ರಾಗ - : ತಾಳ -
ರಾಮರಾಮ ರಾಮರಾಮ ಸೀತಾರಾಮನೆನ್ನಿರೊ l
ಕಾಮಕ್ರೋಧ ಲೋಭಮೋಹ ಮದಮತ್ಸರ ತ್ಯಜಿಸಿರೊ ll ಪ ll
ಶಶಿಧರನು ಸ್ಮರಿಸಿ ಜಗದಿ ವಿಷವನುಂಡು ದಕ್ಕಿಸಿಕೊಂಡ l
ವಸುಧಿಮ್ಯಾಲ ಕಂಡು ಕೇಳಿ ಪಶುಗಳಾಗಬ್ಯಾಡಿರೊ ll 1 ll
ಶಿಲಿಯ ತುಳಿದು ಲಲನಿ ಮಾಡಿದ ಬಲದಿ ಶಿವನ ಬಿಲ್ಲು ಮುರಿದ l
ಕುಲವು ನೋಡದೆ ವಲಿದ ವಾಲ್ಮೀಕ ವರದನೆನ್ನಿರೊ ll 2 ll
ಆಶಪಾಶದೊಳಗ ಬಿದ್ದು ಮೋಸವಾಗಿ ಕೆಡಲಿಬ್ಯಾಡಿ l
ವಾಸುದೇವನನ್ನ ನೆನೆದು ಭವಸಮುದ್ರ ದಾಟಿರೊ ll 3 ll
ಬರುವದೆಂದ ಭರವಸುಂಟೆ ನರಜನ್ಮ ದುರ್ಲಭಕೇಳಿ ಬುಧರ l
ಅರಿದ ಪರಿಯಲಿರುಳು ಹಗಲು ಹರಿಯ ಭಜಿಸಿರೊ ll 4 ll
ಹಲವು ಕರ್ಮಮಾಡಿ ದೇಹ ವ್ಯರ್ಥ ದಂಡಿಸಿ ಬಳಲಬ್ಯಾಡಿ l
ಸುಲಭದಿಂದ ಮುಕ್ತಿ ಕೊಡುವ ಕೃಷ್ಣವಿಟ್ಠಲ ರಾಮನೆನ್ನಿರೊ ll 5 ll
***