Showing posts with label ಗುರುರಾಘವೇಂದ್ರರ ಪರಮಮಂಗಳ ಮೋದ abhinavapranesha vittala ಸುಳಾದಿ suladi. Show all posts
Showing posts with label ಗುರುರಾಘವೇಂದ್ರರ ಪರಮಮಂಗಳ ಮೋದ abhinavapranesha vittala ಸುಳಾದಿ suladi. Show all posts

Monday 6 September 2021

ಗುರುರಾಘವೇಂದ್ರರ ಪರಮಮಂಗಳ ಮೋದ ankita abhinavapranesha vittala ಸುಳಾದಿ suladi

ಸುಳಾದಿ 

ರಾಗ: [ಶಂಕರಾಭರಣ] ಧೃವ ತಾಳ


ಗುರು ರಾಘವೇಂದ್ರರ ಪರಮಮಂಗಳ ಮೋದ

ಚರಿತೆ ಬರೆವೆ ಗುರು ವರದೇಂದ್ರರಾಯರ

ಕರುಣದಿಂದಾಪನಿತು ಹರುಷದಿಂದ 

ಪರಮೇಷ್ಟಿ ಚರಣಾಬ್ಜ ಮಧುಕರ ಶಂಕುಕರ್ಣ

ಶರಜಜನಾಜ್ಞದಿ ವರಕೃತಯುಗದಲ್ಲಿ

ಪುರುಟಶಯ್ಯನ ಸುತನಾಗಿ ಜನಿಸಿ

ಹರಿಭಕ್ತಾಗ್ರಣಿಯೆನಿಸಿ ಹರಿಭಕ್ತಸುಧೆ ಸುರಿಸಿ

ಹಿರಿಯನ ಛಲದಿಂದ ವರಸಭೆಸ್ಥಂಭದಿ

ನರಹರಿಯನು ತೋರ್ದ ಪ್ರಹ್ಲಾದನೆ

ಎರಡನೆಯ ಯುಗದಲ್ಲಿ ಶಿರದಶವರಜಾತ

ಧರಣಿಜಾಧವ ದೂತ ವಿಭೀಷಣ

ಎರಡೊಂದುಯುಗದಲ್ಲಿ ಕುರುಕುಲಸಂಜಾತ

ಮುರಹರಸೇವಕ ಬಾಹ್ಲೀಕ

ಖರಯುಗದಲ್ಲಿ ಪ್ರಥಮ ಬನ್ನೂರಾರ್ಯರ ಪುತ್ರ

ಸ್ವರ್ಣವರ್ಣರ ಛಾತ್ರ ವ್ಯಾಸತೀರ್ಥ

ಕರಿನಾಡಿನಲ್ಲಿ ಅವತರಿಸಿದ ಪುನರಪಿ

ಧರಿಜಪತಿಯ ಚರಣಾರ್ಚನೆಗೈಯ್ಯಲು

ನರಹರಿಯಭಿನವಪ್ರಾಣೇಶವಿಠಲನ

ಚರಣಕಿಂಕರಚಂದ್ರ ಗುರು ರಾಘವೇಂದ್ರ 1

ಮಟ್ಟ ತಾಳ

ಕರ್ನಾಟಕದಲ್ಲಿ ಧರೆಸುರವಂಶದಲಿ

ಗಿರಿರಾಜನ ವರದಿ ವೈಣಿಕ ಮನೆತನದಿ

ಧರೆಯೊಳುದಿಸಿ ಬೆಳೆದ ಶರಧಿಜಸಿತನಂತೆ

ಸರ್ವಮೂಲ ಗ್ರಹಿಸಿ ಪಂಡಿತವರನೆನಿಸಿ

ಗುರುವರ ಸುಧೀಂದ್ರಕರಕಮಲಗಳಿಂದ

ತುರ್ಯಾಶ್ರಮವಹಿಸಿ ರಾಘವೇಂದ್ರನೆನಿಸಿ

ಹರಿಮತಶರನಿಧಿಗೆ ರಾಕಾಬ್ಜನುಎನಿಸಿ

ದುರುಳಮತೇಂಧನಕೆ ಸುರಮುಖಸಮನೆನಿಸಿ

ಮೆರೆದರು ಶತಕಾಲ ಧರೆಯೊಳು ವಿಭವದಲಿ

ಹುರಿರಘು(?) ಅಭಿನವಪ್ರಾಣೇಶವಿಠಲನ

ಚರಣ ಧೂಳೀಗಾಕಾರ ಗುರುಸಾರ್ವಭೌಮ 2

ತ್ರಿವಿಡಿ ತಾಳ

ಭರತಖಂಡವಚರಿಸಿ ದುರ್ವಾದಿಗಳಜೈಸಿ

ಮರುತಮತಾಂಬುಧಿ ವಿಸ್ತರಿಸಿ

ಪರಿಮಳ ತಂತ್ರದೀಪಿಕೆಯಾದಿಗಳ ರಚಿಸಿ

ಹರಿಮತದರ್ಶನ ತಿರುಳ ತಿಳಿಸಿ

ನಿರುತದಿ ಪ್ರವಚನ ಪಾದಂಗಳನು ಪೇಳಿ

