Showing posts with label ಗುರುರಾಘವೇಂದ್ರ ತವ ಚರಣಾರವಿಂದ panduranga vittala GURURAGHAVENDRA TAVA CHARANARAVINDA RAGHAVENDRA STAVANA. Show all posts
Showing posts with label ಗುರುರಾಘವೇಂದ್ರ ತವ ಚರಣಾರವಿಂದ panduranga vittala GURURAGHAVENDRA TAVA CHARANARAVINDA RAGHAVENDRA STAVANA. Show all posts

Wednesday 28 April 2021

ಗುರುರಾಘವೇಂದ್ರ ತವ ಚರಣಾರವಿಂದ ankita panduranga vittala GURURAGHAVENDRA TAVA CHARANARAVINDA RAGHAVENDRA STAVANA



ಗುರುರಾಘವೇಂದ್ರ ತವ ಚರಣಾರವಿಂದ..

"ಶ್ರೀ ರಾಘವೇಂದ್ರ ಸ್ತವನ"ವು ಪಾಂಡುರಂಗವಿಟ್ಠಲ ದಾಸರ ಮಹತ್ತರ ಕೃತಿ (ಪಾಂಡುರಂಗ ರಾವ್ ಕಸಬೆ, 1918). ಅಶ್ವಧಾಟಿ ಸಾಂಗತ್ಯದಲ್ಲಿರುವ ಈ ಕೃತಿಯಲ್ಲಿ ಭಕ್ತಿರಸವು ಹರಿದಿದೆ, ರಾಯರ ಮಹಿಮೆಯು ಕೊಂಡಾಡಲ್ಪಟ್ಟಿದೆ.

ಸುಮಾರು 150 ವರ್ಷಗಳ ಹಿಂದೆ ಗದ್ವಾಲ ಸಂಸ್ಥಾನದಲ್ಲಿ ನರಹರಿ ರಾವ್ ಎನ್ನುವವರು ದಿವಾನರಾಗಿದ್ದರು. ಇವರು ‘ನರಹರಿವಿಟ್ಠಲ’ ಎಂಬ ಅಂಕಿತದಿಂದ ಸರಿಸುಮಾರು ಇನ್ನೂರು ಪದ್ಯಗಳನ್ನು ರಚಿಸಿರುವರೆಂದು ಮಾಧ್ವವಾಙ್ಮಯತಪಸ್ವಿಗಳು ಎಂಬ ಗ್ರಂಥದಲ್ಲಿ ಪಂಡರೀನಾಥಾಚಾರ್ಯ ಗಲಗಲಿಯವರು ತಿಳಿಸಿದ್ದಾರೆ. ಇವರ ವಂಶಜರೇ ಪಾಂಡುರಂಗ ರಾವ್ ಕಸಬೆಯವರು.

ಬಾಲ್ಯದಲ್ಲಿ ಪಾಂಡುರಂಗರಾಯರು ಪ್ರೌಢಶಿಕ್ಷಣಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಮನನೊಂದು ತಿರುಪತಿಗೆ ತೆರಳಿ ಅಲ್ಲಿ ಮಹಾನ್ ಸಾಧಕರೆನಿಸಿದ್ದ ಪಾಂಡುರಂಗೀ ಹುಚ್ಚಾಚಾರ್ಯರನ್ನು ಸೇವಿಸಿ ಅವರಿಂದಲೇ ‘ಪಾಂಡುರಂಗವಿಟ್ಠಲ’ ಎಂಬ ಅಂಕಿತವನ್ನೂ ಪಡೆದು ಸಾಧನಾಮಾರ್ಗದಲ್ಲಿ ಮುನ್ನಡೆದರು. ಗುರುಗಳ ಅನುಗ್ರಹಬಲಾತ್ ‘ಶ್ರೀ ಜಗನ್ನಾಥ ವಿಜಯ’ವೆಂಬ ಕೃತಿಯನ್ನು ರಚಿಸಿ ಸಮಕಾಲೀನರಾಗಿದ್ದ ಸರ್ವ ಹರಿದಾಸರ ಪೀತಿಗೆ ಪಾತ್ರರಾದುದಷ್ಟೇ ಅಲ್ಲದೆ ಹರಿ-ಗುರುಗಳ ವಿಶೇಷಕೃಪೆಗೆ ಪಾತ್ರರಾದರು.

