..
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯನೋಡಿವನ ಪರಿಯ ಚಿತ್ತಜನ ಪೆತ್ತ ಹರಿಯಭಕ್ತನಿವನತಿ ಶಕ್ತನರಿಯ ಪ .
ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದಅಸದುಕ್ತಿಯ ಜರೆದ ಅಹಿತರೆಲ್ಲರ ಮುರಿದಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದಹೃಷೀಕೇಶಗೆ ವರದ ಪಿರಿಯ ದೈವನೆಂದೊರೆದ1
ಹಿಂದೆ ಹನುಮಂತನಾದ ಹೀನರಾವಣನ್ನ ಪುರದಮಂದಿಯನೆಲ್ಲರ ಸದೆದ ಮನೆಯ ತನ್ನ ಬಾಲದಮಂದ ವಹ್ನಿಯಿಂದುರುಪಿದÀ ಮರಗಳ ಚೆಂದದಿ ಕೆಡಹಿದಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ 2
ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಯಾಸನ್ನನೊದ್ದತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದಸ್ವಾಮಿ ಹಯವದನನಿರ್ದ ಸೀಮೆಯರ್ತಿಯ ಬಿಡಿಸಿಬಾಳ್ದಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ3
***
ಭಾವಿಸಮೀರರು ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರ ಕೃತಿ
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯ
ನೋಡಿವರ ಪರಿಯ ಚಿತ್ತಜನ ಪೆತ್ತ ಹರಿಯ-
ಭಕ್ತನಿವನತಿ ಶಕ್ತನರಿಯ ॥
ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದ
ಆಸದುಕ್ತಿಯ ಜರೆದ ಅಹಿತರೆಲ್ಲರ ಮುರಿದ
ಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದ
ಹೃಷೀಕೇಶನೆ ವರದ ಹಿರಿಯ ದೈವನೆಂದೊರೆದ ॥
ಹಿಂದೆ ಹನುಮಂತನಾದ ಹೀನರಾವಣನ್ನ ಪುರದ
ಮಂದಿಯನೆಲ್ಲರ ಸದೆದೆ ಮನೆಯ ತನ್ನ ಬಾಲದ
ಮಂದ ವಹ್ನಿಯಿಂದುರುಪಿದ ಮರಗಳ ಚಂದದಿ ಕೊಡಹಿದ
ಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ॥
ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಶಾಸನ್ನನೊದ್ದ
ತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದ
ಸ್ವಾಮಿ ಹಯವದನನಿರ್ದ ಸೀಮೆಯ ಆರ್ತಿಯ ಬಿಡಿಸಿಬಾಳ್ದ
ಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ॥
***
ಶ್ರೀವಾದಿರಾಜಗುರುಸಾರ್ವಭೌಮರು ಪಲ್ಲವಿಯಲ್ಲಿಯೇ ಶ್ರೀಮದಾಚಾರ್ಯರು ಎಂತಹವರೆಂಬುದನ್ನು ತಿಳಿಸಿಬಿಟ್ಟಿದ್ದಾರೆ.
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯ
ನೋಡಿವರ ಪರಿಯ ಚಿತ್ತಜನ ಪೆತ್ತ ಹರಿಯ-
ಭಕ್ತನಿವನತಿ ಶಕ್ತನರಿಯ ॥
ಸುತ್ತಲು ಎಂದರೆ ನಮ್ಮ ಸುತ್ತಮುತ್ತಲೆಂಬಂತಹ ಸಣ್ಣ ಪ್ರಮಾಣವಲ್ಲ ೧೪ ಲೋಕಗಳ ಸುತ್ತಲು , ಸುತ್ತಿ ನೋಡಿದರೂ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಿಗೆ ಸರಿಸಮವಾದ , ಪಿರಿಯ ಸುಖಮುನಿಗೆ - ಪಿರಿಯ - ಶ್ರೇಷ್ಠರಾದ, ಉತ್ತಮರಾದ ಗುರುಗಳು ಯಾರೂ ಇಲ್ಲ. ಇಲ್ಲ. ಇಲ್ಲ. ಎಂದು.
