ರಾಗ - : ತಾಳ -
ಮುಟ್ಟ ಬಾರೋ ರಂಗಯ್ಯ ಇಷ್ಟು l
ಇಷ್ಟು ಬೆಣ್ಣೆ ಕೈಲಿ ಕೊಟ್ಟೆನೊ ರಂಗಯ್ಯ ನೀ ll ಪ ll
ಶ್ರೀಪತಿಗೆ ಗೋಪಿಯು ಬಹುಪರಿ ಅಲಂಕರಿಸಿ l
ಭಾಪುರೆಯಂದಪೇಕ್ಷದಿ ಈ ಪರಿಯಿಂದಲಿ ll 1 ll
ಪುಟ್ಟಪುಟ್ಟ ಪಾದದಿಂದ ಸೊಟ್ಟ ಸೊಟ್ಟ ಹೆಜ್ಜೆನಿಟ್ಟು l
ದಿಟ್ಟ ಕೃಷ್ಣ ಎನ್ನನು ದೃಷ್ಟಿಯಿಂದಲಿ ನೋಡಿ ll 2 ll
ಲೇಶ ಕ್ಲೇಶ ರೋಷದಿಂದ ಶ್ರೀಶ ಸರ್ವೇಶ ನೀ ಮಾ l
ನಿಸ ಕೂಸಲ್ಲವೊ ಮಂದಹಾಸದಿ ನಗುತ ll 3 ll
ಅಪ್ಪ ಬೊಮ್ಮನಪ್ಪ ಜಗದಪ್ಪ ಬಾಯಿ ಜೊಲ್ಲು ಸುರಿಸು l
ತಿಪ್ಪ ಗೆಜ್ಜೆ ಕಾಲ್ಗಳಿಂದ ಚಪ್ಪಾಳಿಕ್ಕುತ ಕುಣಿದು ll 4 ll
ಘನ್ನ ಅಭಿನವಜನಾರ್ದನವಿಠಲನೆ ಎನ್ನಾ l
ಪುಣ್ಯವಂತೊ ನಿನ್ನಂಥವ ಚಿನ್ನನಾದೆಲ್ಲೊ ರಂಗಾ ll 5 ll
******