Showing posts with label ಎನ್ನ ಜ್ಞಾನಗಳೆಲ್ಲ ಎನ್ನ gopala vittala ankita suladi ಪ್ರಾರ್ಥನಾ ಸುಳಾದಿ ENNA JNANAGALELLA ENNA PRARTHANA SULADI. Show all posts
Showing posts with label ಎನ್ನ ಜ್ಞಾನಗಳೆಲ್ಲ ಎನ್ನ gopala vittala ankita suladi ಪ್ರಾರ್ಥನಾ ಸುಳಾದಿ ENNA JNANAGALELLA ENNA PRARTHANA SULADI. Show all posts

Friday 1 October 2021

ಎನ್ನ ಜ್ಞಾನಗಳೆಲ್ಲ ಎನ್ನ gopala vittala ankita suladi ಪ್ರಾರ್ಥನಾ ಸುಳಾದಿ ENNA JNANAGALELLA ENNA PRARTHANA SULADI

Audio by Mrs. Nandini Sripad

 ಶ್ರೀಗೋಪಾಲದಾಸಾರ್ಯ ವಿರಚಿತ  ಪ್ರಾರ್ಥನಾ ಸುಳಾದಿ 


(ಪ್ರಮೇಯ . ಬ್ರಹ್ಮಾದಿ ತೃಣಾಂತ ಸಕಲ ಜೀವರ ಜ್ಞಾನೇಚ್ಛಾಕ್ರಿಯಾ ವ್ಯಾಪಾರ ಶ್ರೀಹರಿಯಾಧೀನ. 

ಶ್ರೀಹರಿಯೇ ಸರ್ವಕರ್ತಾ ಕಾರಯಿತಾ. ಜೀವರು ಅಸ್ವಾತಂತ್ರರು. 

ನಾವಾಡುವ ಮಾಡುವ ವ್ಯಾಪಾರ ನಿನ್ನಾಧೀನವೆಂದು ಪ್ರಾರ್ಥನೆ.) 