ಯಾರಿವರು ಎಂದರೆ ಚಿತ್ತಜನ ಪೆತ್ತ ಹರಿಯ ಭಕ್ತನಿವನು ಅತಿ ಶಕ್ತನು ಅರಿಯ - ಚಿತ್ತಜನ ಪೆತ್ತಂತಹ , ಪರಮಾತ್ಮನ ಮನಸ್ಸಿನಿಂದ ಹುಟ್ಟಿದವರಾದ ಮನ್ಮಥನನ್ನು ಪೆತ್ತಂತಹ ಪರಮಾತ್ಮನ ಭಕ್ತರಾದವರು. ಅರಿತು ನೋಡಲು ಅತಿಶಕ್ತಿವಂತರು- ಬಲದೇವತೆ ಎಂದರೆ ನಮ್ಮ ಮುಖ್ಯಪ್ರಾಣದೇವರೊಬ್ಬರೇ ಅಲ್ಲವೇ? ಬಲ ಎಂದರೆ ದೇಹಬಲ ಮತ್ತು ಜ್ಞಾನ ಬಲ ಎರಡರಲ್ಲೂ ಇವರೇ ಉತ್ತಮ ಎನ್ನುವುದನ್ನು ಹೇಳುತ್ತ ಮಿಕ್ಕ ಮೂರು ನುಡಿಗಳಿಂದ ಸಿದ್ಧಪಡಿಸುತ್ತಾರೆ. ಋಜುಗಳು ಅವತಾರ ಮಾಡಿಬಂದರೂ ಸಹ ಅವರ ಶಕ್ತಿ ( ದೇಹ ಮತ್ತು ಜ್ಞಾನ) ಕಡಿಮೆಯಾಗುವುದಿಲ್ಲ. ಮೂಲ ರೂಪದಲ್ಲಿ ಯಾವರೀತಿಯ ಶಕ್ತಿ ಇರುತ್ತದೆಯೋ ಅದೇ ರೀತಿಯ ಶಕ್ತಿ ಮೊದಲಾದುವು ಎಲ್ಲ ಅವತಾರಗಳಲ್ಲಿಯೂ ಯಥಾವತ್ತಾಗಿರುತ್ತದೆ. ಋಜುಗಳನ್ನು ಹೊರತುಪಡಿಸಿ ಮಿಕ್ಕ ದೇವತೆಗಳು ಆ ರೀತಿಯಲ್ಲ. ಎಂಬುದನ್ನರಿಯಲೆಂದೇ ಇಲ್ಲಿ ಭಕ್ತನಿವನು, ಅತಿ ಶಕ್ತನು ಅರಿಯ ಅಂತಾರೆ.
ಮತ್ತೆ ಚಿತ್ತಜನ ಪೆತ್ತ ಎಂಬುವ ಪ್ರಯೋಗವೇ ಮಾಡಲು ವಿಶೇಷಕಾರಣವೆಂದರೆ - ಕಾಮಜನಕನಾದ ಪರಮಾತ್ಮನ ಪ್ರೀತಿಯ ಪುತ್ರರು ಪ್ರಥಮಾಂಗ ಎಂದೇ ಪ್ರಸಿದ್ಧರಾದ ಶ್ರೀಪ್ರಾಣದೇವರು ತಮ್ಮ ಮೂರೂ ಅವತಾರಗಳಲ್ಲಿಯೂ ಕಾಮನನ್ನು ಗೆದ್ದವರೆಂಬುದರ ವಿಷಯವನ್ನು ತಿಳಿಸಲು ಇಲ್ಲಿ ಚಿತ್ತಜನ ಪೆತ್ತ ಎಂಬುವ ಪ್ರಯೋಗಮಾಡಿದ್ದಾರೆ. (ಪ್ರತಿಯೊಂದು ಕೃತಿಯಲ್ಲಿಯೂ ನಾವು ಕಾಣುತ್ತಿರ್ತೇವೆ ಆದಿಮೂರುತಿ , ಪನ್ನಂಗಶಯನ, ಮೂಜಗದೊಡೆಯ ಹೀಗೆ ವಿಶೇಷಣಗಳ ನಂತರ ಅಂಕಿತನಾಮದೊಂದಿಗೆ ಅಂಕಿತನಾಮದ ಪ್ರಯೋಗವಾಗುತ್ತದೆ. ಹೀಗಾಗಿ ಆಯಾ ವಿಶೇಷಣಗಳನ್ನನುಸರಿಸಿ ಅಲ್ಲಿಯ ಕೃತಿಯ ವಿಷಯದ ವೈಶಿಷ್ಟ್ಯವಿರುತ್ತದೆ) ಹಾಗೆಯೇ ಇಲ್ಲಿ ಜಿತ್ತಜನಪೆತ್ತ ಎಂಬುದರ ಪ್ರಯೋಗದಿಂದ ಶ್ರೀಮದಾಚಾರ್ಯರು ಪರಮಾತ್ಮನಲ್ಲಿ ಭಕ್ತಿಯನ್ನು ಹೊರತುಪಡಿಸಿ ಯಾವ ಕಾಮನೆಗಳನ್ನು ಬಯಸದವರು, ಇಲ್ಲದವರು ಎಂದು ಅರ್ಥೈಸಿಕೊಳ್ಳಬೇಕು.