ಕ್ರಿ.ಶ. 1918ರಲ್ಲಿ ಜನಿಸಿದ ಶ್ರೀಯುತರು ರಾಯಚೂರಿನಲ್ಲಿ ಕರಣಿಕವೃತ್ತಿಯಲ್ಲಿದ್ದರು. ಸಾಂಪ್ರತ ನಾವು ರಾಯರ ಅಂತರಂಗ ಭಕ್ತರಾಗಿದ್ದ, ಪಾಂಡುರಂಗವಿಟ್ಠಲದಾಸರ ಜನ್ಮಶತಮಾನೋತ್ಸವವನ್ನೂ ಆಚರಿಸುತ್ತಿದ್ದೇವೆ. ಇವರು ಸಂಸ್ಕೃತ, ಕನ್ನಡ, ಉರ್ದು ಮುಂತಾದ ಭಾಷೆಗಳಲ್ಲಿ ಕಾವ್ಯರಚನಾಸಾಮರ್ಥ್ಯದಷ್ಟು ಪ್ರೌಢಿಮೆ ಹೊಂದಿದ್ದರು. ಅನೇಕ ಕವನಗಳಲ್ಲದೆ ಉರ್ದುಭಾಷೆಯಲ್ಲಿ ‘ಪನ್ನಾದಾಸಿ’ ಎಂಬ ನಾಟಕವನ್ನೂ ರಚಿಸಿರುವ ದಾಸರು ಮತೀಯ ವೈಷಮ್ಯಗಳನ್ನು ಪರಿಹರಿಸುತ್ತ ಸರ್ವಜನಾನುರಾಗಿಗಳಾಗಿದ್ದರು.

ಭಾಮಿನಿಷಟ್ಪದಿಯ ನೂರಕ್ಕೂ ಮಿಗಿಲಾದ ಪದ್ಯಗಳಲ್ಲಿ ಹಾಗೂ ಐದು ಅಧ್ಯಾಯಗಳಲ್ಲಿ ನಿಬದ್ಧವಾಗಿದೆ ಇವರ ‘ಶ್ರೀ ಜಗನ್ನಾಥ ವಿಜಯ’ ಕೃತಿ. ಇದರಲ್ಲಿ ದಾಸರು ಕನ್ನಡಭಾಷಾಭಿಮಾನ, ಕನ್ನಡನಾಡಿನ ಬಗೆಗಿರುವ ಗೌರವಾತಿಶಯಗಳನ್ನು ಅಭಿವ್ಯಕ್ತಿಸಿದ್ದಾರೆ. ಜಗನ್ನಾಥದಾಸರನ್ನು ಮನಸಾರೆ ಸ್ತುತಿಸುತ್ತ ಅವರು ಕನ್ನಡನಾಡಿಗೆ ನೀಡಿದ ಅಪಾರ ಕೊಡುಗೆಯನ್ನು ನೆನೆಯುತ್ತಾರೆ ದಾಸರು – ‘ದೇಶಕನ್ನಡವೆಂಬ ವಿಶದಾಕಾಶ ಭಾಸ್ಕರರಾಗಿ ದಾಸರು ಸೂಸಿದರು ವೈರಾಗ್ಯ ಬಿಂಬಗಳಲ್ಲಿ’ ಎಂಬುದಾಗಿ.

