Showing posts with label ಫಣಿರಾಜಶಯನ ರುಕ್ಮಿಣೀ ankita jagannatha vittala ತತ್ತ್ವಸುವ್ವಾಲಿ PHANIRAJASHAYANA RUKMINI TATWA SUVVALI. Show all posts
Showing posts with label ಫಣಿರಾಜಶಯನ ರುಕ್ಮಿಣೀ ankita jagannatha vittala ತತ್ತ್ವಸುವ್ವಾಲಿ PHANIRAJASHAYANA RUKMINI TATWA SUVVALI. Show all posts

Saturday, 14 December 2019

ಫಣಿರಾಜಶಯನ ರುಕ್ಮಿಣೀ ankita jagannatha vittala ತತ್ತ್ವಸುವ್ವಾಲಿ PHANIRAJASHAYANA RUKMINI TATWA SUVVALI


Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ 

 ಶ್ರೀ ರುಕ್ಮಿಣೀ ವಿಲಾಸ 

ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿ
ಮಣಿಮಂಚದ ಮೇಲೆ ಕುಳಿತಿರ್ದು । ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತಿಂದು ॥ 1 ॥ ॥ 118 ॥

ಹೇ ರಾಜಕನ್ನಿಕೆ ! ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ । ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ ॥ 2 ॥ ॥ 119 ॥

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ । ಸುಕುಮಾರಿ ಎನಲು ಪರ -
ವಶಳಾದಳಾಗ ಮಹಾಲಕ್ಷ್ಮಿ ॥ 3 ॥ ॥ 120 ॥

ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು । ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ ॥ 4 ॥ ॥ 121 ॥

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ । ಮುದ್ದಿಸಿ ಮಾತಾಡ್ದ
ಕಂಗಳಶ್ರುಗಳ ಒರಸುತ್ತ ॥ 5 ॥ ॥ 122 ॥

ಸಲಿಗೆ ಮಾತುಗಳ ಬಗೆ ತಿಳಿಯದಲೆ ಹೀಗೆ ಚಂ -
ಚಲವನೈದುವರೇ ಚಪಲಾಕ್ಷಿ । ಚಪಲಾಕ್ಷಿ ಏಳೆಂದು
ಲಲನೆಯಳ ನಗಿಸಿ ನಗುತಿರ್ದ ॥ 6 ॥ ॥ 123 ॥

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ -
ಷಾದ ಪಡಲ್ಯಾಕೆ ಅನುದಿನ । ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನೆ ಬಳಿಯಲ್ಲಿ ॥ 7 ॥ ॥ 124 ॥

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ -
ವರ್ಗದ ನುಡಿಗೆ ಹರುಷದಿ । ಹರುಷದಿಂದಲಿ ಪಾದ -
ಯುಗ್ಮಕೆರಗಿದಳು ಇನಿತೆಂದು ॥ 8 ॥ ॥ 125 ॥

ಜಗದೇಕಮಾತೆ ಕೈ ಮುಗಿದು ಲಜ್ಜೆಯಲಾಗ
ಮುಗುಳುನಗೆ ಸೂಸಿ ಮಾತಾಡಿ । ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ ॥ 9 ॥ ॥ 126 ॥

ಪರಿಪುರ್ಣಕಾಮ ನೀ ಕರುಣದಿಂದೀಗ ಸ್ವೀ -
ಕರಿಸಿದೆಯೋ ಎನ್ನ ಸತಿಯೆಂದು । ಸತಿಯೆಂದಕಾರಣಾ -
ಕ್ಷರಳೆನಿಸಿಕೊಂಡೆ ಶ್ರುತಿಯಿಂದ ॥ 10 ॥ ॥ 127 ॥

ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿ ನೃಪರ ಪತಿಯೆಂದು । ಪತಿಯೆಂದು ಬಗೆವೆನೇ
ಸವಿಮಾತಿದಲ್ಲ ಸರ್ವಜ್ಞ ॥ 11 ॥ ॥ 128 ॥

ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವ ರೂಪ । ತವ ರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ ॥ 12 ॥ ॥ 129 ॥

ಭಾನು ತನ್ನಯ ಕಿರಣಪಾಣಿಗಳ ದೆಶೆಯಿಂದ
ಪಾನೀಯಜಗಳ ಅರಳಿಸಿ । ಅರಳಿಸಿ ಗಂಧವನಾ -
ಘ್ರಾಣಿಸಿದಂತೆ ಗ್ರಹಿಸಿದಿ ॥ 13 ॥ ॥ 130 ॥

ಬೈದವನ ಕುತ್ತಿಗೆಯ ಕೊಯ್ದು ಅಂಧತಮಸಿ -
ಗೊಯ್ದು ಹಾಕಿದೆಯೊ ಪರಿಪಂಥಿ । ಪರಿಪಂಥಿ ನೃಪರನ್ನು
ಐದುವೆನೆ ನಿನ್ನ ಹೊರತಾಗಿ ॥ 14 ॥ ॥ 131 ॥

ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ । ಸಂಹಾರ ಮಾಡುವೆನು
ದುರ್ಮದಾಂಧರನು ಬಗೆವೇನೆ ॥ 15 ॥ ॥ 132 ॥

ಮಂಜುಳೋಕ್ತಿಯ ಕೇಳಿ ಅಂಜಲೇಕೆಂದು ನವ -
ಕಂಜಲೋಚನೆಯ ಬಿಗಿದಪ್ಪಿ । ಬಿಗಿದಪ್ಪಿ ಪೇಳಿದ ಧ -
ನಂಜಯಪ್ರಿಯ ಸಥೆಯಿಂದ ॥ 16 ॥ ॥ 133 ॥

ನಿನಗೆ ಎನ್ನಲ್ಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು । ಎಂದೆಂದು ಇಹುದಿದಕೆ
ಅನುಮಾನವಿಲ್ಲ ವನಜಾಕ್ಷಿ ॥ 17 ॥ ॥ 134 ॥

ದೋಷವರ್ಜಿತ ರುಕ್ಮಿಣೀಶನ ವಿಲಾಸ ಸಂ -
ತೋಷದಲಿ ಕೇಳಿ ಪಠಿಸಿದ । ಪಠಿಸಿದಂಥವರ ಅಭಿ -
ಲಾಷೆ ಪುರೈಸಿ ಸಲಹುವ ॥ 18 ॥ ॥ 135 ॥

ನೀತಜನಕನು ಜಗನ್ನಾಥವಿಟ್ಠಲ ಜಗ -
ನ್ಮಾತೆಯೆನಿಸುವಳು ಮಹಲಕ್ಷ್ಮೀ । ಮಹಲಕ್ಷ್ಮಿಸುತ ಬ್ರಹ್ಮ 
ಭ್ರಾತನೆನಿಸುವನು ಗುರುರಾಯ ॥ 19 ॥ 136 ॥
***


Pani raja Sayana rukminideviyodagudi
Manimancada mele kulitirda| kulitirda samayadali
Anakavadidanu initendu||

He rajakannike buramana nanalla
Varidhiyolagiddu badukuva| badukuvage marulade
Naradana nudige nalinakshi||

Sisupala modalada vasudhepalara bittu
Pasupalagolide sukumari| sukumari enalu
Paravasaladaga mahalakshmi ||

I mata keli kai camaravanidadi
Bumigoragidalu Bugilendu| Bugilendu malagida
Kaminiya kanda kamalaksha||

Kangettalendu tannanganeya bigidappi
Mungurula tiddi muddisi| muddisi matadda
Kangalasragala oresutta||

Salige matina bageya tiliyadele hige cam-
Calavanaiduvare chapalakshi| chapalakshi elendu
Taleya melitta karapadma||

Sridevi ninnolu vinodavane madalu vi-
Shadapadalyake anudina| anudinadi smarisuvara
Kadukomdihene baliyalli||

Higgidalu manadi saubagyabaminiyu apa-
Vargadana nudige harushadi| harushadindali pada-
Yugmakeragidalu inutendu ||

Jagadekamate kai mugidu lajjeyalaga
Mugulu nage susi matadi| matadidalu patiya
Mogava nodutali nalinakshi||

Paripurnakama ninnarasi nanahudu ni karunadindiga
Svikarisideyo enna satiyendu| satiyendu karana-
Ksharalenisikonde Sratiyinda||

Buvanadhipati ninu aviyogi ninaganu
Aviveki nrapara pati^^emdu| patiyendu bagevene
Savimatidalla sarvajna||

Bhagavanta ninu durbaga dehagataravaru
Trigunavarjitavu tava rupa| tava rupagunagalanu
Pogalalennalave paramatma||

Banu tannaya kiranapanigala deseyinda
Paniyajagalanaralisi| aralisida gandhavana-
Granisidante grahisidi ||

