ಶ್ರೀ ವಿಜಯದಾಸಾರ್ಯ ವಿರಚಿತ ಉಪಾಸನಾ ಸುಳಾದಿ
( ಕಾಲರೂಪ ಹರಿಯ ವರ್ಣನಾತ್ಮ ಅಧ್ಯಾತ್ಮ ಉಪಾಸನೆ )
ರಾಗ ಸಾರಂಗ
ಧ್ರುವತಾಳ
ಅಜ ಅಣಿಮಾ ಯಜ್ಞ ಅಚ್ಯುತ ಹಯವದನ
ಕೇಶವ ಈಶ ಈಶ ವೆಂಕಟೇಶ
ಭೂಜ ಸ್ಥಿತ ವಿಷ್ಣು ಉರುಕ್ರಮ ಶರ
ಚಕ್ರ ಗದಾಧರ ಧನುರ್ಧಾರಿ ವೆಂಕಟೇಶ
ರಜದೂರ ಉರಗಾಯ ಉಪೇಂದ್ರ ತಾರಕ್ಷ
ಹಲಧರ ಪುರುಷಾಖ್ಯ ವೆಂಕಟೇಶ
ಕುಜನಹರ ಯೋಗೇಶ್ವರ ಪ್ರಶ್ನಿಗರ್ಭ
ಪರಮಪುರುಷ ಗೋವಿಂದ ವೆಂಕಟೇಶ
ಅಜನಪಿತ ಮಾಧವ ವೈಕುಂಠ ಶ್ರೀಪತಿ
ಯಜ್ಞಭೋಕ್ತ ವಿಶ್ವ ವೆಂಕಟೇಶ
ಪ್ರಜನುತ ಇಂದ್ರ ಪ್ರಾದೇಶ ಅಂಗುಟ ಮಾತ್ರ
ಶ್ಯಾಮ ಶಬಲವರ್ಣ ವೆಂಕಟೇಶ
ಪ್ರಜೆಗಳ ನೋಳ್ಪ ಚಕ್ಷುಸ್ಥ ಲೋಹಿತ ವರ್ಣ
ಜೀವಗತ ರೂಪ ಸಿರಿ ವೆಂಕಟೇಶ
ಭುಜಗಾದ್ರಿ ನಿಲಯ ಎನ್ನಪ್ಪ ತಿಮ್ಮಪ್ಪ
ಜಗದಪ್ಪ ವಿಜಯವಿಟ್ಠಲ ವೆಂಕಟೇಶ ॥ 1 ॥
ಮಟ್ಟತಾಳ
ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾಸುದೇ -
ವಾನಂದ ವುತ್ಕೃಷ್ಟಾ ಜ್ಞಾನರೂಪ
ಪ್ರಣವ ಮೂರುತಿ ಅಶೇಷ ಗುಣಾಧಾರ
ಪೂರ್ಣೈಶ್ವರ್ಯ ಅನಂತ ಸುಖವನಧಿ
ತಿರುವೆಂಗಳೇಶ ವಿಜಯವಿಟ್ಠಲರೇಯ
ಪರಮ ಪದವಿ ಕೊಡುವ ಈ ಪರಿ ನೆನಿಸಲು ॥ 2 ॥
ತ್ರಿವಿಡಿತಾಳ
ಪ್ರಣವ ನಾರಾಯಣ ಹರಿ ವಾಸುದೇವ ದ್ರು -
ಹಿಣ ಗಾಯಿತ್ರಿ ಮಾತೃಕಾ ಪುರುಷ ವಿಷ್ಣು
ಇನಿತು ಮಂತ್ರ ವರ್ಣದೇವತಿಗಳು ಸಂ -
ದಣಿಸಿ ಇಪ್ಪರು ಎಂಟು ದಿಕ್ಕಿನಲ್ಲಿ
ವನಜ ಕರ್ನಿಕೆ ದಳ ಇಂದ್ರಾದಿಗಳ ಬಳಿಯ
ಮಿನಗುವ ನಾನಾ ರೂಪವನೆ ಧರಿಸಿ
ಗುಣಿಸು ಈ ಪರಿಯಲ್ಲಿ ಚಕ್ರಾಬ್ಜ ಮಂಡಲ
ಎಣಿಕೆ ಮಾಡು ಮೇಲು ಅಧಿಕವಾಗಿ
ಗುಣ ಸಂಪೂರ್ಣ ನಮ್ಮ ವಿಜಯವಿಟ್ಠಲರೇಯ
ತನುವಿನೊಳಗೆ ಇಂತು ನಿಂತು ಪರಿಪಾಲಿಪ ॥ 3 ॥
ಅಟ್ಟತಾಳ
ಕಾಯದೊಳಗೆ ಇದ್ದು ಸರ್ವ ವ್ಯಾಪಾರವ
ಆಯಾಸವಿಲ್ಲದೆ ನಡೆಸುವ ಲಕುಮಿ -
ನಾಯಕಗೆ ನಿರ್ಗುಣ ಸೋಹಂ ಉತ್ಪತ್ತಿ
