Showing posts with label ಶ್ರೀರಮಣಗೆ ಪ್ರೀತಿ lakshmipati vittala ankita suladi ಸ್ತೋತ್ರ ಸುಳಾದಿ SRI RAMANAGE PREETI GURUSHREESHA VITTALA STUTIH. Show all posts
Showing posts with label ಶ್ರೀರಮಣಗೆ ಪ್ರೀತಿ lakshmipati vittala ankita suladi ಸ್ತೋತ್ರ ಸುಳಾದಿ SRI RAMANAGE PREETI GURUSHREESHA VITTALA STUTIH. Show all posts

Wednesday, 13 January 2021

ಶ್ರೀರಮಣಗೆ ಪ್ರೀತಿ lakshmipati vittala ankita suladi ಸ್ತೋತ್ರ ಸುಳಾದಿ SRI RAMANAGE PREETI GURUSHREESHA VITTALA STUTIH

Audio by Mrs. Nandini Sripad


ಶ್ರೀ ಲಕ್ಷ್ಮೀಪತಿವಿಠಲದಾಸಾರ್ಯ ವಿರಚಿತ 


 ಶ್ರೀ ಗುರುಶ್ರೀಶವಿಠಲದಾಸರ ಸ್ತೋತ್ರ ಸುಳಾದಿ 


 ರಾಗ ಕಲ್ಯಾಣಿ 


 ಧ್ರುವತಾಳ 


ಶ್ರೀರಮಣಗೆ ಪ್ರೀತಿ ಕಾರಣವಾಗಿ ಹರಿ -

ಪ್ರೇರಿಸಿದಂತೆ ಎನ್ನ ಯೋಗ್ಯತಾನು -

ಸಾರ ಬರದೆ ಗುರು ಚಾರುಚರಣಕ್ಕೆರಗಿ

ನಾರಾಯಣ ದಾಸರ ಅಣುಗನಾಗಿ

ಮೂರು ಜಗಕೆ ಗುರುಮಧ್ವರಾಯರು ಇವರ

ಕಾರುಣ್ಯಪಾತ್ರರಾಗಿ ಧರೆಯೊಳಗೆ

ತೋರಿ ನರರಂತೆ ತಮ್ಮ ಸೇರಿದವರ ಉ -

ದ್ಧಾರ ಮಾಡಿದರೆಂದು ಹರಿ ಆಜ್ಞದಿ

ಧೀರರೆನಿಸಿದರು ಪುರಂದರ ವಿಜಯದಾಸಾ -

ರ್ಯಾರು ಮೊದಲಾಗಿ ಕರುಣದಿಂದ

ಘೋರ ಸಂಸಾರವೆಂಬೊ ವಾರಿಧಿಯೊಳು ಶಿಲ್ಕಿ

ಧಾರುಣಿಯೊಳು ಮುಂದೆ ಪಾಮರರೂ

ಸೇರಿ ಹರಿಯ ಭಜಿಸಲಾರದೆ ಕೆಡುವರೆಂದು

ವಾರವಾರದಲ್ಲಿ ಹರಿಯ ಪ್ರಾರ್ಥಿಸಲು

ಮಾರಜನಕ ಇವರ ದ್ವಾರ ಸಜ್ಜನರ ಉ -

ದ್ಧಾರವಾಗಲಿ ಎಂದು ಕಳುಹೆ ಬಂದು

ತೋರಿಕೊಳ್ಳದೆ ಜನಕೆ ಮೂರು ಕಾಲದಿ ಹರಿಯ

ಆರಾಧಿಸುತ ಹರಿಯ ದಾಸರೆನಿಸಿ

ಕಾರಣಕರ್ತನಾ ವ್ಯಾಪಾರ ಚಿಂತಿಸುತನ್ಯಾ -

ದಾರಿ ಮೆಟ್ಟದೆ ದೂರರಾಗಿ ಅಘಕೇ

ಸಾರಿದವರಿಷ್ಟಾರ್ಥ ಪೂರೈಸುತಿಪ್ಪರ ಪಾ -

ದಾರವಿಂದಕ್ಕೆ ಮೊರೆಹೊಕ್ಕವರೆಲ್ಲ

ಪುಣ್ಯನಿಧಿ ಲಕ್ಷ್ಮೀಪತಿವಿಟ್ಠಲನ್ನ ಚರಣ