ರಾಗ ಬಾಗೇಶ್ರೀ 


ಧ್ರುವತಾಳ 


ಎನ್ನ ಜ್ಞಾನಗಳೆಲ್ಲ ಎನ್ನ ಧ್ಯಾನಗಳೆಲ್ಲ

ಎನ್ನ ಮಾನಗಳೆಲ್ಲ ಎನ್ನ ಸ್ನಾನಗಳೆಲ್ಲ

ಎನ್ನ ಮಂತ್ರಗಳೆಲ್ಲ ಎನ್ನ ತಂತ್ರಗಳೆಲ್ಲ

ಎನ್ನ ದಾನಂಗಳೆಲ್ಲ ಎನ್ನ ಧರ್ಮಂಗಳೆಲ್ಲ

ಎನ್ನ ತೀರ್ಥಯಾತ್ರೆಯೆಲ್ಲ ಎನ್ನ ಯಾಗಂಗಳೆಲ್ಲ

ಎನ್ನ ಪುಣ್ಯಗಳೆಲ್ಲ ಎನ್ನ ಕೌಶಲ್ಯವೆಲ್ಲ

ಇನ್ನಿದರೊಳಗಿನ್ನು ಎನ್ನಿಂದಾದ ಸಾಧನ -

ವನ್ನು ಲೇಶವಾದರು ಕಣ್ಣಿಲಿ ಕಂಡಿದ್ದಿಲ್ಲ

ನಿನ್ನ ಸ್ವಭಾವವಯ್ಯಾ ನಿನ್ನ ಕರುಣಾರಸಕಿನ್ನು

ಆನೇನೆಂಬೆ ಎನ್ನೊಡೆಯನೆ ಕೇಳು

ಎನ್ನ ಕರ್ತೃತ್ವಗಳು ಇನ್ನು ಮುನ್ನಾದದಲ್ಲ

ನಿನ್ನ ಆಧೀನವಯ್ಯ ಎನ್ನ ಫಲಾಫಲವು

ಮನ್ನಣಿ ಮಾಡಿಸುವಿ ಅನ್ಯರಲಿಂದ ನೀನು

ಮನ್ನಣಿಯನು ಕೊಂಬೆ ಎನ್ನಲ್ಲಿ ನಿಂತುಕೊಂಡು

ನಿನ್ನ ಭಕ್ತರವರನ್ನು ಪಾಲಿಸೊ ಬಗೆ

ನಿನ್ನವರ ಮಹಿಮೆ ನೀನೆ ಬಲ್ಲಿಯೊ ದೇವ

ನಿನ್ನನೆ ಗತಿ ಎಂದು ಬಿನ್ನಪ ಚಿತ್ತೈಸು

ಘನ್ನ ದಯಾನಿಧಿಯೆ ಪನ್ನಗಶಯನ ಗೋಪಾಲವಿಟ್ಠಲರೇಯಾ

ನಿನ್ನನೆ ನಿನ್ನನೆ ನಿನ್ನನೆ ಮೊರೆಹೊಕ್ಕೆ ॥ 1 ॥ 


ಮಟ್ಟತಾಳ 


ಸಿರಿ ಅಜಭವ ಸುರ ಸನಕಾದಿಗಳಿಗೆ

ಹರಿ ನೀ ಚಲಿಸದಿರೆ ಬೆರಳು ಆಡಿಸಲಿನ್ನು

ಥರವಲ್ಲವೆಂತೆಂದು ವರ ಶ್ರುತಿ ಸ್ಮೃತಿಗಳು

ಪರಿಪರಿಯಲಿ ಸ್ತುತಿಸಿ ಅರಸಿ ಕೊಂಡಾಡಲು

ಅರಿಯದೆ ನಾ ವ್ಯರ್ಥ ಮರಳು ಕರ್ತೃತ್ವಾ

ಧರಿಸಿಕೊಂಡು ಇನ್ನು ಬರಿದೆ ದಣಿದೆನಯ್ಯಾ

ಪರಮ ಮೂರ್ಖ ನಾನು ಮೊರೆಹೊಕ್ಕೆ ಮೊರೆಹೊಕ್ಕೆ

ಮರದದ್ದೆಲ್ಲ ನೀನು ಅರವು ಮಾಡೆನಗೀಗ

ಕರುಣಾಕರ ರಂಗ ಗೋಪಾಲವಿಟ್ಠಲ

ಕರುಣಾಳೆಂಬುವದು ಅರಿಯದಾದೆ ನಿನ್ನ ॥ 2 ॥ 


ರೂಪಕತಾಳ 


ಕರ ಚರಣಂಗಳ ಚೇಷ್ಟಿ ಪರಿ ವ್ಯಾಪಾರವು ಎನ್ನಿಂ -

ದರಿದು ಮಾಡಿದ್ದರೆ ಅರಿಯದಲೆ ಎನ್ನ

ಬೆರಳಿಂದ ಕಣ್ಣನು ಇರಿದುಕೊ ಬಲ್ಲಿನೆ

ಚರಣದಿಂದಲಿ ಮುಳ್ಳು ಭರದಿಂದ ತುಳಿವೆನೆ

ಮರಳಿ ಎನ್ನ ಜಿಹ್ವೆ ಮರದು ನಾ ಕಡಿವೆನೆ

ತೆರಿವೆನೆ ನೀ ಬಾಯನು ತೆರಿಸದಿದ್ದರೆ ನಾನು