ಇವರ ಕೃತಿಗಳಲ್ಲಿ ನೀತಿಸಂಹಿತೆಯು ಹಾಸುಹೊಕ್ಕಾಗಿದೆ ಹಾಗೂ ಮನನಾಟುವಂತಿದೆ. ‘ದಾನಗುಣವಿಲ್ಲದ ಪೂಜೆ, ಭೂತದಯವಿಲ್ಲದ ಪಾಂಡಿತ್ಯ, ಪಾತಿವ್ರತ್ಯವಿಲ್ಲದ ವನಿತೆ, ಭಯವಿಲ್ಲದ ಸೇವಕರು, ನಯವಿಲ್ಲದ ಬಾಲಕರ, ನಿಶ್ಚಯವನಾಡದ ಸ್ನೇಹಿತರು ಕುರಿಯ ಕೊರಳೊಳು ಮೊಲೆಗಳಿದ್ದಂತೆ’ ಎಂಬುದಾಗಿ ಮಾರ್ವಿುಕವಾಗಿ ಉಪದೇಶಿಸುತ್ತಾರೆ. ಕೊಪ್ಪರದ ಶ್ರೀ ನರಸಿಂಹದೇವರನ್ನು ಅಶ್ವಧಾಟಿಯಲ್ಲಿ 19 ನುಡಿಗಳಲ್ಲಿ ವರ್ಣಿಸಿರುವ ದಾಸರು ಕೃಷ್ಣಾನದಿಯ ಸೊಬಗನ್ನು, ಷೋಡಶಬಾಹು ನರಸಿಂಹನ ಉದ್ಭವವು ಯಾವ ತೆರದಿ ಆಯಿತೆಂಬುದನ್ನೂ ಬಣ್ಣಿಸಿದ್ದಾರೆ.

ದಾಸರ ಮಹತ್ತರ ಕೃತಿ ‘ಶ್ರೀ ರಾಘವೇಂದ್ರ ಸ್ತವನ’. ಅಶ್ವಧಾಟಿ ಸಾಂಗತ್ಯದಲ್ಲಿರುವ ಈ ಕೃತಿಯಲ್ಲಿ ಭಕ್ತಿರಸವು ಮುಗಮ್ಮಾಗಿ ಹರಿದಿದೆ. ಉಪಮೆಯು ಲಲನೆಯಂತೆ ನಲಿದಾಡಿದೆ. ರಾಯರ ಮಹಿಮೆಯು ಕಬ್ಬಿನರಸದಂತೆ ಕಬ್ಬಿಗರಿಗೆ ಆಸ್ವಾದ್ಯಮಾನವಾಗಿದೆ. ಭವದ ಮೋಹವನ್ನು, ಮೃತ್ಯುವಿನೊಂದಿಗೆ ಬಾಳ್ವೆ ಮಾಡುವ ಮಾನವನ ಕ್ಷಣಿಕ ಜೀವನವನ್ನೂ ಚಿತ್ರಿಸುವ ದಾಸವರ್ಯರ ಜಾಣ್ಮೆಯು ಪ್ರಹ್ಲಾದನಿಗೆ ತೋರಿದ ಭಗವದ್ದರ್ಶನದಂತೆ ಮೋಹಕವಾಗಿದೆ. ರೊಕ್ಕಕ್ಕೆ ಸಿಕ್ಕಿ, ದಿಕ್ಕಿಲ್ಲದಂತಾಗಿ, ಜ್ಞಾನಾಮೃತವಿಲ್ಲದೆ ಬಿಕ್ಕಳಿಸುವ ಮಾನವನು ಗುರುರಾಯರ ಪಾದಗಳನ್ನು ಗಬಕ್ಕನೆ ಹಿಡಿದು ಹೇಗೆ ಭಗವದ್ಭಕ್ತರ ಪಕ್ಕದಲ್ಲಿ ಮುಕ್ತಿಯ ಸೋಪಾನಮಾರ್ಗದಲ್ಲಿ ನಡೆಯಬಹುದೆಂದು ದಾಸರ ಕೃತಿಗಳು ಸರಳೋಪಾಯಗಳನ್ನು ತಿಳಿಸಿವೆ.