ಧರೆಸುರರಿಗೆ ಧರ್ಮಮರ್ಮವರುಹಿದ

ಪರಿಸರ ಶ್ರೀಮಧ್ವಮುನಿಮತಸಿಂಧುವ

ಧರೆಯೊಳು ಮೆರೆಸಿದ ಗುರುವರ್ಯನೆ

ತುರುಕ ಭೂಪತಿಯಿಂದ ವರಹಜತಟದಿಹ

ವರಕ್ಷೇತ್ರಮಂಚಾಲಿಗ್ರಾಮ ಪಡೆದು

ಸಿರಿರಘುಪತಿಚರಣಾರ್ಚನೆಗೈಯ್ಯುತ್ತ

ಹರ್ಷದಿ ನೆಲಸಿದನು ಸುಕ್ಷೇತ್ರದಿ

ಸಿರಿವರಅಭಿನವಪ್ರಾಣೇಶವಿಠಲನ

ಚರಣವಾರಿಜಭೃಂಗ ಶರಣಾಂತರಂಗ 3

ಅಟ್ಟತಾಳ

ನಿತ್ಯದಿ ನೂತನ ಮಹಿಮೆಯ ತೋರುವ

ಅತ್ಯಂತ ವಿಸ್ಮಯಕಾರಿ ಪವಾಡವ

ಸತ್ಪಥ ತೋರುವ ಭೃತ್ಯರ ಸಲಹುವ

ಕೃತ್ತಿವಾಸಯುತ ಕಿತ್ತೂರು ರಾಜನ

ಕೃತ್ಯಭೀಖವ ಮನ್ನಿಸಿ ಕರುಣದಿ

ಸತ್ಯಧರ್ಮ ಸನ್ಮಾರ್ಗವ ತೋರಿದ

ಮತ್ತ ಯವನ ಭೂಪ ಆವಿಫಲವನೀಯೆ

ಸತ್ವದ ಫಲಪುಷ್ಪಗಳ ಮಾಡಿ ತೋರಿಸಿ

ಮತ್ರ್ಯರಿಗಾಶ್ಚರ್ಯಗೊಳಿಸಿದ ಜಗದೊಳು

ಮತ್ತವಿಳಿದು ಭೂಪ ಪಾದಾಕ್ರಾಂತನಾಗೆ

ಮತ್ತನ ಮನ್ನಿಸಿ ಮಂಚಾಲಿ ಪಡೆದನು

ಚಿತ್ತಜಪಿತದೂತ ಗುರು ರಾಘವೇಂದ್ರರ

ಉತ್ತಮ ಮಹಿಮೆಗೆ ಎಣೆಗಾಣೆ ನಮೊ ನಮೊ

ಸತ್ಯಭಿನವಪ್ರಾಣೇಶವಿಠಲನ ದಯದಿ

ನಿತ್ಯ ನೂತನ ಮಹಿಮೆ ತೋರಿ ಮೆರೆಯುವ ಗುರುವೆ 4

ಆದಿತಾಳ

ವರುಷವರುಷ ಹರಿಮಾಸ ದ್ವಿತಿಯ ಪರ

ಗುರುಗಳ ಪುಣ್ಯದಿನೋತ್ಸವ ಸುಜನರು

ಧರೆಯೊಳು ಎಲ್ಲೆಡೆ ಹರುಷದಿ ಮಾಳ್ಪರು

ವರಮಂತ್ರಾಲಯಕ್ಷೇತ್ರದಿ ವಿಭವದಿ

ಗುರುವರ ರಜತ ರಥವನೇರಿ ಮೆರೆಯುವ

ತರತರ ನೂತನ ವಾದ್ಯ ವಾದನದಿ

ಕರಿಗಳ ಮೇಲಿಹ ಭೇರಿತಾಡನದಿ 

ಪರಿಕರ ಕರದಿಹ ಕುಡಿ ಕೊಡೆ ಛಡಿ ಚಾ-

ಮರದ ಡಿಂಡಿಮ ತುತ್ತೂರಿ ನಾದದಿ 

ಧರೆಸುರನಿಕರದಿ ವೇದಸುಘೋಷದಿ

ಹರಿದಾಸರ ಭಜನೆಯ ಸುಮೇಳದಿ

ಶರಣರ ನರ್ತನ ಗಾನ ವಿನೋದದಿ

ಹರುಶ ನಿರ್ಭರದ ಜಯ ಜಯಕಾರದಿ

ಸುರಪ ಮುಖ್ಯ ಎರಡೆರಡು ಬೀದಿಯೊಳು

ಮೆರೆಯುತ ಬರುತಿಹ ಗುರುಗಳ ದರುಶನ

ದುರಿತ ಪಲಾಯನ ಪರಗತಿ ಸಾಧನ-

ವಿರುವುದು ನಿಜನಿಜ ಸಂಶಯ ಸಲ್ಲದು

ವರಯತಿರಾಜರು ಇರುವ ಕಾರಣದಿ

ಸುರಪನಪುರದಂತೆ ತೋರುವುದೀಸ್ಥಳ

ವರಹಜಧುನಿ ನಂದನವೆನಿಪುದು

ಕರಿವರ ಅಭಿನವಪ್ರಾಣೇಶವಿಠಲನ

ಚರಣದೊಲುಮೆಯ ಪಡೆದ ಗುರುರಾಜರಿರುವರಿಲ್ಲಿ 5

ಜತೆ

ಮೌನಿಸುಜಯೀಂದ್ರತೀರ್ಥರಿಗೊಲಿದ ಯತಿನಾಥ

ಮಾನ್ಯಭಿನವಪ್ರಾಣೇಶವಿಠಲನದೂತ

***