Baidavana kuttigeya koydu andhatamasi-
Goydu hakideyo paripanthi| paripanthi nraparannu
Aiduvene ninna horatagi ||

Ninnanugrahadinda brahma rudradigala
Nirajagannathaviththalanu | samhara maduvenu
Durmadamdharana bagevene||

Manjuloktiya keli anjaletake endu
Kanjalocaneya bigidappi|| bigidappi pelida dha-
Nanjayapriya satheyinda ||

Ninage ennalli Bakti enitihudu na kande
Enagihudu karuna endendu| endendu ihudidake
Anumanavilka vanajakshi ||

Doshavarjita rukminisana vilasa ( san)
Toshadali keli pathisida | pathisidavarabilashe
Lesu puraisi salahuva ||

Nimmanugrahadinda brahnarudradigala
Nirmisuve salahi samhara | samhara maduvenu
Durmadandharana bagevene||

Nitajanaka jagannathaviththalanu jaga-
Nmateyenisuvalu mahalakshmi| mahalakshmisuta brahma-
Pautranenisuvanu gururudra ||
***

ಜಗನ್ನಾಥದಾಸರು
ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ
ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತೆಂದು 1

ಹೇ ರಾಜಕನ್ನಿಕೆ ಭೂರಮಣ ನಾನಲ್ಲ

ನಾರದನ ನುಡಿಗೆ ನಳಿನಾಕ್ಷಿ 2

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು

ಸುಕುಮಾರಿ ಎನಲು ಪರ
ವಶಳಾದಳಾಗ ಮಹಲಕ್ಷ್ಮಿ 3

ಈ ಮಾತ ಕೇಳಿ ಕೈ ಚಾಮರವನೀಡಾಡಿ

ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ 4

ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ

ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ
ಕಂಗಳಶ್ರುಗಳ ಒರೆಸುತ್ತ5

ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ

ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು
ತÀಲೆಯ ಮೇಲಿಟ್ಟ ಕರಪದ್ಮ 6



ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ

ಅನುದಿನ | ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನು ಬಳಿಯಲ್ಲಿ 7

ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ

ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ
ಯುಗ್ಮಕೆರಗಿದಳು ಇನಿತೆಂದು 8

ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ

ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ 9

ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ

ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ
ಕ್ಷರಳೆನಿಸಿಕೊಂಡೆ ಶ್ರುತಿಯಿಂದ10

ಭುವನಾಧಿಪತಿ ನೀನು ಅವಿಯೋಗಿ ನಿನಗಾನು

ನೃಪರ ಪತಿಯೆಂದು | ಪತಿಯೆಂದು ಬಗೆವೆನೇ
ಸವಿ ಮಾತಿದಲ್ಲ ಸರ್ವಜ್ಞ 11

ಭಗವಂತ ನೀನು ದುರ್ಭಗ ದೇಹಗತರವರು

ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ12

ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ

ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ
ಘ್ರಾಣಿಸಿದಂತೆ ಗ್ರಹಿಸೀದಿ13

ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ

ಪರಿಪಂಥಿ ನೃಪರನ್ನು
ಐದುವೆನೆ ನಿನ್ನ ಹೊರತಾಗಿ 14

ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ

ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೆ 15

ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ

ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ
ನಂಜಯ ಪ್ರಿಯನು ಸಥೆಯಿಂದ16

 ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ

ಎಂದೆಂದು ಇಹುದು ಇದ
ಕನುಮಾನವಿಲ್ಲ ವನಜಾಕ್ಷಿ 17

ದೋಷವರ್ಜಿತ ರುಕ್ಮಿಣೀಶನ ವಿಲಾಸ

ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ
ಲಾಷೆ ಪೊರೈಸಿ ಸಲಹೂವ 18

ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ

ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ
ಪಾತ್ರನೆನಿಸುವ ಗುರು ರುದ್ರ 19
********
ಶ್ರೀ ರುಕ್ಮಿಣಿ ವಿಲಾಸ sri rukmini vilasa 

ಫಣಿ ರಾಜ ಶಯನ ರುಕ್ಮಿಣಿದೇವಿಯೊಡಗೂಡಿ
ಮಣಿಮಂಚದ ಮೇಲೆ ಕುಳಿತಿರ್ದ| ಕುಳಿತಿರ್ದ ಸಮಯದಲಿ
ಅಣಕವಾಡಿದನು ಇನಿತೆಂದು||

ಹೇ ರಾಜಕನ್ನಿಕೆ ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ| ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ||

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ| ಸುಕುಮಾರಿ ಎನಲು
ಪರವಶಳಾದಾಗ ಮಹಾಲಕ್ಷ್ಮಿ ||

ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು| ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ||

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ| ಮುದ್ದಿಸಿ ಮಾತಾಡ್ದ
ಕಂಗಳಶ್ರಗಳ ಒರೆಸುತ್ತ||

ಸಲಿಗೆ ಮಾತಿನ ಬಗೆಯ ತಿಳಿಯದೆಲೆ ಹೀಗೆ ಚಂ-
ಚಲವನೈದುವರೆ ಚಪಲಾಕ್ಷಿ| ಚಪಲಾಕ್ಷಿ ಏಳೆಂದು
ತಲೆಯ ಮೇಲಿಟ್ಟ ಕರಪದ್ಮ( ಲಲನೆಯಳ ನಗಿಸಿ ನಗುತಿರ್ದ) ||

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ-
ಷಾದಪಡಲ್ಯಾಕೆ ಅನುದಿನ| ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನೆ ಬಳಿಯಲ್ಲಿ||

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ-
ವರ್ಗದನ ನುಡಿಗೆ ಹರುಷದಿ| ಹರುಷದಿಂದಲಿ ಪಾದ-
ಯುಗ್ಮಕೆರಗಿದಳು ಇನುತೆಂದು ||

ಜಗದೇಕಮಾತೆ ಕೈ ಮುಗಿದು ಲಜ್ಜೆಯಲಾಗ
ಮುಗುಳು ನಗೆ ಸೂಸಿ ಮಾತಾಡಿ| ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ||

ಪರಿಪೂರ್ಣಕಾಮ ನಿನ್ನರಸಿ ನಾನಹುದು ನೀ ಕರುಣದಿಂದೀಗ
ಸ್ವೀಕರಿಸಿದೆಯೋ ಎನ್ನ ಸತಿಯೆಂದು| ಸತಿಯೆಂದು ಕಾರಣಾ-
ಕ್ಷರಳೆನಿಸಿಕೊಂಡೆ ಶ್ರತಿಯಿಂದ||

ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿ ನ್ರಪರ ಪತಿಎಂದು| ಪತಿಯೆಂದು ಬಗೆವೆನೇ
ಸವಿಮಾತಿದಲ್ಲ ಸರ್ವಜ್ನ||

ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವ ರೂಪ| ತವ ರೂಪಗುಣಗಳನು
ಪೊಗಳಲೆನ್ನಳವೆ ಪರಮಾತ್ಮ||

ಭಾನು ತನ್ನಯ ಕಿರಣಪಾಣಿಗಳ ದೆಸೆಯಿಂದ
ಪಾನೀಯಜಗಳಾನರಳೀಸಿ| ಅರಳಿಸಿದ ಗಂಧವನಾ-
ಘ್ರಾಣಿಸಿದಂತೆ ಗ್ರಹಿಸೀದಿ ||

ಬೈದವನ ಕುತ್ತಿಗೆಯ ಕೊಯ್ದು ಅಂಧತಮಸಿ-
ಗೊಯ್ದು ಹಾಕಿದೆಯೋ ಪರಿಪಂಥಿ| ಪರಿಪಂಥಿ ನ್ರಪರನ್ನು
ಐದುವೆನೆ ನಿನ್ನ ಹೊರತಾಗಿ ||

ನಿನ್ನನುಗ್ರಹದಿಂದ ಬ್ರಹ್ಮ ರುದ್ರಾದಿಗಳ
ನಿರಜಗನ್ನಾಥವಿಠ್ಠಲನು | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೆ||

ಮಂಜುಳೋಕ್ತಿಯ ಕೇಳಿ ಅಂಜಲೇತಕೆ ಎಂದು
ಕಂಜಲೋಚನೆಯ ಬಿಗಿದಪ್ಪಿ|| ಬಿಗಿದಪ್ಪಿ ಪೇಳಿದ ಧ-
ನಂಜಯಪ್ರಿಯ ಸಥೆಯಿಂದ ||

ನಿನಗೆ ಎನ್ನಲ್ಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು| ಎಂದೆಂದು ಇಹುದಿದಕೆ
ಅನುಮಾನವಿಲ್ಕ ವನಜಾಕ್ಷಿ ||