ಸಾಯಕದಿಂದಲಿ ಛೇದ ಭೇದಾದಿ ಶ್ರೀ
ವಿಯೋಗ ತನುಕ್ಲೇಶ ಶೋಕಾದಿ ವಿಪ್ರ -
ರಾಯತ್ತ ಅಂತರಾವೇಶ ಪರಾಭವ
ಜಾಯಾದ್ಯಗೋಸುಗ ಶಿವಪೂಜೆ ದೇಹ ವಿ -
ಹಾಯ ಪಲಾಯನ ಲಿಂಗಸ್ಥಾಪನ ಅ -
ನ್ಯಾಯ ವಿಕಾರಾಂತರವು ಭೌತಿಕ
ಕಾಯ ಸ್ವಯಂವ್ಯಕ್ತ ಸ್ಥಳದಲ್ಲಿ ಚಿದ್ರೂಪ
ತಾಯಿ ತಂದೆ ಗುರು ಚತುರಾವರ್ಣ ಜಾತಿ
ನಾಯಿಗಳೆ ಸಾಕ್ಷತ ಭಗವಂತ
ತೋಯಜ ಭವ ರುದ್ರ ಮಿಗಿಲಾದವರಿಗೆ ನಾ -
ರಾಯಣನ ಕೂಡ ಐಕ್ಯ ಸಮಾಧಿಕ್ಯ
ಮಾಯಾ ಗುಣ ಧರ್ಮ ಕಾಲಕ್ಕೆ ಕರ್ತೃತ್ವ
ವಾಯು ಪ್ರತಿಮೆ ವಿನಾ ಹರಿಗೆ ನಮಸ್ಕಾರ
ಈ ಯವನಿಯಲ್ಲಿ ಅಶ್ವತ್ಥ ತುಲಸಿ ವಿ -
ನಾಯಕ ಲಿಂಗ ಸ್ವಯಂವ್ಯಕ್ತ ನಿಧಿ ಪುಣ್ಯ
ತೋಯಗಳಲ್ಲಿ ಗಂಡಿಕಿ ಶಿಲಾ ರಹಿತಾದಿ
ಬಾಯಿಲಂಬುವದಲ್ಲ ಶೂದ್ರಾದಿಗಳ ಪೂಜೆ
ವಾಯು ವಿಷ್ಣು ಲಿಂಗ ಪ್ರತೀಕದಲ್ಲಿ
ಸ್ಥಾಯವಾಗಿದ್ದುದು ವಂದನೆ ಮಾಡಸಲ್ಲ
ಈ ಯವನಿಯೊಳು ಶೂದ್ರಾದಿ ಪ್ರತಿಷ್ಠೆ
ಅಯತಾರ್ಥಕ್ಕೆ ಪೋಗಿ ಸಾಗಿ ಬಾಗ ಸಲ್ಲ
ಈಯರ್ಥದಲಿ ನಿಶ್ಚಯವೆಂದವನು ಆತ -
ತಾಯಿವೆಂದೆಂಬೋದು ಸಿದ್ಧವಯ್ಯ ಕೇಳಿ
ಕಾಯಜಪಿತನಿಗೆ ಇಂತು ನುಡಿವ ವಾಕ್ಯ
ನ್ಯಾಯವಲ್ಲವೋ ಸರ್ವವು ಹರಿನಿಂದ್ಯವೋ
ಮಾಯಾವರ್ಜಿತ ನಮ್ಮ ವಿಜಯವಿಟ್ಠಲರೇಯನ
ಗಾಯನ ಮಾಡಲು ನವಭಕುತಿಯನೀವಾ ॥ 4 ॥
ಆದಿತಾಳ
ಜೀವಾದಿ ಭೇದ ಚಿದ್ಗುಣಗಣಪೂರ್ಣ ಪರಿ -
ಪಾವನ್ನ ಸಾಮ್ಯಧಿಕ ರಹಿತ ತದ್ಗತ ಭೇದ
ದೇವ ಪ್ರಾದುರ್ಭಾವ ವಿಪರೀತ ಶೂನ್ಯ ವೇ -
ದಾವಳಿ ಪ್ರಮಾಣಸಿದ್ಧ ಪ್ರಮೇಯಾವಸ್ತ
ಕೋವಿದ ಹರಿಪಾದ ಭಜಕರ ಸೇವಾಸಕ್ತ
ಆವಾವಕಾಲಕ್ಕೆ ನಡಕೊಂಡ ಯೋಗ್ಯಗೆ
ಈ ವಿಧ ತಿಳಿವಿಕೆ ಭಗವದ್ರೂಪಗಳೆಲ್ಲ
ಲಾವಣ್ಯ ಕಾಯದಲ್ಲಿ ಸುಳಿದಾಡುವ ಸುಖದಿ
ದೇವಕ್ಕಿನಂದನ ವಿಜಯವಿಟ್ಠಲರೇಯ
ಕಾವ ಸರ್ವದಾ ನಮ್ಮ ಬಳಿಯಲಿ ಯಿದ್ದು ನೋಡಿ ॥ 5 ॥
ಜತೆ
ಸಕಲಾಭರಣದಿಂದ ಒಪ್ಪುವ ಸಿರಿಕಾಂತ
ನಿಖಿಳೇಶ ವಿಜಯವಿಟ್ಠಲ ಶೇಷಗಿರಿಯ ರಾಯ ॥
*******