ಶ್ರೀಗೋಪಾಲದಾಸಾರ್ಯ ವಿರಚಿತ
ಶ್ರೀಹರಿ ಪ್ರಾರ್ಥನಾ ಸುಳಾದಿ
("ಏನಂಮೋಚಯಾಮಿ" ಎಂಬ ಹರಿವಾಕ್ಯದಂತೆ, ಶ್ರೀಹರಿ ಪ್ರಸಾದವೆ ಮುಖ್ಯ.
ಜೀವರುಗಳ ನಾನಾ ಸಾಧನ ಭಗವಂತನ ಆಧೀನ. ನಿನ್ನ ಚಿತ್ತದಲ್ಲಿದ್ದದ್ದು ಮಾಡಿಸು.
ಇನ್ನೊಂದು ನಾನೊಲ್ಲೆ ಎಂಬ ಪ್ರಾರ್ಥನೆ.)
ರಾಗ ವಸಂತ
ಧ್ರುವತಾಳ
ಕಾಯಾ ಕ್ಲೇಶವ ಬಡಿಸಿ ಕಂಡವರಿಗೆ ಹಾರೈಸಿ
ಸಾಯಾಸಬಟ್ಟು ನಾನಾ ಸಾಧನವನ್ನು ಮಾಡಿ
ಕಾಯಾ ನಿನ್ನ ಪ್ರೀತಿ ಆಯಿತೊ ಎಂದು ಎನ್ನ
ಸಾಯಾಸಕ್ಕೆ ಇನ್ನಾರು ಸರಿಯಿಲ್ಲ ಎಂದುಕೊಂಬೆ
ನ್ಯಾಯವೊ ಅನ್ಯಾಯವೊ ನಾನರಿತವನಲ್ಲ
ಆಯಾವ ನೀನೆ ಬಲ್ಲೆ ಅವರವರದು
ಜ್ಯೋಯಿಸಿಯ ಧರ್ಮವು ಆಗುವದ್ಹ್ಯಾಗೊ ಕಡಿಗೆ
ಮಾಯಾ ಮಾಡಲಿಬೇಡ ಮಾರಮಣ ಎನ್ನೊಡನೆ
ನ್ಯಾಯವೆಂದು ತಿಳಿದಿಪ್ಪೆ ನಾನು ಮಾಡುವ ಧರ್ಮ
ನ್ಯಾಯವೆಂಬೋದು ನೀನನ್ಯಾಯವ ಮಾಡುವಿನ್ನು
ನಾಯಕ ಕೇಳು ನಾ ಅನ್ಯಾಯ ಒಂದಾದ್ದೆಲ್ಲ
ನ್ಯಾಯವಾಗಿ ತೋರೋದು ನಿನ್ನ ಚಿತ್ತದಲ್ಲಿ
ಮಾಯಾರಹಿತ ನಮ್ಮ ಗೋಪಾಲವಿಟ್ಠಲ
ದಾಯಿಗರಿಗೊಪ್ಪಿಸದೆ ಆಯವರಿತು ಪೊರಿಯೊ ॥ 1 ॥
ಮಟ್ಟತಾಳ
ನಿನ್ನವನೆಂತೆಂದು ಪೇಳಿಕೊಂಬುವದಕ್ಕೆ
ಇನ್ನಿತಾದರು ಸಾಧನವೆನ್ನಲಿಲ್ಲ
ನಿನ್ನವರಲ್ಲಿ ಭಕುತಿ ಇನ್ನು ಮೊದಲಿಗೆ ಇಲ್ಲ
ನಿನ್ನ ವಾರುತಿಯಲ್ಲಿ ನಿನ್ನ ಕೀರುತಿಯಲ್ಲಿ
ನಿನ್ನ ದಾಸರು ಎಲ್ಲಿ ಆನೆಲ್ಲಿ ನರಗುರಿಯು
ಬಣ್ಣಗೆಟ್ಟವನಯ್ಯಾ ಪಬರಿದೆ ನಿನ್ನವನೆಂದು
ನನ್ನೊಳಗೆ ನಾನು ಮದ ಸೊಕ್ಕಿ ತಿರುಗಿ