ದೋಷವರ್ಜಿತ ರುಕ್ಮಿಣೀಶನ ವಿಲಾಸ ( ಸಂ)
ತೋಷದಲಿ ಕೇಳಿ ಪಠಿಸೀದ | ಪಠಿಸೀದವರಭಿಲಾಷೆ
ಲೇಸು ಪೂರೈಸಿ ಸಲಹೂವ ||

ನಿಮ್ಮನುಗ್ರಹದಿಂದ ಬ್ರಹ್ನರುದ್ರಾದಿಗಳ
ನಿರ್ಮಿಸುವೆ ಸಲಹೀ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೇ||

ನೀತಜನಕ ಜಗನ್ನಾಥವಿಠ್ಠಲನು ಜಗ-
ನ್ಮಾತೆಯೆನಿಸುವಳು ಮಹಾಲಕ್ಷ್ಮಿ| ಮಹಾಲಕ್ಷ್ಮಿಸುತ ಬ್ರಹ್ಮ-
ಪೌತ್ರನೆನಿಸುವನು ಗುರುರುದ್ರ ||
********

ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ

ಶ್ರೀ ರುಕ್ಮಿಣೀ ವಿಲಾಸ

ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿ 
ಮಣಿಮಂಚದ ಮೇಲೆ ಕುಳಿತಿರ್ದು । ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತೆಂದು ॥ 1 ॥ ॥ 118 ॥

ಅರ್ಥ : ಫಣಿರಾಜಶಯನ = (ಶೇಷಶಾಯಿ ಪದ್ಮನಾಭನಿಂದ ಅಭಿನ್ನನಾದ ) ಶ್ರೀಕೃಷ್ಣನು , ರುಕ್ಮಿಣಿದೇವಿಯೊಡಗೂಡಿ = ರುಕ್ಮಿಣೀದೇವಿಯಿಂದ ಸಹಿತನಾದ , ಮಣಿಮಂಚದ ಮೇಲೆ = ರತ್ನ ಪರ್ಯಂಕದ ಮೇಲೆ , ಕುಳಿತಿರ್ದು = ಕೂತು , ಸತಿಯೊಡನೆ = ಭಾರ್ಯಳಾದ ರುಕ್ಮಿಣಿಯೊಂದಿಗೆ , ಇನಿತೆಂದು = ಹೀಗೆಂದು (ಮುಂದೆ ಹೇಳುವಂತೆ) , ಅಣಕವಾಡಿದನು = ಪರಿಹಾಸದ ಮಾತನ್ನು ನುಡಿದನು.

ವಿಶೇಷಾಂಶ : (1) ' ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಂ ' - (ಭಾಗವತ) ಎಂಬಲ್ಲಿ ಮತ್ಸ್ಯ , ಕೂರ್ಮಾದಿ ಎಲ್ಲ ಅವತಾರಗಳೂ ಪದ್ಮನಾಭ ರೂಪದಿಂದಲೇ ಅಭಿವ್ಯಕ್ತಗೊಳಿಸಲ್ಪಟ್ಟ ರೂಪಗಳೇ ಆದರೂ , ಶ್ರೀಕೃಷ್ಣನು ಸಾಕ್ಷಾತ್ ಪದ್ಮನಾಭನೇ ಎಂದು ಹೇಳಲಾಗಿದೆ. ಎಲ್ಲ ರೂಪಗಳಲ್ಲಿ ಪರಸ್ಪರ ಗುಣಾದಿಗಳಿಂದ ಯಾವ ಭೇದವೂ ಇಲ್ಲ . ' ನೇಹ ನಾನಾಸ್ತಿ ಕಿಂಚನ ' ಎಂದು ಶ್ರುತಿಯು ಅತ್ಯಂತ ಅಭೇದವನ್ನೇ ಸಾರುತ್ತದೆ. ಶ್ರೀಕೃಷ್ಣರೂಪವು ವಿಶೇಷಬಲದಿಂದ ಭಿನ್ನನಾಮರೂಪಗಳಿಂದ ವ್ಯವಹರಿಸಲ್ಪಡುವ ಅಭಿವ್ಯಕ್ತ ರೂಪಗಳಂತೆ ಅಲ್ಲ , ಕಿಂತು ಪದ್ಮನಾಭನೇ ಎಂಬ ವಿಶೇಷವಿರುವುದೆಂದು ತಿಳಿಯಬೇಕು.

(2) ನಿತ್ಯಾವಿಯೋಗಿನಿಯಾದ ಮಹಾಲಕ್ಷ್ಮೀಸ್ವರೂಪಳೇ ಆದ ರುಕ್ಮಿಣಿಯೊಂದಿಗೆ ಸರಸವಾಡುತ್ತ , ಆಕೆಗಿಂತ ಅನಂತಗುಣಗಳಿಂದ ಶ್ರೇಷ್ಠನಾದ ತಾನು ಆಕೆಯಲ್ಲಿ ಭಕ್ತಿಯನ್ನು ಉದ್ರೇಕಗೊಳಿಸಿ , ಆನಂದವನ್ನೀಯುತ್ತ , ಲೌಕಿಕ ಸತಿಪತಿಯರ ಪ್ರೇಮಕಲಹವು ಪರಸ್ಪರ ಪ್ರೇಮಬಂಧವನ್ನು ಹೇಗೆ ಗಾಢಗೊಳಿಸುವುದೆಂಬುದನ್ನು ನಿದರ್ಶಿಸಲು ಶ್ರೀಕೃಷ್ಣನು ವಿಡಂಬನ ಮಾಡುತ್ತಾನೆ.

ಹೇ ರಾಜಕನ್ನಿಕೆ ! ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ । ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ ॥ 2 ॥ ॥ 119 ॥

ಅರ್ಥ : ಹೇ ರಾಜಕನ್ನಿಕೆ = ಹೇ ರಾಜಪುತ್ರಿ ! ಭೂರಮಣ ನಾನಲ್ಲ = ನಾನು ರಾಜನಲ್ಲ , ವಾರಿಧಿಯೊಳಗಿದ್ದು = ಸಮುದ್ರಮಧ್ಯದಲ್ಲಿದ್ದು , ಬದುಕುವ = ಜೀವಿಸುವ ನನಗೆ , ನಾರದನ ನುಡಿಗೆ = ನಾರದನ ಮಾತುಗಳನ್ನು ಕೇಳಿ , ನಳಿನಾಕ್ಷಿ = ಹೇ ಪದ್ಮಾಕ್ಷಿ , ರುಕ್ಮಿಣಿ ! ಮರುಳಾದೆ = ವಂಚಿತಳಾದೆ ( ಮೋಹಗೊಂಡು ಒಲಿದೆ ).

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ । ಸುಕುಮಾರಿ ಎನಲು ಪರ -
ವಶಳಾದಳಾಗ ಮಹಲಕ್ಷ್ಮಿ ॥ 3 ॥ ॥ 120 ॥

ಅರ್ಥ : ಶಿಶುಪಾಲ ಮೊದಲಾದ = ಶಿಶುಪಾಲ ಮುಂತಾದ , ವಸುಧೆಪಾಲರ = ಭೂಪಾಲರನ್ನು , ಬಿಟ್ಟು = (ನಿನಗಾಗಿ ಹಂಬಲಿಸುತ್ತಿದ್ದರೂ) ನಿರಾಕರಿಸಿ , ಸುಕುಮಾರಿ = ಹೇ ಕೋಮಲಾಂಗಿ ! ಪಶುಪಾಲಗೆ = ಗೋಪಾಲಕನಿಗೆ , ಒಲಿದೆ = ಮೆಚ್ಚಿ ಬಂದಿ , ಎನಲು = (ಶ್ರೀಕೃಷ್ಣನು) ಹೀಗೆನಲು , ಆಗ = ಆ ಕ್ಷಣದಲ್ಲಿ , ಮಹಲಕ್ಷ್ಮಿ = ಶ್ರೀಮಹಾಲಕ್ಷ್ಮೀಸ್ವರೂಪಳಾದ ರುಕ್ಮಿಣಿಯು , ಪರವಶಳಾದಳು = ( ಶೋಕ ಭಯಗಳಿಂದ ) ದಿಕ್ಕು ತೋರದಂತಾದಳು.

