ರಾಗ: ಸುರಟಿ ತಾಳ: ಛಾಪು
ಮಂಗಳ ಗುರು ರಾಘವೇಂದ್ರನಿಗೆ
ಮಂಗಳ ಸುಖಪೂರ್ಣ ಚಂದ್ರನಿಗೆ ಪ
ನಂಬಿಕೆ ಛಲವನು ಪ್ರಕಟಿಸುತ
ಕಂಭದಿ ನರಹರಿ ಕರೆದವಗೆ
ಕಂಬನಿಗರೆವರ ಕಾಯುವಗೆ ಭಕ್ತಿ
ಒಂಬತ್ತುವಿಧಬಲ್ಲ ನಿಪುಣನಿಗೆ 1
ಮೋದದಿ ನರಹರಿ ಬಾರೆಂದು ಕರೆಯೆ
ಮೋದದ ತಾಣಕೆ ಹೋಗದಲೆ
ಮೋದವಗರೆಯಲು ಸುಜನರಿಗೆಲ್ಲ
ತಾ ದಯದಿ ಇಲ್ಲೆ ನಿಂದವಗೆ 2
ಸೀತಾರಾಮವಿಠಲದೇವಗೆ
ಪ್ರೀತಿಯ ದೂತನಾದವಗೆ
ಖ್ಯಾತ ಶ್ರೀತುಂಗೆಯತಟದಲ್ಲಿ ತಾ ನಿಂದು
ದೂತರ ಸಲಹುತಲಿರುವವಗೆ 3
****