ಹರಿಯೆ ನೀ ಕರ್ತನಿರೆ ಬರಿದೆ ನಾ ಕರ್ತೆಂದು

ಉರಲು ಹಾಕಿಸಿಕೊಂಡು ಗುರು ಗುರು ಗುಟ್ಟುವೆನೆ

ಶರಣರ ಪಾಲಕ ಗೋಪಾಲವಿಟ್ಠಲ

ಪೊರೆಯೆನ್ನ ಧೊರಿಯೆ ನೀ ಪರಿಪರಿಯಿಂದಲಿ ॥ 3 ॥ 


ಝಂಪೆತಾಳ 


ಸರ್ವರಿಗೆ ಪ್ರೇರಕ ಸರ್ವಕರ್ತಾ ಭೋಕ್ತಾ

ಸರ್ವತ್ರದಲಿ ವ್ಯಾಪ್ತ ಸರ್ವ ಶಬ್ದ ವಾಚ್ಯ

ಸರ್ವ ಗುಣ ಪರಿಪೂರ್ಣ ಸರ್ವ ದೋಷದೂರ

ಸರ್ವ ಜ್ಞಾನಗಮ್ಯ ಸರ್ವ ಶಕ್ತಿ ಮೂರ್ತಿ

ಸರ್ವೇಶ ಚಲುವ ಗೋಪಾಲವಿಟ್ಠಲರೇಯಾ

ಸರ್ವಂತರಿಯಾಮಿ ಸಾರ್ವಭೌಮ ನಮೋ ॥ 4 ॥ 


ತ್ರಿವಿಡಿತಾಳ 


ಬಂದವನು ನೀನೆ ಭಕ್ತರ ಮನದಲ್ಲಿ

ನಿಂದವನು ನೀನೆ ಪಂಢರಪುರದಲ್ಲಿ

ತಂದೆಯಾಗಿ ಎನಗೆ ತಾಯಿಯಾಗಿ ಎನಗೆ

ಬಂಧುವಾಗಿ ಎಮಗೆ ಸಂದೇಹವಿಲ್ಲದೆ

ಹಿಂದೆ ಮುಂದೆ ಏಕಾಗಿ ಒಂದೆ ಪರಿಯಲಿನ್ನು ಸಕಲ ಕಾಲಿನ್ನು

ಛಂದದಿ ಪಾಲಿಸಲಾನಂದದಿ ಎನ್ನ ಮನ -

ಮಂದಿರದಿ ಪೊಳೆದು ನಿಂದು ಆಡುವ ರಂಗ

ಒಂದೆ ದೈವವೆ ನಮ್ಮ ಗೋಪಾಲವಿಟ್ಠಲ

ಕಂದನ ತಾಯಿ ಸಲಹಿದಂದದಿ ಸಲಹುವಿ ॥ 5 ॥ 


ಅಟ್ಟತಾಳ 


ಬೇಡೆನ್ನಬಾರದೆ ನಾಡ ವಿಷಯಕೆ ಮನ

ಓಡಿದರೆ ನೀನು ಓಡುತಲಿಹರೆ

ಮಾಡಿಕೊಂಡ ಪತಿ ನೋಡುತಿರಲು ಸತಿ

ಈಡ ಒಬ್ಬನ ಬೇರೆ ನೋಡಿಕೊಂಡರೆ ಇನ್ನು

ಮಾಡುವನೊ ಕೃಪೆ ಕೇಡಾಗೋದಲ್ಲದೆ

ನಾಡ ದೈವದ ಗಂಡ ಗೋಪಾಲವಿಟ್ಠಲ

ಖೋಡಿ ವಿಷಯಕ್ಕೆ ಮನ ಓಡಾಡದಂತೆ ಮಾಡೋ ॥ 6 ॥ 


ಆದಿತಾಳ 


ಗರತಿಯ ಲಕ್ಷಣ ದೊರಕಿಸು ಎನಗೆ

ಗರಳ ಎನಿಸು ಪರ ಅರಸಿಯಲಿ

ಕುರುಹು ತಿಳುಹಿಸು ನಿನ್ನ ತತ್ವಗಳಲ್ಲಿ

ಮರುಳು ಬಿಡಿಸು ಮನ ಮಮತಿಗಳಲ್ಲಿ

ತಿರುಗಿಸೆನ್ನನ್ನು ತೀರ್ಥಯಾತ್ರೆಗಳಲ್ಲಿ

ಹರಟಿ ಮಾಡಿಸು ಹರಿವಾರ್ತೆಗಳಲ್ಲಿ

ಕರವ ಮುಗಿಸು ನಿನ್ನ ರೂಪಂಗಳಲ್ಲಿ

ಕರವ ವಿಡಿಸು ನಿನ್ನ ಶರಣರಲ್ಲಿ

ಪರಮ ದಯಾಳು ಗೋಪಾಲವಿಟ್ಠಲರೇಯಾ

ಕರೆವ ವಚನಗಳಲ್ಲಿ ಅರಿವಂತೆ ಮಾಡೊ ನಿನ್ನ ॥ 7 ॥ 


ಜತೆ 


ನಾನಾಡುವ ಮಾತೆಲ್ಲ ನಿನ್ನದೆವಯ್ಯಾ

ನಾನರಿಯೆ ನೀನೆ ಗತಿ ಗೋಪಾಲವಿಟ್ಠಲಾ ॥

***