Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಸಾಧನಕ್ಕೆ ಮೊದಲು ಹರಿದಾಸನಾಗಿ ಅನೇಕ ವಿಧವಾದ ಕರ್ಮಗಳ ವಿಚಾರ ಪೂರ್ವಕ , ಸಾಧನ ಶ್ರೀಚರಣ ಭಜನೆ)
ರಾಗ ಸಿಂಹೇಂದ್ರಮಧ್ಯಮ ಧ್ರುವತಾಳ
ಹರಿದಾಸನಾಗು ಸಂಚರಿಸು ಸಂತೋಷದಲ್ಲಿ
ಗುರುಹಿರಿಯರ ಪಾದಕ್ಕೆರಗುತಿರು ಬಿಡದೆ
ಎರಡೊಂದು ತಿಳಿದು ಮತ್ತೆರಡೊಂದು ಅಳಿದು
ಎರಡೊಂದು ಸಂಪಾದಿಸಿ ಎರಡೊಂದು ಶುದ್ಧಿಯಲ್ಲಿ
ಎರಡೊಂದು ಸೈರಿಸುತ್ತ ಎರಡೊಂದು ಕಾಲದಲ್ಲಿ
ಎರಡೊಂದು ಗುಣಗಳಿಗೆ ಎರಡೊಂದು ರೂಪನೆಂದು
ಎರಡೊಂದು ಲೋಕವನ್ನು ಎರಡೊಂದು ಮಾಳ್ಪನ್ನ
ಎರಡೊಂದಾರಿಂದಾವಸ್ಥಿ ಎರಡೊಂದು ಉಳ್ಳಾಮೇಲು
ಎರಡೊಂದು ಕಾಯ ನೋಡು ಎರಡೊಂದು ಕರ್ಮಾ ಕಳಿಯೊ
ಎರಡೊಂದಕ್ಷರಗಳ ಎರಡೊಂದು ಸಾರೆ ನೆನೆದು
ಎರಡೊಂದು ಸ್ಥಾನ ಸೇರು
ಎರಡೊಂದು ಗುಣಶೂನ್ಯ ವಿಜಯವಿಟ್ಠಲ ಹರಿಯ
ಎರಡೊಂದು ರೂಪಾ ಭಜಿಸೆ ಎರಡೊಂದಾವರ್ತಿ ಪೊರೆವಾ ॥ 1 ॥
ಮಟ್ಟತಾಳ
ಮೂರೊಂದು ಯುಗದಲ್ಲಿ ಮೂರೊಂದು ವರ್ಣದ
ಮೂರೊಂದು ಕಡೆ ಬಿಂಬ ಮೂರೊಂದಾದಿ ಭಜಿಸಿ
ಮೂರೊಂದು ಪುರುಷಾರ್ಥ ಮೂರೊಂದಾದಿ ಬೇಡೆ
ಮೂರೊಂದು ಮೊಗನಯ್ಯಾ ವಿಜಯವಿಟ್ಠಲರೇಯ
ಮೂರೊಂದುಪಾಯದಲ್ಲಿ ಮೂರೊಂದು ಪ್ರಳಯನಾದೆ ॥ 2 ॥
ತ್ರಿವಿಡಿತಾಳ
ನಾಲ್ಕೊಂದು ಭೇದವ ಆವಲ್ಲಿ ನಿಜವೆಂದು
ನಾಲ್ಕೊಂದಾತ್ಮಕವಾದ ಬೊಮ್ಮಾಂಡದಿ
ನಾಲ್ಕೊಂದು ಬಗೆಯವರು ಯೋಗ್ಯವಂತರೆಂದು
ನಾಲ್ಕೊಂದು ಸಂಪದವಿ ಇಪ್ಪವೆಂದು
ನಾಲ್ಕೊಂದು ಕೋಶದಲ್ಲಿ ವಾಸವಾಗಿ ಇದ್ದು
ನಾಲ್ಕೊಂದು ಪರ್ವದಲಿ ತಿರುಗದಲೆ
ನಾಲ್ಕೊಂದು ಊರ್ಧ್ವಪುಂಢ್ರವ ಮುದ್ರಿಯೆ ಧರಿಸು
ನಾಲ್ಕೊಂದು ಯಜ್ಞವ ತಿಳಿದು ಮಾಡಿ ನಿತ್ಯ
ನಾಲ್ಕೊಂದು ಇಂದ್ರಿಯಂಗಳ ಬಂಧನವ ಮಾಡು
ನಾಲ್ಕೊಂದ್ಹಾದಿಗೆ ಎರಗದೀರು
ನಾಲ್ಕೊಂದು ಭೇದವ ತಿಳಿಯೋ ನೀನು
ನಾಲ್ಕೊಂದವರ ಪಾಲ ವಿಜಯವಿಟ್ಠಲ ಪ್ರ -
ನಾಲ್ಕೊಂದು ಬಿಡಿಸುವ ನಾಲ್ಕೊಂದು ಕೊಡುವನೊ ॥ 3 ॥
ಅಟ್ಟತಾಳ
ಐದೊಂದು ರಿಪುಗಳುಪದ್ರವ ಮುಗ್ಗಿಸು
ಐದೊಂದು ಕರ್ಮವ ಮಾಡುತಲಿರು
ಐದೊಂದು ಮತಕೆ ನಮ್ಮ ಮತವಧಿಕವೆನ್ನು
ಐದೊಂದು ರುಚಿ ಬಿಡು ಹರಿನಾಮ ರುಚಿಯೆನ್ನು
ಐದೊಂದು ರಥಿಕರ ಜರಿದ ವಿಜಯವಿಟ್ಠಲನ್ನ
ಐದೊಂದು ಸ್ಥಳದಲ್ಲಿ ತಿಳಿಯೋ ನಿರ್ಮಲನಾಗಿ ॥ 4 ॥
ಆದಿತಾಳ
ಆರೊಂದು ಜಡವುಳ್ಳ ಗ್ರಾಮ ನಿನ್ನದಲ್ಲ
ಆರೊಂದಂಬುಧಿಯಷ್ಟು ಕರ್ಮವೆ ನಿನ್ನದು
ಆರೊಂದವರ ಕೇಳಿ ಯಮನು ಶಿಕ್ಷಿಸುವನು
ಆರೊಂದು ದ್ವೀಪವನಾಳಿದವರೆಲ್ಲ
ಆರೊಂದು ಹಯನ ಕಾಲಕೆ ಎದ್ದು ಸ್ನಾನಾದಿ
ಆರೊಂದು ಜಿಂಹ್ವಕೆ ಉಣಿಸಿ ಕರ್ಮ ಜ್ಞಾನ
ಆರೊಂದು ಗೋತ್ರ ಉದ್ಧಾರ ಮಾಡುತ
ಆರೊಂದು ಅಂಗವುಳ್ಳ ವಿಜಯವಿಟ್ಠಲ ಹರಿಯ
ಆರೊಂದವಾರದೊಳು ನಿಮಿಷ ದಾಸನಾಗೊ ॥ 5 ॥
ಜತೆ
ಕೊಡಬ್ಯಾಡ ಕೊಳಬ್ಯಾಡ ಸಿರಿ ವಿಜಯವಿಟ್ಠಲನ್ನ
ಅಡಿಗಳರ್ಧಾ ನಿಮಿಷಾ ನಂಬಲು ಕೈವಲ್ಯ ॥
****