biTTu pOpudI prANavu
kaTTida maneyanu biTTu hOguvante biTTu pOpudI jIvavu
oTTida kasavu suTTu hOguva hAge suTTu pOpudI dEhavu
huTTida makkaLu koTTige pashugaLu peTTige naga bennaTTi bAravu

caraNam 4

iruLu hagalu narahariyanu tutiside nara pashugaLa koNDADuti
sura dhEnuvu tAnirutire nere mane huLi majjigeyanu bEDudi
hariva bhAgIrathi edurellire nI varateya jalapAna mADuti
murahara nagadhara mukunda ennade naraka bAdhege guriyAguti

caraNam 5

siTTili nI haridAsara mukhavanu diTTisi nODade hOguti
muSTiyoLage ondiSTu koDade ninna hoTTe tumbuvude nODuti
baTTa bayala samsArada lavudina diTTatanada lOlADuti
neTTane purandara viTTlanenade mukti baTTeya kANade hOguti
***