ರಾಯರನ್ನು ಸ್ತುತಿಸುವ ಇವರ ಸಾಲುಗಳು ಹೀಗಿವೆ – ‘ವಾರಾಹಿವಾಸ ಭೂಭಾರಾರಿದಿವ್ಯರಥವೇರುತ್ತಲಾಕ್ಷಣದ, ಬಾರೋ ನೀ ಭವರೋಗದೂರಾ ಯತಿಯೆ ಎಂದು ಸಾರುತ್ತ ಡಂಗುರಗಳ’. ರಾಯರ ಬಗ್ಗೆ ವಿಶೇಷ ವಿಶ್ವಾಸ ವ್ಯಕ್ತಪಡಿಸುವ ದಾಸರು, ‘ರಾಯರು, ದಿವ್ಯಾಂಗರಾದ, ತುಂಗಾನಿವಾಸಿಗಳಾಗಿ, ಪಾಂಡುರಂಗನಪಾದಭೃಂಗರೆಂದೆನಿಸಿ ಜನರನ್ನು ಉತ್ತುಂಗಕ್ಕೆ ಕರೆದೊಯ್ಯುವಲ್ಲಿ ಸಂಶಯವೇ ಬೇಡ’ ಎನ್ನುವರು. ಉಪಮೆಯಿಂದ ಗುರುರಾಜರನ್ನು ಅಲಂಕರಿಸುವ ದಾಸರು, ‘ಶಾಂತತೆಯಲಿ ಚಂದ್ರ, ಸಂತೋಷದಲಿ ಕಡಲ ಕಾಂತಿಯೊಳಗಿವ ಭಾಸ್ಕರ, ಶ್ರೀಮಂತಿಗೆಯಲಿ ದನುಜತನಯ, ಪಂಥದಲಿ ಬಲಿತಾತ, ಸುತೇಂದ್ರ ದಾನದಲಿ ಈ ಮಂತ್ರಾಲಯನಿವಾಸನು’. ಹೀಗಿರಲು ಭಕ್ತರು ಏನನ್ನೂ, ಯಾರನ್ನೂ ಚಿಂತಿಸದೆ ರಾಯರ ಬಳಿಗೆ ಪೋಗಿ ತಮಗೆ ಬೇಕಾದ್ದೆಲ್ಲವನ್ನೂ ಕೇಳಿ ಪಡೆಯಿರಿ ಎಂದು ಮಾರ್ಗದರ್ಶನ ಮಾಡುತ್ತಾರೆ. ಮುಂದೆ ರಾಯರೇ ನಮ್ಮ ಸಕಲ ರೋಗಗಳನ್ನೂ ಪರಿಹರಿಸುವ ಏಕಮಾತ್ರ ವೈದ್ಯ ಎಂದು ಅರುಹುತ್ತಾ ದಾಸರು, ‘ವ್ಯಾಕುಳದ ಭವರೋಗಕೆ ಏಕಔಷಧಮಾತ್ರೆ ಪಾಕವಿದು ಜನರ ಬಿಡದೆ ಏಕಚಿತ್ತದಿ ಪಠಿಪುದು ಈ ಕೃತಿಯ ನಿತ್ಯದಿ ಐಹಿಕಸುಖಕೆ ಒಳಗಾಗದೆ’ ಎಂಬ ಹಿತವಚನದೊಂದಿಗೆ ತಮ್ಮ ಕೃತಿಯ ಫಲಸ್ತುತಿಯನ್ನೂ ನಿವೇದಿಸಿದ್ದಾರೆ.

ಇಂತಹ ಮಹನೀಯರ ಈ ರಾಘವೇಂದ್ರಸ್ತವನವನ್ನು ಗುರುರಾಯರ ಆರಾಧನಾಮಹೋತ್ಸವದ ಈ ಶುಭಮಾಸದಲ್ಲಿ ನಾವೆಲ್ಲರೂ ಪಠಸಿ ಧನ್ಯರಾಗೋಣ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: vidwansuman@gmail.com)

***