ಇದೇ ವಿಷಯವನ್ನೇ ಮುಂದುವರಿಸುತ್ತ ಮೊದಲ ನುಡಿಯಲ್ಲಿ
ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದ
ಆಸದುಕ್ತಿಯ ಜರೆದ ಅಹಿತರೆಲ್ಲರ ಮುರಿದ
ಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದ
ಹೃಷೀಕೇಶನೆ ವರದ ಹಿರಿಯ ದೈವನೆಂದೊರೆದ ॥
ವಿಷಯಂಗಳ ತೊರೆದವರು ಎಂದು. - ವಿಷಯಾಸಕ್ತಿ ಇಲ್ಲದವರು, ಪರಮೋತ್ಕುಷ್ಟವಾದ ಪರಮಾತ್ಮನೇ ಹಿರಿದೈವವೆಂದು ಸಾರುವ ಮಧ್ವಶಾಸ್ತ್ರವನ್ನು ಸ್ಥಾಪಿಸಿ, ಮೆರೆದವರು, ಶಾಸ್ತ್ರದ ವಿಚಾರಗಳನ್ನು ತಪ್ಪಾಗಿ ಉಲ್ಲೇಖಮಾಡಿದವುಗಳನ್ನು ಜರೆದವರು, ಮಾಯಿಮತಗಳನ್ನು ಮುರಿದವರು ಶ್ರೇಷ್ಠ ಋಷಿ, ಯಮಿಕುಲೋತ್ತಮರು ನಮ್ಮ ಜಗದ್ಗುರುಗಳಾದ ಶ್ರೀಮದಾಚಾರ್ಯರು ನಮ್ಮನ್ನು ಪೊರೆದವರು,
ರಸಿಕರರ್ಥಿಯ ಕರೆದ - ಪರಮಾತ್ಮನಲ್ಲಿ, ಶಾಸ್ತ್ರದಲ್ಲಿ ಯಾರು ರಸಿಕರಾಗಿದ್ದಾರೆಯೋ ಅಂತಹ ಜನರ ಅರ್ಥಿಯನ್ನು ಪ್ರಾರ್ಥನೆಯನ್ನು ಮನ್ನಿಸಿ ಆ ಸಜ್ಜನರನ್ನು ಹತ್ತಿರ ಕರೆದರು, ಅಂದರೆ ಅಸದುಕ್ತಿಯನ್ನು ನುಡಿದವರನ್ನು ದೂರವಿಟ್ಟರು. ಯಾರು ಶಾಸ್ತ್ರದಲ್ಲಿ ಆಸಕ್ತರೋ ಅವರನ್ನು ತನ್ನೆಡೆಗೆ ಕರೆದು ಅನುಗ್ರಹಮಾಡಿದರೆಂಬುದನ್ನು ತಿಳಿಯಬೇಕು
ಹೃಷೀಕೇಶನೆ ವರದ ಹಿರಿಯ ದೈವವೆಂದೊರೆದವರು. ಇಲ್ಲಿನೂ ಸಹ ಹೃಷೀಕೇಶನೆ ಎಂದು ಯಾಕೆ ಪ್ರಯೋಗ ಮಾಡಬೇಕಿತ್ತು? ಕೃಷ್ಣ, ರಾಮ ಅನ್ನಬಹುದಿತ್ತಲ್ವಾ? ಹೃಷೀಕ - ಎಂದರೆ ಹನ್ನೊಂದನೆಯ ಇಂದ್ರಿಯ, ಮನಸ್ಸು. ಮನಸ್ಸಿಗೆ ಒಡೆಯ ಪರಮಾತ್ಮನೇ ಹಿರಿಯ ದೈವ ಎಂದು ಇಡೀ ಜಗತ್ತಿನಲ್ಲಿ ಸಾರಿದವರು ಸ್ಥಾಪನೆಮಾಡಿದವರು.