ಧನ್ಯನೆಂದುಕೊಂಡು ಧೈರ್ಯದಲ್ಲಿ ಇಪ್ಪೆ
ನಿನ್ನ ಚಿತ್ತದಲಿ ಹೊಂದಿನ್ನು ನೀನೆ ಬಲ್ಲೆ
ಅನ್ಯ ದೈವರಗಂಡ ಗೋಪಾಲವಿಟ್ಠಲ
ನಿನ್ನ ದಯಾರಸವೊ ಇನ್ನೊಂದನರಿಯೆ ॥ 2 ॥
ರೂಪಕತಾಳ
ಹಾಡಿ ಸುಖಿಪರು ಕೆಲರು ಬೇಡಿ ಸುಖಿಪರು ಕೆಲರು
ಮಾಡಿ ಸುಖಿಪರು ಕೆಲರು ನೀಡಿ ಸುಖಿಪರು ಕೆಲರು
ನೋಡಿ ಸುಖಿಪರು ಕೆಲರೊಡನಾಡಿ ಸುಖಿಪರು ಕೆಲರು
ನಾಡ ಜೀವರಿಗೆ ನಾನಾಕು ಸಾಧನೆ ಉಂಟು
ಆಡುವ ನಾನಲ್ಲ ಬೇಡುವ ನಾನಲ್ಲ
ಪಾಡುವ ನಾನಲ್ಲ ಕಾಡುವ ನಾನಲ್ಲ
ನೀಡುವ ನಾನಲ್ಲ ಮಾಡುವ ನಾನಲ್ಲ
ಮಾಡಿಸಿ ಮಾಡುವ ಸಾಧು ಜೀವರ ಸಂಗ
ಕೂಡಿ ವೊಡನಾಡಿನ್ನು ನೋಡುವ ಭಾಗ್ಯವು
ಬೇಡಿ ಹಾರೈಸಿ ನಾ ಬೆನ್ನು ಬಿದ್ದೆನು ದೇವಾ
ರೂಢಿಗಧಿಕ ನಮ್ಮ ಗೋಪಾಲವಿಟ್ಠಲ
ಈಡು ಇಲ್ಲದ ದೈವ ಮಾಡು ಎನಗೆ ಕೃಪೆಯಾ ॥ 3 ॥
ಝಂಪೆತಾಳ
ಸ್ನಾನ ಸಂಧ್ಯಾನ ಜಪತಪದಿ ಅನುಷ್ಠಾನ
ದಾನ ಸತ್ಕರ್ಮಂಗಳಲ್ಲಿ ಎನಗೆ
ಏನಾಯಿತು ಇಷ್ಟೆ ಸಾಕೆಂಬ ವೈರಾಗ್ಯ -
ವಾನು ಕೊಡದಿರು ಎನಗೆ ಕರ್ಮಂಗಳಲಿ
ಹೀನರ ಸಂಗದಲ್ಲಿ ಇಟ್ಟು ಎನ್ನನು ಬಹು -
ದಿನಗಳ ಬದುಕಿಸೋಕಿಂತ ಹರಿಯೆ
ಜ್ಞಾನಿಗಳೊಡನೊಂದು ದಿನ ಬದುಕಿದದಕೆ ಸ -
ಮಾನ ಉಂಟೇನಯ್ಯಾ ಸರ್ವೋತ್ತಮಾ
ಮಾನಿಸ ಜನ್ಮವು ಮೇಲೆ ವೈಷ್ಣವನಾಗಿ
ಶ್ರೀನಾಥ ಸೃಜಿಸಿದೆಯೋ ಅವನಿಯೊಳಗೆ
ಕಾಣೆನೋ ನಾನಿದಕೆ ತಕ್ಕ ಸಾಧನಗಳು
ನೀನೆ ಗತಿ ಎನಗೆ ಮುಕುಂದನಂದಾ
ನೀನು ಕರುಣಿಸಿದರೆ ಸಕಲ ಸಾಧನ ತನ್ನಿಂ -