ವಿಶೇಷಾಂಶ : (1) ರುಕ್ಮಿಣಿಯು ಭೀಷ್ಮಕರಾಜನು ಮಗಳು. ಭೀಷ್ಮಕನು ತನ್ನ ಮಗನಾದ ರುಕ್ಮಿಯ ಒತ್ತಾಯದಿಂದ , ರುಕ್ಮಿಣಿಯನ್ನು ಶಿಶುಪಾಲನಿಗೆ ಲಗ್ನ ಮಾಡಿಕೊಡಲು ಒಪ್ಪಿ , ವಿವಾಹೋತ್ಸವವನ್ನು ಏರ್ಪಡಿಸಿದ್ದನು. ಆ ಮೊದಲು ಆತನು ರುಕ್ಮಿಣಿಯ ಸ್ವಯಂವರವನ್ನು ಏರ್ಪಡಿಸಿದಾಗ ನಡೆದ ಆಶ್ಚರ್ಯಪ್ರಸಂಗದಿಂದ , ಶ್ರೀಕೃಷ್ಣನು ಪರಬ್ರಹ್ಮನೆಂಬುದನ್ನೂ , ರುಕ್ಮಿಣಿಯು ಲಕ್ಷ್ಭೀಅವತಾರಳೆಂಬುದನ್ನೂ ಅನ್ಯರಿಗೆ ದಕ್ಕುವವಳಲ್ಲವೆಂಬುದನ್ನೂ ತಿಳಿದಿದ್ದನು. ರುಕ್ಮಿಣಿಯು ನಾರದಾದಿಗಳಿಂದ ಶ್ರೀಕೃಷ್ಣನ ದಿವ್ಯಸೌಂದರ್ಯವನ್ನೂ , ಪರಾಕ್ರಮಾದಿ ಮಹಿಮೆಗಳನ್ನೂ ಕೇಳಿ , ಅನ್ಯರನ್ನು ಸ್ವೀಕರಿಸುವುದಿಲ್ಲವೆಂದು (ಸಾಮಾನ್ಯ ಕನ್ಯೆಯಂತೆ ವಿಡಂಬನೆಮಾಡುತ್ತ) ನಿಶ್ಚಯಿಸಿ , ಶ್ರೀಕೃಷ್ಣನಿಗೆ ಪತ್ರವನ್ನು ಬರೆದು ಕಳುಹಿಸಿ , ಶಿಶುಪಾಲನೊಂದಿಗೆ ವಿವಾಹ ನಡೆಯುವ ಮೊದಲೇ ಬಂದು ತನ್ನನ್ನು ಕರೆದೊಯ್ಯಲು ಪ್ರಾರ್ಥಿಸಿದಳು. ವಿವಾಹದ ದಿನ , ರುಕ್ಮಿಣಿಯು ಗೌರೀಪೂಜೆಯನ್ನು ಮುಗಿಸಿ , ವಿವಾಹಮಂಟಪದ ಕಡೆ ಹೊರಟ ಸಮಯದಲ್ಲಿ , ಶ್ರೀಕೃಷ್ಣನು ಆಕೆಯನ್ನು ಎತ್ತಿ ತನ್ನ ರಥದಲ್ಲಿ ಕೂಡಿಸಿಕೊಂಡು ಕರೆತಂದು , ದ್ವಾರಕೆಯಲ್ಲಿ ವಿಧ್ಯುಕ್ತನಾಗಿ ವಿವಾಹಮಾಡಿಕೊಂಡನು.

(2) ಮಹಾವೈಭವಯುಕ್ತವಾದ ಅಂತಃಪುರದಲ್ಲಿ ಮಣಿಮಂಚದಮೇಲೆ ಸುಪ್ಪತ್ತಿಗೆಯಲ್ಲಿ ಸುಖಾಸೀನನಾದ ತನ್ನ ಪತಿದೇವನನ್ನು ರುಕ್ಮಿಣಿಯು ತನ್ನ ಸಖಿಯ ಕೈಲಿದ್ದ ರತ್ನದಂಡಯುಕ್ತವಾದ ಚಾಮರವನ್ನು ತೆಗೆದುಕೊಂಡು ಬೀಸುತ್ತ ಸೇವಿಸುತ್ತಿದ್ದಳು. ಆಗ ಶ್ರೀಕೃಷ್ಣನು ' ರಾಜೈಶ್ವರ್ಯಗಳಿಂದ ಶೋಭಿಸುವ ಪರಾಕ್ರಮಿಗಳಾದ ಶಿಶುಪಾಲಾದಿಗಳನ್ನು ತೊರೆದು , ಅಂತಹ ರಾಜರಿಂದ ಬೆದರಿ ಸಮುದ್ರಮಧ್ಯದಲ್ಲಿ ಸೇರಿದ (ಸಮುದ್ರಮಧ್ಯದಲ್ಲಿ ಮನೆಮಾಡಿಕೊಂಡಿರುವ - ದ್ವಾರಕೆಯಲ್ಲಿರುವ) ಸಿಂಹಾಸನಶೂನ್ಯನೂ , ದರಿದ್ರನೂ , ದರಿದ್ರರಿಗೆ ಪ್ರಿಯನೂ , ಗುಣಹೀನನೂ ಆದ ನನ್ನನ್ನು , ನಾರದಾದಿ ಭಿಕ್ಷುಕರ ( ವಿರಕ್ತರ ) ವ್ಯರ್ಥವಾದ ಸ್ತುತಿಪರ ನುಡಿಗಳನ್ನು ಕೇಳಿ ಮರುಳಾಗಿ ವರಿಸಿದಿ ' ಎಂದನು.

ಈ ಮಾತ ಕೇಳಿ ಕೈಚಾಮರವನೀಡಾಡಿ 
ಭೂಮಿಗೊರಗಿದಳು ಭುಗಿಲೆಂದು । ಭುಗಿಲೆಂದು ಮಲಗಿದಾ -
ಕಾಮಿನಿಯ ಕಂಡ ಕಮಲಾಕ್ಷ ॥ 4 ॥ ॥ 121 ॥

ಅರ್ಥ : ಈ ಮಾತ ಕೇಳಿ = ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ , ಕೈಚಾಮರವನು = ತನ್ನ ಕೈಲಿದ್ದ ಚಾಮರವನ್ನು , ಈಡಾಡಿ = (ಕೈನಡುಕ ಹುಟ್ಟಿದ್ದರಿಂದ) ಬಿಸುಟು , ಭುಗಿಲೆಂದು = (ಭಯದುಃಖಗಳಿಂದ ಎದೆಯೊಡೆದಂತಾಗಿ) ಧಪ್ಪನೆ , ಭೂಮಿಗೆ = ಭೂಮಿಯಲ್ಲಿ , ಒರಗಿದಳು = ಬಿದ್ದಳು ; ಮಲಗಿದ ಕಾಮಿನಿಯ = ಹಾಗೆ ಭೂಮಿಯಲ್ಲಿ ಮಲಗಿದ ತನ್ನ ರಮಣಿಯನ್ನು , ಕಮಲಾಕ್ಷ = ಪುಂಡರೀಕಾಕ್ಷನಾದ ಶ್ರೀಕೃಷ್ಣನು , ಕಂಡ = ಅನುಕಂಪದಿಂದ ಕೂಡಿ ನೋಡಿದನು.

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ । ಮುದ್ದಿಸಿ ಮಾತಾಡ್ದ
ಕಂಗಶ್ರುಗಳ ಒರಸುತ್ತ ॥ 5 ॥ ॥ 122 ॥

ಅರ್ಥ : ಕಂಗೆಟ್ಟಳೆಂದು = ದಿಕ್ಕುತೋಚದವಳಂತೆ ಆದಳೆಂದು , ತನ್ನಂಗನೆಯ = ತನ್ನ ರಮಣಿಯನ್ನು , ಬಿಗಿದಪ್ಪಿ = ಗಾಢವಾಗಿ ಆಲಂಗಿಸಿ , ಮುಂಗುರುಳ = ಹಣೆಯ ಗುಂಗುರುಕೂದಲುಗಳನ್ನು , ತಿದ್ದಿ = ಸರಿಪಡಿಸಿ (ನೇವರಿಸಿ) , ಮುದ್ದಿಸಿ = ಮುದ್ದು ಕೊಟ್ಟು , ಕಂಗಳಶ್ರುಗಳ = ಕಣ್ಣೀರನ್ನು , ಒರಸುತ್ತ = ಅಳಿಸುತ್ತ , ಮಾತಾಡ್ದ = ಮಾತನಾಡಿದನು.

