Showing posts with label ಬಿಡು ಬಿಡು ಮಾಯವನು vijaya vittala ankita suladi ಸಾಧನ ಸುಳಾದಿ BIDU BIDU MAYAVANU SADHANA SULADI. Show all posts
Showing posts with label ಬಿಡು ಬಿಡು ಮಾಯವನು vijaya vittala ankita suladi ಸಾಧನ ಸುಳಾದಿ BIDU BIDU MAYAVANU SADHANA SULADI. Show all posts

Monday 2 August 2021

ಬಿಡು ಬಿಡು ಮಾಯವನು vijaya vittala ankita suladi ಸಾಧನ ಸುಳಾದಿ BIDU BIDU MAYAVANU SADHANA SULADI



Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ 


(ಮಾನವ ಜನ್ಮ ದುರ್ಲಭ. ಆದಕಾರಣ ಮಾಯಾಜಾಲ ಗೆದ್ದು ಇದೇ ಮನುಜ ಜನ್ಮದಲ್ಲಿ ಸಾಧನವು ಮುಖ್ಯ. ) 


 ರಾಗ ಶಂಕರಾಭರಣ 


 ಝಂಪೆತಾಳ 


ಬಿಡು ಬಿಡು ಮಾಯವನು ಕಡಿಗೆ ನಿನ್ನನು ಒಯ್ದು

ತಡಿಯದಲ್ಲಿಡುವುದು ನರಕದಲ್ಲೀ

ದುಡಿಯದಿರು ವ್ಯರ್ಥ ನಿನ್ನ ಒಡಲಿಗೆ ಘನವಸ್ತ

ಒಡಿವೆ ಘಳಿಸೆನೆಂಬ ಸಡಗರದಲಿ

ಜಡರಿಗೆ ಬ್ಯಾಸರಿಕೆ ಕೊಡುತಲಿ ಅವರಿಂದ

ನುಡಿಸಿಕೊಂಡು ಕ್ಲೇಶ ಬಡುವದೇನೊ

ಕೊಡುವ ಕಾಸಿಗೆ ಪೋಗಿ ತುಡುಗತನ ಮಾಡಲು

ಕೊಡ ಮೀಸಲ ಪಾಲು ನಾಯಿ ಬಂದು

ಕುಡಿದಂತೆಯಾಗುವದು ಕಡು ನಿರ್ಭಾಗ್ಯನೆ

ಪೊಡವಿ ಸುರ ಜನುಮವು ಬಿಡದೆ ಬಂದಿರಲಾಗಿ

ಕೆಡಿಸಿಕೊಂಡು ಪಾದದಡೆಯಾಗುವೆ

ಅಡಿಗಡಿಗೆ ವಿಜಯವಿಟ್ಠಲನ ನೆನೆದಡೆ ಭಂಗ -

ಬಡದ ಪದವಿ ನಿನ್ನ ಪಡವಣಿಗೆ ಲೇಸೊ ॥ 1 ॥ 


 ಮಟ್ಟತಾಳ 


ಅನಂತ ಜನುಮದಲ್ಲಿ ಅನಂತ ಜೀವಿಗಳ

ಯೋನಿ ಯೋನಿಗಳಲ್ಲಿ ಹೀನಾಯದಲಿದ್ದು

ಏನು ಕಾಣದೆ ಬಳಲಿ ನೀನಿದ್ದದರಿಂದ

ಜ್ಞಾನ ಒಂದಾದರೂ ನೀನರಿಯಲಿಲ್ಲ

ಅನಂತ ಗುಣಪೂರ್ಣ ವಿಜಯವಿಟ್ಠಲನ್ನ 

ಧ್ಯಾನಕ್ಕೆ ದೂರಾಗಿ ಮಾನವಾಧಮನಾದೆ ॥ 2 ॥ 


 ತ್ರಿವಿಡಿತಾಳ 


ಅವ ಕುಲದ ಪುಣ್ಯವೊ ಆವ ಸುಕೃತ ಫಲವೊ

ಆವ ಜನ್ಮದಲಿ ಮಾಡಿದ ಸಿದ್ಧ ಸಾಧನವೊ

ಆವ ಧರ್ಮದಲಿಂದ ಬಂದ ಜನನವೊ ಭೂ -

ದೇವ ಗರ್ಭದಲ್ಲಿ ನೀನವತರಿಸಿ

ಕೋವಿದನಾಗಿ ಶ್ರೀಹರಿಯ ನಂಬದೆ ಬರಿದೆ

ಧಾವತಿಯನು ಮಾಡಿ ನೋವ ನೊಂದೂ

ಆವ ಕಡಿಗೆ ಪೊಂದದಲೆ ವ್ಯರ್ಥ ನಮ್ಮಯ್ಯಾ

 ಶ್ರೀವಿಜಯವಿಟ್ಠಲನ್ನ ಭಾವದಲಿ ಕಾಣೀ ॥ 3 ॥ 


 ಅಟ್ಟತಾಳ 


ಮಡದಿ ಮಕ್ಕಳು ನಿನ್ನ ಎಡಬಲದವರಿಗೆ

ಉಡುವ ವಸ್ತ್ರವಿಲ್ಲವೆಂದೆಡೆಯಲ್ಲಿ ಕಾಣುತ್ತ

ಕಡು ನೊಂದು ಪೋಗಿ ಅಂಗಡಿ ಎಲ್ಲ ತಿರುಗಿ

ತಡಿಯದೆ ತಂದಿಪ್ಪೆ ಬಿಡದೆ ನಿನ್ನನು ಸಾಕುವ

ಒಡಿಯ ರಂಗಯ್ಯಗೆ ಬಿಡಿವಸ್ತ್ರ ಮಾಡೆನಲು

ಮಿಡುಕುತ್ತ ಧರಣಿಯ ಪಿಡಿದು ಬೆಂಡಾಗುವೆ

ಕಡಲಶಯನ ನಮ್ಮ ವಿಜಯವಿಟ್ಠಲರೇಯ 

ಕೊಡನೆಂದು ದೂರಲು ಒಡನೆ ಬಪ್ಪದೇನೊ ॥ 4 ॥ 


 ಆದಿತಾಳ 


ಮಾಯಾವನ್ನೆ ತೊರಿಯಬೇಕು ಮಾಯವನ್ನೆ ಬಿಡಲಿಬೇಕು

ಮಾಯಾಶಕ್ತಿ ಬಂಧದಲ್ಲಿ ನೋಯದಲೆ ಇರಲಿಬೇಕು

ಮಾಯಾಶಕ್ತಿ ಬಂಧನವು ಶ್ರೀಯರಸನಾಧೀನಾ

ನ್ಯಾಯದಲ್ಲಿ ಅರ್ಚಿಸಲುಪಾಯದಲ್ಲಿ ಹರಿಯ ಕಂಡು

ಮಾಯವನ್ನು ದಾಟುವುದೂ ದಾಯವನ್ನು ಬಯಸದಲೆ

ಮಾಯಾಧರ ವಿಜಯವಿಟ್ಠಲ ರಾಯನಲ್ಲಿ ಮನವಿಟ್ಟು

ವಾಯುವುಳ್ಳಾಗಲಿ ನಿನ್ನ ಆಯು ಸಾರ್ಥಕವೆನಿಸೊ ॥ 5 ॥ 


 ಜತೆ 


ಈ ದೇಹದಲಿ ಜ್ಞಾನ ಈ ದೇಹದಲಿ ಮಾನ

ಈ ದೇಹದಲಿ ನಮ್ಮ ವಿಜಯವಿಟ್ಠಲನ ಕಾಣೊ ॥

****