ತಾನೆ ಆಗುವದಯ್ಯಾ ತಪ್ಪಿಸದಲೆ
ಹಾನಿ ಲಾಭವು ಎರಡು ಎನಗೆ ಬಂದರು ನೀ -
ಧಾನಿಸಿ ನಿನ್ನ ತಿಳಿವೊ ಜ್ಞಾನನೀಯೊ
ದೀನರಕ್ಷಕ ರಂಗ ಗೋಪಾಲವಿಟ್ಠಲ
ನೀನೆ ಗತಿ ನಿನ್ನ ಬಿಡೆ ನಿತ್ಯತೃಪ್ತಾ ॥ 4 ॥
ತ್ರಿಪುಟತಾಳ
ನಾನು ದೋಷಕಾರಿಯೋ ನೀ ನಿರ್ದೋಷನು ದೇವಾ
ನಾನು ದುಃಖಭರಿತ ನೀನು ಸುಖಪೂರ್ಣ
ನಾನು ಅಜ್ಞಾನಿಯೊ ನೀನು ಜ್ಞಾನಪೂರ್ಣ
ನಾನು ಅಲ್ಪಗುಣನೋ ನೀನು ಗುಣಪೂರ್ಣ
ನಾನು ಅಸ್ವತಂತ್ರ ನೀನು ಸ್ವಾತಂತ್ರನೋ
ನಾನು ನಾಶವು ಇಲ್ಲಾ ನೀನು ನಾಶವು ಇಲ್ಲ
ನೀನು ಅನಾದಿ ನಿತ್ಯ ನಾನು ಅನಾದಿ ಭೃತ್ಯ
ನೀನು ಎನಗೆ ಬೇಕು ನಾನು ನಿನಗೆ ಬೇಕು
ನಾನೆಂಬುವರು ಬೇರೆ ಇಲ್ಲದಿದ್ದರಾಯಿತೆ
ನೀನೆಂಬುವದು ಇನ್ನು ಆರು ಬಲ್ಲರು ದೇವಾ
ಜ್ಞಾನಿ ಇವನೆಂದರೆ ಅಜ್ಞಾನಿ ಬ್ಯಾರುಂಟು
ದಾನಿ ಇವನೆಂದರೆ ದೀನನು ಬ್ಯಾರುಂಟು
ಜಾಣ ಇವನೆಂದರೆ ಜಡಮತಿ ಯೆಂಬರು ಉಂಟು
ಮಾನಿ ತಾನೆನೆ ಅಪಮಾನಿ ತಾ ಬ್ಯಾರುಂಟು
ಹೀನೆ ಎಂಬೊ ಅಹಂಕಾರವದು ಎನಗೆ ಇರಲಿ
ನಾನೆ ಕರ್ತನೆಂಬೋದೆನಗೆ ಎಂದಿಗೆ ಬೇಡ
ನಾನೆಂಬ ಅಸ್ವಾತಂತ್ರ ವಸ್ತುವಿದ್ದ ಕಾರಣ
ನೀನೆಂಬ ಸ್ವಾತಂತ್ರ ಪ್ರಕಟವಾಯಿತು ರಂಗ
ಏನೆಷ್ಟು ಸೌಭಾಗ್ಯವಿದ್ದ ಕಾಲಕ್ಕು ನಿನಗೆ
ದಾನ ಬೇಡುವ ಜೀವರಿಂದಲೆ ಶೋಭಿತಾ
ನೀನೆ ನಿನಗೆ ಬೇರೆ ಕೊಟ್ಟು ಕೊಂಡಾಡಿಯಾ
ನೀನೆ ನಿನಗೆ ತುತಿ ಮಾಡಿಕೊಂಡಿಯಾ ದೇವ
ಶ್ರೀನಾಥ ಬಾರಯ್ಯ ಗೋಪಾಲವಿಟ್ಠಲ