ವಿಶೇಷಾಂಶ : ಹಿಂದೆಂದೂ ಕೇಳದ ಅಪ್ರಿಯ ಮಾತುಗಳನ್ನು ತನ್ನ ಪತಿಯಿಂದ ಕೇಳಿದ ರುಕ್ಮಿಣಿಯು , ಭಯದಿಂದ ಹೃದಯವು ನಡುಗಲು , ದುರಂತಚಿಂತಾಮಗ್ನಳಾಗಿ ಅಳುವುದಕ್ಕೆ ಆರಂಭಿಸಿದಳು. ಮುಂದೇನಾಯಿತೆಂಬುದನ್ನು ಭಾಗವತವು ಹೀಗೆ ನಿರೂಪಿಸುತ್ತದೆ :
ಭಯಭ್ರಾಂತಳಾದ ರುಕ್ಮಿಣಿಯ ಕೈಯಿಂದ ವ್ಯಜನವು ಜಾರಿಬಿತ್ತು ; ದೇಹವು ನಡುಗಿತು ; ಗಾಳಿಯಿಂದ ಕಳಚಿ ಬೀಳುವ ಬಾಳೆಗಿಡದಂತೆ ಬಿದ್ದಳು ; ಕೇಶಗಳು ಕೆದರಿದವು ; ಶ್ರೀಕೃಷ್ಣನು ತನ್ನ ಪ್ರಿಯಳ ಗಾಢಪ್ರೇಮವನ್ನೂ , ಹಾಸ್ಯದ ಮಾತುಗಳೆಂದು ಅರಿಯದೆ ದುಃಖಿಸುತ್ತಿರುವುದನ್ನೂ ಕಂಡು ಅನ್ಯರನ್ನು ಎಂದೂ ಮನಸ್ಸಿನಲ್ಲಿ ತರದ ಆಕೆಯನ್ನು ತನ್ನ ಬಾಹುಗಳಿಂದ ಬಿಗಿದಪ್ಪಿದನು. ಭಾಗವತದ ಶ್ಲೋಕಗಳ ಭಾವಾರ್ಥವನ್ನೇ ಶ್ರೀದಾಸಾರ್ಯರು ೧೨೧ - ೧೨೨ನೇ ಪದ್ಯಗಳಲ್ಲಿ ನಿರೂಪಿಸಿರುವರೆಂಬುದು ಸ್ಪಷ್ಟವಿದೆ. ಹಾಗಲ್ಲದೆ ' ಭುಗಿಲೆಂದು ಚಾಮರವನೀಡಾಡಿ ' ಎಂಬುದಕ್ಕೆ ಸಿಟ್ಟಿಗೆದ್ದು ಬಿಸಾಡಿದಳೆಂಬರ್ಥವನ್ನು ತಿಳಿಯಬಾರದು. ಯಾವ ಪರಿಸ್ಥಿತಿಯಲ್ಲಿಯೂ ರುಕ್ಮಿಣಿಯು ಪತಿಸೇವೆಯನ್ನು ತಿರಸ್ಕರಿಸಳು. ಮಹಾಲಕ್ಷ್ಮೀದೇವಿಗೆ ಭಯಶೋಕಾದಿಗಳೂ ಇಲ್ಲ - ಶ್ರೀಹರಿಯು ಆಕೆಗೆ ಅಪ್ರಿಯವನ್ನು ಎಂದೂ ನುಡಿಯುವುದಿಲ್ಲ. ಲೌಕಿಕ ದಂಪತಿಗಳಂತೆ ವಿಡಂಬನ ಮಾತ್ರವೆಂದು ತಿಳಿಯಬೇಕು. ವಿಡಂಬನವೂ ಸಹ ಲೌಕಿಕರಿಗೆ ಶಿಕ್ಷಾರೂಪವಾಗಿದೆ ಎಂಬುದನ್ನು ಗಮನಿಸಬೇಕು. ಪ್ರೇಮಕಲಹವು , ಸತಿಯಲ್ಲಿ ಪತಿಪ್ರೇಮವನ್ನು ( ಭಕ್ತಿಯನ್ನು ) ಗಾಢಗೊಳಿಸಬೇಕು. ಸರಸವು ವಿರಸದಲ್ಲಿ ಪರ್ಯವಸಾನಗೊಳ್ಳಬಾರದು. ಮನನೊಂದ ಸತಿಯನ್ನು ಪತಿಯು ತತ್ಕಾಲದಲ್ಲಿ ಸಂತೈಸಬೇಕು. ಕಲಹವೆಂಬುದು ಸರಸಾಟವು ; ಜಗಳವಲ್ಲ. ಅಲ್ಲಿ ಚಿರಕಾಲದ ಕೋಪತಾಪಗಳ ಪಾತವಾಗುವ ಸಂಭವವೇ ಇರಕೂಡದೆಂಬ ಮುಂತಾದ ನೀತಿಗಳು ಶಿಕ್ಷಿತವಾಗಿದೆ.

ಸಲಿಗೆ ಮಾತುಗಳ ಬಗೆ ತಿಳಿಯದಲೆ ಹೀಗೆ ಚಂ -
ಚಲವನೈದುವರೆ ಚಪಲಾಕ್ಷಿ । ಚಪಲಾಕ್ಷಿ ಏಳೆಂದು
ಲಲನೆಯಳ ನಗಿಸಿ ನಗುತಿರ್ದ ॥ 6 ॥ ॥ 123 ॥

ಅರ್ಥ : ಸಲಿಗೆಮಾತುಗಳ ಬಗೆ = ಸರಸದಿಂದಾಡಿದ ನನ್ನ ಮಾತಿನ ಪರಿಯನ್ನು (ನಿಜಭಾವವನ್ನು) , ತಿಳಿಯದಲೆ = ತಿಳಿಯದೆ , ಚಪಲಾಕ್ಷಿ = ಹೇ ಚಂಚಲನಯನೆ ರುಕ್ಮಿಣಿ ! ಹೀಗೆ = ಈ ರೀತಿ , ಚಂಚಲವನು = ಮನೋವ್ಯಗ್ರತೆಯನ್ನು , ಐದುವರೆ = ಹೊಂದುವರೇ ? ( ಹೊಂದಬಾರದು ) , ಏಳೆಂದು = ಮೇಲೇಳು ಎಂದು ಹೇಳಿ (ಎಬ್ಬಿಸಿ) , ಲಲನೆಯಳ = ತನ್ನ ಪ್ರಿಯಳನ್ನು , ನಗಿಸಿ = ನಗುವಂತೆ ಮಾಡಿ , ನಗುತಿರ್ದ = ತಾನೂ ನಕ್ಕನು.

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ -
ಷಾದಪಡಲ್ಯಾಕೆ ಅನುದಿನ । ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನೆ ಬಳಿಯಲ್ಲಿ ॥ 7 ॥ ॥ 124 ॥

ಅರ್ಥ : ಶ್ರೀದೇವಿ = ಹೇ ಲಕ್ಷ್ಮೀದೇವಿ ! ನಿನ್ನೊಳು = ನಿನ್ನೊಡನೆ , ವಿನೋದವನೆ ಮಾಡಲು = ಪರಿಹಾಸ ಮಾಡಿದ ಮಾತ್ರದಿಂದ , ವಿಷಾದ = ಈ ಪರಿಯ ಭಯಶೋಕಗಳನ್ನು , ಪಡಲ್ಯಾಕೆ = ಹೊಂದಬೇಕೇ (ಕೂಡದು) ; ಅನುದಿನದಿ = ನಿತ್ಯವೂ , ಸ್ಮರಿಸುವರ = ನನ್ನನ್ನು ಸ್ಮರಿಸುವವರನ್ನು , ಬಳಿಯಲ್ಲಿ = (ಅವರ) ಸಮೀಪದಲ್ಲಿ , ಕಾದುಕೊಂಡಿಹೆನೆ = (ಶೋಕಭಯಾದಿಗಳು ಬಾರದಂತೆ) ಕಾದಿರುವೆ ನಲ್ಲೆ! (ನಿನ್ನಂತೆ ನಿತ್ಯ ನನ್ನ ಸ್ಮರಿಸುವವರು ಅನ್ಯರಾರೂ ಇಲ್ಲದಿರಲು , ನಿನಗೆ ಭಯಶೋಕಾದಿಗಳನ್ನುಂಟುಮಾಡುವ ಉದ್ದೇಶವು ನನಗಿದ್ದೀತೇ ದೇವಿ ? - ಸರ್ವಥಾ ಇಲ್ಲ )

ವಿಶೇಷಾಂಶ :
ಸಾಂತ್ವಯಾಮಾಸ ಸಾಂತ್ವಜ್ಞಃ ಕೃಪಯಾ ಕೃಪಣಾಂ ಪ್ರಭುಃ।
ಹಾಸ್ಯಪ್ರೌಢಿಭ್ರಮಚ್ಚಿತ್ತಾಂ ಅತದರ್ಹಾಂ ಸತಾಂ ಗತಿಃ ॥
- (ಭಾಗವತ) ಶ್ರೀಕೃಷ್ಣನು ಪ್ರೌಢಹಾಸ್ಯದಿಂದ ಭಯಭ್ರಾಂತಳಾದ ರುಕ್ಮಿಣಿಯನ್ನು ಸಮಾಧಾನಗೊಳಿಸಿ , ಸ್ವಭಕ್ತರ ನಿತ್ಯರಕ್ಷಕನೆಂದು ನಿದರ್ಶನ ಮಾಡಿರುವನು.