ಹಿಂದೆ ಹನುಮಂತನಾದ ಹೀನರಾವಣನ್ನ ಪುರದ
ಮಂದಿಯನೆಲ್ಲರ ಸದೆದೆ ಮನೆಯ ತನ್ನ ಬಾಲದ
ಮಂದ ವಹ್ನಿಯಿಂದುರುಪಿದ ಮರಗಳ ಚಂದದಿ ಕೊಡಹಿದ
ಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ॥
ಎರಡನೆಯ ನುಡಿಯಲ್ಲಿ ಶ್ರೀಮದಾಚಾರ್ಯರೇ ಹಿಂದೆ ಹನುಮಂತನಾಗಿದ್ದಾಗ ಮಾಡಿದ ಅದ್ಭುತ ಕಾರ್ಯಗಳನ್ನು ತಿಳಿಸುತ್ತಾರೆ. ಇಲ್ಲಿ ಮಂದ ವಹ್ನಿಯಿಂದುರುಪಿದ ಈ ಪ್ರಯೋಗ ವಿಶೇಷವಾಗಿದೆ.
ಮಂದ ವಹ್ನಿ(ಆಗ್ನಿ, ಬೆಂಕಿ) - ಬಾಲಕ್ಕೆ ಹಚ್ಚಿದ ಸಣ್ಣಗಾತ್ರದ ಬೆಂಕಿಯಿಂದ ಇಡೀ ಲಂಕಾಪುರವನ್ನು ಸುಟ್ಟಿದ ಎಂದು ಸಾಧಾರಣ ಅರ್ಥ ತೆಗೆದುಕೊಳ್ಳಬಹುದು.
ಮಂದ ವಹ್ನಿ - ಗಾಳಿ, ಬೆಂಕಿ ಇಬ್ಬರು ಸಖರು ಎಂದು ಹೇಳುತ್ತಾರೆ ಆದರೆ ಇವರಿಬ್ಬರೂ ಸಮವಂತೂ ಆಗುವುದಿಲ್ಲ. ಗಾಳಿ ಅರ್ಥಾತ್ ವಾಯುದೇವರು ಅಗ್ನಿದೇವರಿಗಿಂತಲೂ ದೊಡ್ಡವರು ಎಂದು ತೋರಿಸುವುದಕ್ಕೆ ಮಂದ ವಹ್ನಿ ಎನ್ನುವ ಪ್ರಯೋಗ ಶ್ರೀ ರಾಜರು ಮಾಡಿದ್ದರೆಂದು ಅರ್ಥೈಸಬಹುದು.