ಆರಾಧಕರು ಎನ್ನ ಭಾರಕರ್ತರಾದರೂ ॥ 1 ॥ 


 ಮಟ್ಟತಾಳ 


ದೇಶದೊಳಗೆ ಗುರುಶ್ರೀಶರಾಯರೆಂಬುವಾ

ಪೆಸರಿನಿಂದ ತೋರಿಕೊಳುತ ವೀತನಲಿ ಸತತ

ಕಾಸು ವೀಸಲಾಭಾದಾಸೀಯ ತೊರದು

ಮೀಸಲ ಮನದಿಂದ ಎಲ್ಲ ಕಾಲದಿ ಶ್ರೀನಿ -

ವಾಸನ ಭಜಿಸುತಲಿ ಸಜ್ಜನರಿಗೆ ಉಪ -

ದೇಶ ಗೈಯ್ಯುತ್ತ ನಿರ್ಮತ್ಸರರಾಗಿ

ವಾಸುದೇವನ ಹೃದಯಾಕಾಶದೊಳಗೆ ನಿಲ್ಲಿಸಿ

ಲೇಸು ಭಕುತಿಯಿಂದ ಮೆಚ್ಚಿಸಿ ಭಜಿಸುತ

ಈ ಸುಮನಸರೆನ್ನನು ಪೋಷಿಸಬೇಕೆಂದು ವಿಶಿಷ್ಟ ಕರುಣದಿಂದ

ಹೇಸಿ ಮಾನವ ನಾನು ಕಾಸು ಬಾಳೆ ಎನ್ನ ಶಿರದಲ್ಲಿ ಕೈಯಿಟ್ಟು

ನಾಶರಹಿತ ಲಕ್ಷ್ಮೀಪತಿವಿಟ್ಠಲನ್ನ 

ದಾಸರ ದಾಸ್ಯವನು ತೋರಿಕೊಟ್ಟರು ಎನಗೆ

ಸಾಸಿರ ನಾಮವನು ಕೊಂಡಾಡುವದೆಂದು ॥ 2 ॥ 


 ರೂಪಕತಾಳ 


ಅಪರಾಧಿಯೆನ್ನದೆ ಕೃಪಣವತ್ಸಲರಾಗಿ

ಕೃಪೆಯನ್ನೆ ಮಾಡಿದರು ಸುಪಥದಿಂದ

ವಿಪರೀತವಾಗಿದೆ ಎನ್ನಾಸಿ ನೋಡಲು ಎಲ್ಲ

ಶ್ವಪಚಾರೊಳಗೆ ನಾನು ಮೊದಲೀಗಾನು ನಾ

ತಪಿಸುವೆ ನಾ ಪರಧನ ಪರವನಿತೆರ ನೋಡಿ

ಕಪಟತ್ವದಲಿ ಕಾಲ ಕಳೆವುತಲಿಪ್ಪೆ

ಅಪರಿಮಿತ ದೋಷಕಾರಿಯಾದವನೊಳು

ಕೃಪೆಯು ಮಾಡಿದ ಮಹಿಮೆ ವೆಗ್ಗಳವೂ

ಕುಪಿತ ಮರದು ಲಕ್ಷ್ಮೀಪತಿವಿಟ್ಠಲನ ದಾಸರು ಹರುಷರಾದರು

ಕುಪಿತಾ ಕರ್ಮಿಯು ಎನದೆ ॥ 3 ॥ 


 ಝಂಪೆತಾಳ 


ಎಷ್ಟೆಂದು ಪೇಳಲಿ ಶಿಷ್ಟರಾ ಮಹಿಮೆ ಉ -

ತ್ಕೃಷ್ಟ ಜ್ಞಾನಾ ಭಕುತಿ ನಿಷ್ಟಿ ಶ್ರೀಹರಿಯಲ್ಲಿ

ಇಷ್ಟು ಗುಣಗಳು ಘಟ್ಟ್ಯಾಗಿ ಇಹವು ಮನ -

ಮುಟ್ಟಿ ಇವರ ಪಾದ ಥಟ್ಟನೆ ಭಜಿಸಲು

ಕೆಟ್ಟು ಪೋಪವಘ ಕೃಷ್ಣ ಒಲಿದು ಸರ್ವಾ -

ಭೀಷ್ಟಗಳನಿತ್ತು ತಾ ಪ್ರೇಷ್ಟನ ಮಾಡುವದು

ಧಿಟ್ಟವೆನ್ನಿರಿ ಎಳ್ಳಷ್ಟು ಸಂಶಯವಿಲ್ಲ

ಭ್ರಷ್ಟನಾದವನಿಗೆ ತಿಳಿಯದಿನ್ನು

ಪೊಟ್ಟಿಯೊಳು ಮೂರ್ಜಗವಿಟ್ಟು ಲಕ್ಷ್ಮೀಪತಿ - 

 ವಿಟ್ಠಲನ ದಾಸರಿಷ್ಟರಿಗಲ್ಲದೆ ॥ 4 ॥ 


 ತ್ರಿವಿಡಿತಾಳ 


ಅನ್ನಕ್ಕೆ ಅಭಿಗಾರವನ್ನು ಮಾಡಿದಂತೆ

ಇನ್ನು ಲೋಹಕ್ಕೆ ಪರಶು ಸೋಕಿದಂತೆ

ಅನ್ಯಗೆ ತಪ್ತಮುದ್ರಿಗಳನ್ನು ಪ್ರಾರ್ಥಿಸಿದಂತೆ

ಘನ್ನ ನದಿಗೆ ನಾಲಿ ತಂದಿತ್ತಂತೆ