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ -
ವರ್ಗದ ನುಡಿಗೆ ಹರುಷದಿ । ಹರುಷದಿಂದಲಿ ಪಾದ -
ಯುಗ್ಮಕೆರಗಿದಳು ಇನಿತೆಂದು ॥ 8 ॥ ॥ 125 ॥

ಅರ್ಥ : ಸೌಭಾಗ್ಯಭಾಮಿನಿಯು = ಮಂಗಳದೇವತೆಯಾದ ರುಕ್ಮಿಣಿಯು (ಸಂಪದಭಿಮಾನಿಯು) , ಮನದಿ = ಮನಸ್ಸಿನಲ್ಲಿ , ಹಿಗ್ಗಿದಳು = ಹರ್ಷಿಸಿದಳು (ಉಬ್ಬಿದಳು) ; ಅಪವರ್ಗದನುಡಿಗೆ = (ಶ್ರೀಕೃಷ್ಣನ) ಅತ್ಯಾನಂದಕರ ಮಾತುಗಳಿಗೆ , ಹರುಷದಿ = ಸಂತೋಷದಿಂದ , ಇನಿತೆಂದು = ಹೀಗೆ (ಮುಂದೆ ಹೇಳುವಂತೆ) ನುಡಿದು , ಪಾದಯುಗ್ಮಕೆ = (ಶ್ರೀಕೃಷ್ಣನ) ಪಾದದ್ವಂದ್ವಕ್ಕೆ , ಎರಗಿದಳು = ನಮಸ್ಕರಿಸಿದಳು.

ಜಗದೇಕಮಾತೆ ಕೈಮುಗಿದು ಲಜ್ಜೆಯಲಾಗ
ಮುಗುಳುನಗೆ ಸೂಸಿ ಮಾತಾಡಿ । ಮಾತಾಡಿದಳು ಪತಿಯ 
ಮೊಗವ ನೋಡುತಲಿ ನಳಿನಾಕ್ಷಿ ॥ 9 ॥ ॥ 126 ॥

ಅರ್ಥ : ಜಗದೇಕಮಾತೆ = ಮುಖ್ಯಜಗಜ್ಜನನಿಯಾದ , ನಳಿನಾಕ್ಷಿ = ಕಮಲನೇತ್ರಳಾದ ರುಕ್ಮಿಣಿಯು , ಆಗ = ( ಶ್ರೀಕೃಷ್ಣನ ನುಡಿಯಿಂದ ) ಹರ್ಷಗೊಂಡಾಗ , ಲಜ್ಜೆಯಲಿ = ( ಭಯಭಕ್ತಿದ್ಯೋತಕವಾದ ಸ್ತ್ರೀಸಹಜ) ನಾಚಿಕೆಯಿಂದ , ಮುಗುಳುನಗೆ ಸೂಸಿ = ಮಂದಹಾಸವನ್ನು ಬೀರಿ , ಪತಿಯ = ಭರ್ತನ , ಮೊಗವ = ಮುಖವನ್ನು , ನೋಡುತಲಿ = ನೋಡುತ್ತ , ಮಾತಾಡಿದಳು = ನುಡಿದಳು.

ವಿಶೇಷಾಂಶ :
ಸೈವಂ ಭಗವತಾ ರಾಜನ್ ವೈದರ್ಭೀ ಪರಿಸಾಂತ್ವಿತಾ ।
ಬಭಾಷ ಋಷಭಂ ಪುಂಸಾಂ ವೀಕ್ಷಂತೀ ಭಗವನ್ಮುಖಮ್ ॥
- ಎಂದು ಭಾಗವತದಲ್ಲಿ ವರ್ಣಿಸಿದಂತೆ , ಪರಿಹಾಸಕ್ಕಾಗಿ ನುಡಿದುದೆಂಬ ಶ್ರೀಕೃಷ್ಣನ ಮಾತಿನಿಂದ ಸಂತಸಗೊಂಡು , ಪತಿಯೊಂದಿಗೆ ಸರಸ ಮಾತನಾಡಿದಳೆಂಬುದನ್ನೂ , ' ಸವ್ರೀಡಹಾಸರುಚಿರಸ್ನಿಗ್ಧಾಪಾಂಗೇನ ಭಾರತ ' ಎಂಬ ಮುಂದಿನ ಭಾಗವತ ವಾಕ್ಯದ ಭಾವವನ್ನು , ಮೇಲಿನ ಎರಡು ಪದ್ಯಗಳಲ್ಲಿ ಹೇಳಿರುವರು. ಪುರುಷಶ್ರೇಷ್ಠನಾದ ಶ್ರೀಕೃಷ್ಣನಲ್ಲಿ ತನಗಿರುವ ಪೂಜ್ಯಬುದ್ಧಿ ಮತ್ತು ಪ್ರೇಮಗಳನ್ನು (ಭಯಭಕ್ತಿ) ಹೊರಸೂಸುವ ನೋಟದಿಂದ ಮಾತನಾಡಲಾರಂಭಿಸಿದಳೆಂದರ್ಥ.

ಪರಿಪುರ್ಣಕಾಮ ನೀ ಕರುಣದಿಂದೀಗ ಸ್ವೀ -
ಕರಿಸಿದೆಯೊ ಎನ್ನ ಸತಿಯೆಂದು । ಸತಿಯೆಂದಕಾರಣಾ -
ಕ್ಷರಳೆನಿಸಿಕೊಂಡೆ ಶ್ರುತಿಯಿಂದ ॥ 10 ॥ ॥ 127 ॥

ಅರ್ಥ : ಪರಿಪೂರ್ಣಕಾಮ = ಪರ್ಯಾಪ್ತಕಾಮನಾದ ( ಆನಂದಭರಿತನಾದ ) ಹೇ ದೇವ ! ನೀ = ನೀನು , ಕರುಣದಿಂದ = ಕೃಪೆಮಾಡಿ , ಈಗ , ಎನ್ನ = ನನ್ನನ್ನು , ಸತಿಯೆಂದು = ನಿನ್ನ ಭಾರ್ಯಳೆಂದು , ಸ್ವೀಕರಿಸಿದೆಯೊ = ಸ್ವೀಕಾರಮಾಡಿರುವಿ (ಒಪ್ಪಿಕೊಂಡಿರುವಿ) ; ಸತಿಯೆಂದ ಕಾರಣ = (ನೀನು ನನ್ನನ್ನು) ಭಾರ್ಯಳೆಂದು ಸ್ವೀಕರಿಸಿರುವುದರಿಂದಲೇ , ಶ್ರುತಿಯಿಂದ = ವೇದದಿಂದ , ಅಕ್ಷರಳು = 'ಅಕ್ಷರ' ಳೆಂದು (ನಿತ್ಯಮುಕ್ತಳೆಂದು) , ಎನಿಸಿಕೊಂಡೆ = ಕರೆಯಲ್ಪಟ್ಟಿರುವೆನು (ಶ್ರುತಿಪ್ರಸಿದ್ಧಳಾಗಿರುವೆನು).

ವಿಶೇಷಾಂಶ : (1) ' ಹರೇಃಪ್ರಸಾದಸಾಮರ್ಥ್ಯಾದಕ್ಷರಾ ಚಾಜರಾಹ್ಯಹಂ ' ಇತ್ಯಾದಿ ಪ್ರಮಾಣಗಳಿಂದ ಶ್ರೀಹರಿಯು ನಿತ್ಯಭಾರ್ಯಳನ್ನಾಗಿ ಸ್ವೀಕರಿಸಿ ಆಕೆಯ ಮೇಲೆ ಸರ್ವದಾ ಪೂರ್ಢಪ್ರಸನ್ನನಾಗಿರುವುದರಿಂದಲೇ ಶ್ರೀದೇವಿಯು , 'ಅಕ್ಷರಳೂ ಅಜರಳೂ ' ಆಗಿರುವಳೆಂದು ಸಿದ್ಧವಾಗುತ್ತದೆ.

(2) ' ಈಗ ಸತಿಯೆಂದು ಒಪ್ಪಿಕೊಂಡೆ ' ಎಂಬುದಕ್ಕೆ ಈಗ ಅವತಾರರೂಪಳಾದ ರುಕ್ಮಿಣಿಯಲ್ಲಿ ,ಅಕ್ಷರಶಬ್ದವಾಚ್ಯಳಾದುದರ ಸಾರ್ಥಕ್ಯವು ಪ್ರಕಟವಾಯಿತೆಂಬರ್ಥವನ್ನು ತಿಳಿಯಬೇಕು.

ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿನೃಪರ ಪತಿಯೆಂದು । ಪತಿಯೆಂದು ಬಗೆವನೇ
ಸವಿಮಾತಿದಲ್ಲ ಸರ್ವಜ್ಞ ॥ 11 ॥ ॥ 128 ॥

ಅರ್ಥ : ನೀನು , ಭುವನಾಧಿಪತಿ = ವಿಶ್ವದೊಡೆಯನು , ನಿನಗೆ , ಆನು = ನಾನು , ಅವಿಯೋಗಿ = ನಿತ್ಯಸಂಗಾತಿ , (ಹೀಗಿರಲು) , ಅವಿವೇಕಿನೃಪರ = ಮೂರ್ಖರಾಜರನ್ನು , ಪತಿಯೆಂದು = (ನನಗೆ) ಪತಿಯೆಂಬುದಾಗಿ , (ಯಾವನನ್ನಾದರೂ - ಎಂದಾದರೂ) , ಬಗೆವೆನೇ = ತಿಳಿದೇನೇ (ಮನಸ್ಸಿನಲ್ಲಿ ಅಂತಹ ಆಲೋಚನೆಯಾದರೂ ಬಂದೀತೇ ? ಸರ್ವಥಾ ಸಂಭಾವ್ಯವಲ್ಲ) ; ಸರ್ವಜ್ಞ = ಸರ್ವಜ್ಞನಾದುದರಿಂದ ನನ್ನ ಮನೋಭಾವಗಳನ್ನು ಬಲ್ಲೆ , ಸವಿಮಾತಿದಲ್ಲ = ಇದು (ಹೀಗೆಂಬುದು) ಸವಿಮಾತಲ್ಲ ( ಶಿಶುಪಾಲಾದಿಗಳನ್ನು ಬಿಟ್ಟು ನನ್ನನ್ನು ಮದುವೆಯಾದೆಯಾಕೆಂಬ ಮಾತು , ಹಾಸ್ಯಕ್ಕಾಡಿದೆಯೆಂದರೂ ನನಗೆ ಅಹಿತವೇ ಸ್ವಾಮಿ ).

ವಿಶೇಷಾಂಶ : ಶಿಶುಪಾಲಾದಿ ರಾಜರನ್ನು ಬಿಟ್ಟು ನನ್ನನ್ನು ವರಿಸಿದೆಯೆಂಬ ಶ್ರೀಕೃಷ್ಣನ ಮಾತಿಗೆ ರುಕ್ಮಿಣಿಯ ಪ್ರತ್ಯುತ್ತರವಿದು :
ಕಸ್ಯಾಃಸ್ಯುರಚ್ಯುತ ನೃಪಾ ಭವತೋಪದಿಷ್ಟಾಃ
ಸ್ತ್ರೀಣಾಂ ಗೃಹೇಷು ಖರಗೋಶ್ವಬಿಡಾಲಭೃತ್ಯಾಃ ।
ಜೀವಚ್ಛವಂ ಭಜತಿ ಕಾಮಮತಿರ್ವಿಮೂಢಾ ಯಾ ತೇ
ಪದಾಬ್ಜಮಕರಂದಮಜಿಘ್ರತೀ ಸ್ತ್ರೀ ॥ 
- (ಭಾಗವತ) 
ಇದು ರುಕ್ಮಿಣಿಯ ನುಡಿ : ರಾಜೈಶ್ವರ್ಯಾದಿಗಳುಳ್ಳವರೆಂದು ನಿನ್ನಿಂದ ಹೇಳಲ್ಪಟ್ಟ ರಾಜರೆಂಬುವರು , ಕಾಮಮೋಹಿತರಾಗಿ ಸ್ತ್ರೀಯರ ಅಂತಃಪುರದಲ್ಲಿ ಹೇಸರಕತ್ತೆ , ಗೋ , ಅಶ್ವ , ಬೆಕ್ಕುಗಳಂತೆ ಅವರ ದಾಸರಾಗಿರುವರು. ಇಂಥ ಹೇಡಿಗಳಾದ ಮೃತಪ್ರಾಯರಾದ ರಾಜರನ್ನು ಹೊಂದಲು ನಿನ್ನ ಪಾದಪದ್ಮಗಳ ಮಕರಂದವನ್ನು ಎಂದೂ ಆಘ್ರಾಣಿಸದ ಮೂರ್ಖಳಾದ ಸ್ತ್ರೀ ಮಾತ್ರ ಪತಿತ್ವೇನ ಕೇವಲ ಕಾಮೋಪಶಾಂತಿಗಾಗಿ ಇಚ್ಛಿಸಬಹುದು. ಉತ್ತಮ ಸ್ತ್ರೀಯರು ತಮ್ಮನ್ನಾಳಲು ಶಕ್ತರಾದ , ಗುಣಗಳಿಂದ ಉತ್ತಮರಾದ ಪುರುಷರನ್ನು ಪತಿಯನ್ನಾಗಿ ಅಪೇಕ್ಷಿಸುವರಲ್ಲದೆ ತಮ್ಮ ಆಜ್ಞಾಪಾಲಕರಾಗಿ ವರ್ತಿಸುವ ಹೇಡಿಗಳನ್ನಲ್ಲ.

ಭಗವಂತ ನೀನು ದುರ್ಭಗದೇಹಗತರವರು
ತ್ರಿಗುಣವರ್ಜಿತವು ತವ ರೂಪ । ತವ ರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ ॥ 12 ॥ ॥ 129 ॥

ಅರ್ಥ : ನೀನು = ಹೇ ವಲ್ಲಭ! ಭಗವಂತ = ಷಡ್ಗುಣೈಶ್ವರ್ಯಪೂರ್ಣನು , ಅವರು = ಇತರ ರಾಜರೆಂಬುವರು , ದುರ್ಭಗದೇಹಗತರು = ದುಃಖಾದಿಗಳಿಗೆ ಆಕರವಾದ (ಪಾಪನಿಮಿತ್ತವಾದ) ನಶ್ವರದೇಹವುಳ್ಳವರು ; ತವ ರೂಪ = ನಿನ್ನ ಸ್ವರೂಪವಾದರೋ (ದೇಹವಾದರೋ - ಸ್ವರೂಪಭಿನ್ನವಾದ ಬೇರೆ ದೇಹವೇ ಇಲ್ಲದ ನೀನಾದರೊ), ತ್ರಿಗುಣವರ್ಜಿತ = ಸತ್ತ್ವರಜಸ್ತಮೋಗುಣಸ್ಪರ್ಶರಹಿತನು (ಜ್ಞಾನಾನಂದರೂಪನು); ತವ = ನಿನ್ನ , ರೂಪಗುಣಗಳನು = ರೂಪಗಳನ್ನೂ , (ಒಂದೊಂದರ) ಗುಣಗಳನ್ನು , ಪೊಗಳಲು = ಸ್ತುತಿಸಲು (ವರ್ಣಿಸಲು) , ಪರಮಾತ್ಮ = ಹೇ ಪುರುಷೋತ್ತಮ ! ಎನ್ನಳವೆ = ನನ್ನ ಸಾಮರ್ಥ್ಯವೇ ? (ನಾನು ಸರ್ವಥಾ ಶಕ್ತಳಲ್ಲ).

ವಿಶೇಷಾಂಶ : (1) ಪರಮಾತ್ಮನು ಅನಂತರೂಪಗಳುಳ್ಳವನು. ಅವು ಪರಸ್ಪರ ಅತ್ಯಂತ ಅಭಿನ್ನವಾದವುಗಳೇ. ಒಂದೊಂದು ರೂಪವೂ ಜ್ಞಾನಾನಂದಾದಿ ಅನಂತಗುಣಪೂರ್ಣವಾದುದು. ಒಂದೊಂದು ಗುಣವೂ ಅನಂತವಾದುದು ಮತ್ತು ಅನಂತಗುಣಾತ್ಮಕವೂ ಆದುದು.
(2) ಶ್ರೀಮಹಾಲಕ್ಷ್ಮಿಯೂ ಸಹ ಪರಮಾತ್ಮನ ಗುಣಗಳನ್ನು ಪೂರ್ಣವಾಗಿ ತಿಳಿಯಳು. ಯಾವುದೊಂದು ಗುಣದ ಅಂತ್ಯವನ್ನು (ಅಂದರೆ ಪೂರ್ಣವಾಗಿ) ತಿಳಿಯಳು.
ನ ರಮಾಪಿ ಪದಾಂಗುಲೀಲಸನ್ನಖಧೂರಾಜದನಂತಸದ್ಗುಣಾನ್ ।
ಗಣಯೇದ್ಗಣಯಂತ್ಯನಾರತಂ ಪರಮಾನ್ ಕೋಸ್ಯಪರೋ ಗುಣಾನ್ ವದೇತ್ ' 
- (ಸುಮಧ್ವವಿಜಯ)
ಪರಮಾತ್ಮನ ಪಾದನಖದ ಧೂಳೀಕಣದಲ್ಲಿ ವಿರಾಜಿಸುವ ಅನಂತ ಸದ್ಗುಣಗಳನ್ನು , ರಮಾದೇವಿಯೂ , ನಿರಂತರ ತೊಡಗಿದರೂ , ಗಣನೆಮಾಡಲು ಸಮರ್ಥಳಲ್ಲ. ಹೀಗಿರಲು ಬೇರಾವನು ಪರಮಾತ್ಮನ ಸದ್ಗುಣಗಳನ್ನು ಹೇಳಲು ಸಮರ್ಥನಾದಾನು!

