ರಾಗ – : ತಾಳ –
ಬಿಡದಿರು ಕೈಯ್ಯ ರಂಗ ಒಡೆಯ ಶ್ರೀ ನರಸಿಂಗ
ಬಡವನ ಮೇಲಪಾಂಗವಿಡುರಮಾಲಿಂಗಿತಾಂಗ ll ಪ ll
ನುಡಿವ ಮಾತುಗಳ ನಿನ್ನಡಿಗಳ ಸ್ತವವೆಂದು
ಒಡಂಬಡೊ ನಿಜ ದಾಸ ಭಿಡೆಯ ಮೀರದ ದೇವ ll 1 ll
ವಾರಿಜನಾಭ ನಿನ್ನ ಪ್ರೇರಣೆಯಿಂದ ಸರ್ವ
ಧಾರುಣಿವರರ ದಯಾರಸ ದೊರೆವುದು ll 2 ll
ಅಂಬುಜಾಲಧರಬಿಂಬಫಲಾಮೃತ
ಚುಂಬನಲೋಲ ನೀ ಬೆಂಬಲಾಗಿರು ll 3 ll
ಹರಿ ನಿನ್ನ ಕೃಪಾರಸವಿರಲು ಚತುರ್ವಿಧ
ಪುರುಷಾರ್ಥವೆಲ್ಲ ಸೇರಿ ಬರುವದೆಂದರಿದೆನು ll 4 ll
ದುರಿತ ರಾಶಿಗಳನ್ನು ತರಿವರೆ ಶಕ್ತನಾದ
ಪರಮಪಾವನ ಶೇಷಗಿರಿವರನೆಂದೆಂದಿಗು ll 5 ll
***