ಹರಷದಿ ತಾ ಸಖಿ ತ್ವರದಿ ಆರುತಿಯ
ದ್ವಿರದ ವರದ ಶಿರಿನರಹರಿಗೆ ಪ
ನಿಗಮ ತಂದವಗೆ ನಗಧರ ಕ್ರೋಢಗೆ
ಮಗುವಿನ ಸಲಹಿ ಜಗವ್ಯಾಪಿಸಿದಗೆ
ಭೃಗುಜಾ, ರಘುಜಾ ವ್ರಜಜಾರ್ತಿ
ಹರಣ ವಿಗತವಸನ ತುರುಗನೇರಿದಗೆ 1
ಗರುಡ ಗಮನಗೆ ಶರಧಿಶಯನಗೆ
ಸುರನದಿ ಪಿತ ಭೂಸುರ ಪ್ರಿಯಗೆ
ಅರುಣಾ, ಚರಣಾ ಕರುಣಾಕರಮಂ-
ದರಧರ ಶರಣರ ಪೊರೆವ ಸಿರಿವರಗೆ 2
ಛಳಿಮಳೆ ಸಹಿಸುತ ಛಲದಲಿಧೇನಿಪ
ಬಲುವಿಧ ಭಕ್ತಾವಳಿ ಹೃನ್ಮಧ್ಯದಿ
ಪೊಳೆವಾ, ನಲಿವಾ ಕಳೆವಾಘವ ಭೂ-
ವಲಯದಿ ಕಾರ್ಪರ ನಿಲಯ ನರಹರಿಗೆ 3
****