ಏನಾದರು ನಿನಗೆ ಎನಗೆ ಬಿಟ್ಟದ್ದು ಅಲ್ಲಾ ॥ 5 ॥
ಅಟ್ಟತಾಳ
ಎಂಟು ಶೇರಿನದೊಂದು ಘಂಟಿಯ ನಿರ್ಮಿಸಿ
ಒಂಟೀಲಿ ಇಟ್ಟಿನ್ನು ಹಿಡಿದು ಬಾರಿಸಿದರೆ
ಘಂಟೆಯಲ್ಲಿದ್ದ ನಾದ ಘಂಟಿಯಿಂದದ ತಿಳಿವದೆ
ಎಂಟು ತೊಲಿಯದೊಂದು ಸೊಂಟ ನಾಲಿಗೆಯನ್ನು
ಉಂಟಾದರಾಯಿತೆ ಘಂಟೆ ಶೋಭಿಸುವದು
ಘಂಟಿಯಂತೆ ನೀನು ನಾಲಿಗಿಯಂತೆ ನಾನು
ಘಂಟೆಯೊಳಗೆ ನಾಲಿಗಡಕವಾಗಿಪ್ಪೊದು
ಬಂಟ ನಾ ನಿನ್ನೊಳು ಅಡಕವಾಗಿಪ್ಪೆನು
ನೆಂಟತನವು ನಿನಗೆನಗೆ ಹೀಗುಂಟು ವೈ -
ಕುಂಠ ಮೂರುತಿ ರಂಗ ಗೋಪಾಲವಿಟ್ಠಲ
ಬಂಟರಿಂದಲೆ ನಿನ್ನ ಭಾಗ್ಯ ಶೋಭಿಸುವದು ॥ 6 ॥
ಆದಿತಾಳ
ಸಿರಿವಂತ ನೀನೆಂದು ಧರಿಯೊಳು ತೋರಿದ
ಪರಮ ಭಕುತನಾದ ದರಿದ್ರ ಸುದಾಮನೆ
ಹರಿ ನಿರ್ದೋಷ ನೀನೆಂದು ಸ್ಮರಿಸಿ ಜಗದೊಳಗೆ
ಹರಹಿದ ಅಜಮಿಳ ಪರಮ ದೋಷಕಾರಿಯೆ
ಹರಿ ಸರ್ವೋತ್ತಮನೆಂದು ನರಗೆ ಅಂಜದಲಿದ್ದ
ತರುಳ ಪ್ರಲ್ಹಾದ ಪರಮ ಛಲ ಪಾತಕಿಯೆ
ಹರಿ ಕಾರ್ಯವ ಅರಿತು ಅಸುರಗೆ ರಾಜ್ಯವ ಸೋತು
ಧರಿ ಚರಿಸಿದ ಪಾಂಡವರು ಅಜ್ಞಾನಿಗಳೆ
ಹರಿ ನೀ ಭಕ್ತರ ವಶಕರನು ಎಂಬುವದಕ್ಕೆ
ಪಿರಿದು ಕಾಲ ಕಟ್ಟಿದ ದುರುಳಳೇನಾ ಯಶೋದೆ
ಹರಿ ನಿನ್ನ ಶರಣರಾ ಸಿರಿಯು ಇನ್ನೆಂತೆಂತು
ಸರಿಗಾಣೆ ನಾ ನಿನ್ನ ಶರಣರಿಗೆ ನಮೊ ಎಂಬೆ
ಪರಮ ದಯಾಳುವೆ ಗೋಪಾಲವಿಟ್ಠಲ
ಮೊರೆ ಹೊಕ್ಕೆ ನಿನಗಿನ್ನು ನೆರೆ ಬದುಕಿಸನುಗಾಲಾ ॥ 7 ॥
ಜತೆ
ನಿನ್ನ ಚಿತ್ತದಲಿದ್ದದೆನಗೆ ಮಾಡಿಸು ದೇವ
ಇನ್ನೊಂದು ಆನೊಲ್ಲೆ ಗೋಪಾಲವಿಟ್ಠಲ ॥
***