ಮುನ್ನೆ ಉದಕವು ಪಾಂಚಜನ್ಯದೊಳು ನೀಡಿದಂತೆ

ಎನ್ನನುದ್ಧರಿಸಿದ್ದಾರೆ ನಂಬಿಕೊ

ಘನ್ನ ಮಹಿಮ ಲಕ್ಷ್ಮೀಪತಿವಿಟ್ಠಲನ್ನಾ ಕಾ -

ರುಣ್ಯ ಪಾತ್ರರು ತಾವು ಸತ್ಕರುಣದಿ ॥ 5 ॥ 


 ಅಟ್ಟತಾಳ 


ಎಂತು ಪೇಳಲಿವರ ಅಂತರಂಗದ ಸಿರಿ -

ಕಾಂತ ಒಲಿದು ಸತು ಪಂಥವ ತೋರಿ ಪರಮ -

ತ್ಯಂತ ಜ್ಞಾನ ಭಕುತಿ ಇತ್ತು ನೀಡಿದರು ವೆ -

ನ್ನಂಥ ಸದ್ದೋಷಿಗನೆಂತು ಪೊರೆವನೆಂಬೊ ಚಿಂತಿ ಮಾಡಲ್ಯಾಕೆ

ಕಂತುಜನಕ ಲಕ್ಷ್ಮೀಪತಿವಿಟ್ಠಲನ ಪಾದಾ -

ಕ್ರಾಂತರಾಗಿ ಎನ್ನ ಸಂತೋಷಿಸುತಿಹ್ಯರೊ ॥ 6 ॥ 


 ಆದಿತಾಳ 


ಯಾಮ ಯಾಮಕ್ಕೆ ಇವರ ನಾಮವು ಎನ್ನ ಹೃದಯ

ಧಾಮದೊಳಗೆ ಬಲು ನೇಮದಿಂ ಇಪ್ಪಂತೆ

ಶ್ರೀಮನೋಹರ ಒಲಿದು ಪ್ರೇಮದಿ ಪ್ರೇರಿಸಿ

ಈ ಮಹಾ ದೋಷವನಧಿ ಸೀಮಿ ದಾಟಿಸಲೆನ್ನ

ಮಾಮನೋಹರ ಲಕ್ಷ್ಮೀಪತಿವಿಟ್ಠಲನ್ನ ದಿವ್ಯ -

ನಾಮಧಾರಿಗಳು ಇಂಥ ಪಾಮರನ್ನ ಕರುಣದಿ ॥ 7 ॥ 


 ಜತೆ 


 ಶ್ರೀಲಕ್ಷ್ಮೀಪತಿವಿಟ್ಠಲನ ಚರಣ ಸೇವಕರು

ಪಾಲಿಸಿದರು ಎನ್ನ ಮ್ಯಾಲೆ ಸತ್ಕರುಣದಿ ॥



 ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ : 


ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ  " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು . ನಂತರ ಜೀವನದ ಉಳಿದ ಭಾಗ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿಯ ಕಂಪ್ಲಿ ಗ್ರಾಮದಲ್ಲಿ ಪದ ಸುಳಾದಿಗಳನ್ನು ರಚಿಸುತ್ತಾ ಶ್ರೀ ಲಕ್ಷ್ಮೀಪತಿವಿಠಲರೇ ಮೊದಲಾದ ಶಿಷ್ಯರಿಂದ ಭಗವದಾರಾಧನೆಯಲ್ಲಿ ಕಳೆದರು. ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.

ಶ್ರೀ ಗುರುಶ್ರೀಶವಿಟ್ಠಲದಾಸರಿಂದ ರಚಿತವಾದ ಶ್ರೀಗುರುರಾಜರ ಸ್ತೋತ್ರಪದ " ಬಾರೊ ಗುರುರಾಘವೇಂದ್ರ " ಮತ್ತು ಶ್ರೀಶ್ರೀನಿವಾಸ ದೇವರ ನಕ್ಷತ್ರಮಾಲಿಕಾ " ಸ್ತುತಿರತ್ನಮಾಲಾ - ಶ್ರೀನಿವಾಸ ದಯಾನಿಧೆ " ಎಂಬ ಪದ ಅಬಾಲ ವೃದ್ಧರಿಗೂ ಪರಿಚಿತವಾದುದು.

*******