ಜೊತೆಗೆ ಲಂಕಾಪುರ ಬ್ರಹ್ಮದೇವರ ವರದಿಂದ ಯಾವುದೇ ರೀತಿಯ ಪರಿಣಾಮಗಳಿಂದ ತೊಂದರೆಗೆ (Airproof,fireproof,bomb proof etc.) ಒಳಗಾಗದಂತೆ ಇದ್ದು, ಬಂಗಾರದಿಂದ ನಿರ್ಮಾಣಮಾಡಿದ ಪಟ್ಟಣವದು. ಅಂತಹ ವರಬಲದಿಂದ ಕೂಡಿದ ಪಟ್ಟಣವನ್ನು ಮಂದಾಗ್ನಿಯಿಂದ ಅಂದರೆ ಸಣ್ಣ ಬೆಂಕಿಯಿಂದ ನಮ್ಮ ಮುಖ್ಯಪ್ರಾಣದೇವರು ಸುಟ್ಟರು ಎನ್ನುವುದು ವಿಶೇಷ. ಬ್ರಹ್ಮದೇವರ ವರಗಳನ್ನು ಮೀರಲು ಮತ್ತೊಬ್ಬ ಋಜುಗಳಾದ ಹನುಮಂತದೇವರಿಗೆ ಮಾತ್ರ ಹೇಗೆ ಸಾಧ್ಯವೋ ಹಾಗೆಯೇ ಆ ಸೂಕ್ಷ್ಮಗಳನ್ನು ತಿಳಿಸಲು ಮತ್ತೊಬ್ಬ ಋಜುಗಳಾದ ಶ್ರೀವಾದಿರಾಜರಿಗೆ ಮಾತ್ರ ಸಾಧ್ಯ ಎನ್ನುವುದನ್ನು ನಾವು ತಿಳಿದರೆ ಶ್ರೀಭಾವಿಮರುತರ ಪ್ರಾಮುಖ್ಯತೆ ನಮಗೆ ತಿಳಿಯುತ್ತದೆ.
ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಶಾಸನ್ನನೊದ್ದ
ತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದ
ಸ್ವಾಮಿ ಹಯವದನನಿರ್ದ ಸೀಮೆಯ ಆರ್ತಿಯ ಬಿಡಿಸಿಬಾಳ್ದ
ಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ॥
ಹನುಮದವತಾರದ ನಂತರ ಭೀಮಸೇನದೇವರಾಗಿದ್ದಾಗ ಮಾಡಿದ ವಿಷಯಗಳನ್ನು ಕುರುಸೇನೆಯನ್ನು ನಾಶಮಾಡಿದ್ದನ್ನು ತಿಳಿಸುತ್ತ ಅದೇ ಭೀಮಸೇನನೇ ಆ ಮಹಾ ಪರಾಕ್ರಮರಾದ ಹನುಮಂತದೇವರೇ ಶ್ರೀಮದಾಚಾರ್ಯರು ಎಂದು ನಿಗಮಸಿದ್ಧ ಅಂತಾರೆ. ಮತ್ತೊಂದು ಭೀಮಸೇನದೇವರ ಮಹಿಮೆಯಲ್ಲಿಯೇ ಶ್ರೀಮದಾಚಾರ್ಯರನ್ನು ಸೇರಿಸಿರುವ ಓಳಾರ್ಥವೆಂದರೆ ಆ ಭೀಮಸೇನದೇವರ ರೂಪದಿಂದ ಹೊರಟಿದ್ದೇ ಶ್ರೀಮದಾಚಾರ್ಯರ ಅವತಾರವಾಗಿದ್ದು. ಇದನ್ನೇ ಭೈಮೀತನುಃ ಎಂದು ತಿಳಿಸಿದ್ದಾರೆ.
ಹನುಮ, ಭೀಮ, ಮಧ್ವರು ಮೂವರೂ ಒಬ್ಬರೇ ಎನ್ನುವುದನ್ನು ವೇದಗಳೂ ಸಾರುತ್ತಿವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀಮದಾಚಾರ್ಯರ ತತ್ವಗಳನ್ನರಿತು ಅನುಸಂಧಾನದಲ್ಲಿಟ್ಟು ಬಾಳುವವರಿಗೆ ಮಾತ್ರ ಶ್ರೀ ಭಾರತೀರಮಣ ಮುಖ್ಯಪ್ರಾಣ, ಮಧ್ವಾಂತರ್ಗತ ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ದೊರೆಯುತ್ತದೆ ಎಂದು ಶ್ರೀಮದಾಚಾರ್ಯರನ್ನು ಸ್ತುತಿಸಿ ಹೊಗಳಿದ, ಅವರ ಮಹಿಮೆ ತಿಳಿಸಿದ ಶ್ರೀ ರಾಜರಿಗೆ ಭಕ್ತಿಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತಾ..
-padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***