ಭಾನು ತನ್ನಯ ಕಿರಣಪಾಣಿಗಳ ದೆಶೆಯಿಂದ
ಪಾನೀಯಜಗಳ ಅರಳಿಸಿ । ಅರಳಸಿ ಗಂಧವನಾ -
ಘ್ರಾಣಿಸಿದಂತೆ ಗ್ರಹಿಸಿದಿ ॥ 13 ॥ ॥ 130 ॥

ಅರ್ಥ : ಭಾನು = ಸೂರ್ಯನು , ತನ್ನಯ = ತನ್ನ , ಕಿರಣಪಾಣಿಗಳ ದೆಶೆಯಿಂದ = ಕಿರಣಗಳೆಂಬ ಕೈಗಳಿಂದ , ಪಾನೀಯಜಗಳ = ಕಮಲಗಳನ್ನು , ಅರಳಸಿ = ಅರಳುವಂತೆ ಮಾಡಿ , ಗಂಧವನು = (ಅವುಗಳ) ಪರಿಮಳವನ್ನು , ಆಘ್ರಾಣಿಸಿದಂತೆ = ಸೇವಿಸುವಂತೆ (ವಾಸನೆಯನ್ನು ಅನುಭವಿಸುವಂತೆ) , ಗ್ರಹಿಸಿದಿ = (ಹೇ ಪ್ರಿಯತಮ! ನನ್ನನ್ನು ಗುಣಜ್ಯೇಷ್ಠಳನ್ನಾಗಿಟ್ಟು) ಸ್ವೀಕರಿಸಿರುವಿ.

ವಿಶೇಷಾಂಶ : ಕಮಲವು ಅರಳಿ ಸುಗಂಧವನ್ನು ಬೀರುವುದು ಸಹಸ್ರಕಿರಣನಾದ ಸೂರ್ಯನ ಅಧೀನವಾಗಿರುವಂತೆ , ಸರ್ವಚೇತನರ , ಅಚೇತನಗಳ ಹಾಗೂ ರಮಾದೇವಿಯ ಗುಣಕ್ರಿಯಾದಿಗಳು ಶ್ರೀಹರಿಯ ಅಧೀನ. ಅವರರಾದವರ (ಕೆಳಗಿನವರ) ಗುಣಕ್ರಿಯಾದಿಗಳು , ಸ್ವೋತ್ತಮರ ಅಧೀನವೂ ಆಗಿವೆ. ಅಪಾಂಗಲೇಶದಿಂದ ಸೃಷ್ಟಿ, ಸ್ಥಿತಿ , ಲಯಾದಿಗಳನ್ನು ಮಾಡಲು ಸಮರ್ಥಳಾದ ಮಹಾಲಕ್ಷ್ಮಿಯ ಅದ್ಭುತವಾದ ಗುಣಕ್ರಿಯೆಗಳೂ ಶ್ರೀಹರಿಯ ಅಧೀನವೇ. ಶ್ರೀಹರಿಯೂ ಸ್ವೇಚ್ಛೆಯಿಂಧ ಅವುಗಳನ್ನು ಅಭಿವ್ಯಕ್ತಿಗೊಳಿಸಿ , ತನ್ನ ಸೃಷ್ಟ್ಯಾದಿ ಕಾರ್ಯಗಳಲ್ಲಿ ಅಸದೃಶವಾದ ಸೇವೆಯನ್ನು ಸ್ವೀಕರಿಸಿ , ತನ್ನ ಪ್ರಿಯತಮಳೆಂದು ಸಾರಿ ಹರ್ಷಿಸುವನು.

ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸಿ -
ಗೊಯ್ದು ಹಾಕಿದೆಯೊ ಪರಿಪಂಥಿ । ಪರಿಪಂಥಿ ನೃಪರನ್ನು 
ಐದುವೆನೆ ನಿನ್ನ ಹೊರತಾಗಿ ॥ 14 ॥ ॥ 131 ॥

ಅರ್ಥ : ಬೈದವನ = ನಿಂದಿಸಿದ ಶಿಶುಪಾಲನ , ಕುತ್ತಿಗೆಯ = ಕಂಠವನ್ನು , ಕೊಯ್ದು = (ಚಕ್ರದಿಂದ) ಕತ್ತರಿಸಿ , ಅಂಧಂತಮಸಿಗೆ = ಅಂಧಂತಮಸ್ಸೆಂಬ ಮಹಾ ನರಕಕ್ಕೆ , ಒಯ್ದು ಹಾಕಿದೆನೊ = ಕಳುಹಿಸಿದಿ (ನೂಕಿದಿ) ; ನಿನ್ನ ಹೊರತಾಗಿ = ನಿನ್ನನ್ನು ಬಿಟ್ಟು , ಇನ್ನು = ಮತ್ತೆ ಬೇರೆ , ಪರಿಪಂಥಿನೃಪರನ್ನು = (ನಿನ್ನನ್ನು) ನಾನಾವಿಧದಿಂದ ದ್ವೇಷಿಸುವ ರಾಜರೆಂಬುವರನ್ನು , ಐದುವೆನೆ = ಹೊಂದುವೆನೆ (ಸರ್ವಥಾ ಇಲ್ಲ).

ವಿಶೇಷಾಂಶ : (1) ಹರಿದ್ವೇಷಿಗಳಿಗೆ ಸುಖಹೇತುಗಳಾದ ಸಂಪದಾದಿಗಳು ಲಭಿಸುವುದಿಲ್ಲವೆಂದೂ ಸೂಚಿತವಾಗಿದೆ.

(2) ಶಿಶುಪಾಲನಲ್ಲಿ ಜೀವದ್ವಯರಿದ್ದರು. ಆವಿಷ್ಟನಾಗಿದ್ದ ಅಸುರನನ್ನು ತಮಸ್ಸಿಗೆ ಕಳುಹಿಸಿ , ತನ್ನ ದ್ವಾರಪಾಲಕನಾದ ಜಯನಿಗೆ ಸದ್ಗತಿಯನ್ನಿತ್ತನು. 

(3) ಮಹಾದೈತ್ಯರು ಅಂಶತಃ ತಮಸ್ಸನ್ನು ಹೊಂದುವರು. ಪುನಃ ಹುಟ್ಟಿ ಪೂರ್ಣಸಾಧನೆಯಲ್ಲಿ ತೊಡಗಿಸಲ್ಪಡುವರು.

ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ । ಸಂಹಾರ ಮಾಡುವೆನು
ದುರ್ಮದಾಂಧರನು ಬಗೆವೇನೆ ॥ 15 ॥ ॥ 132 ॥

ಅರ್ಥ : ನಿಮ್ಮನುಗ್ರಹದಿಂದ = ಹೇ ಪತಿದೇವ ! ನಿನ್ನ ಅನುಗ್ರಹದಿಂದ , ಬ್ರಹ್ಮರುದ್ರಾದಿಗಳ = ಬ್ರಹ್ಮರುದ್ರಾದಿ ದೇವತೆಗಳನ್ನು , ನಿರ್ಮಿಸಿ = ಸೃಷ್ಟಿ ಮಾಡಿ , ಸಲಹಿ = ರಕ್ಷಿಸಿ , ಸಂಸಾರ ಮಾಡುವೆನು = ಸಂಹರಿಸುವೆನು , ದುರ್ಮದಾಂಧರನು = (ಹೀಗಿರಲು) ದುರಹಂಕಾರಾದಿಗಳಿಂದ ಅಂಧರಾದವರನ್ನು (ವಿವೇಕಶೂನ್ಯರನ್ನು) , ಬಗೆವೇನೇ = ಲೆಕ್ಕಿಸುವೆನೆ ? (ಕಣ್ಣೆತ್ತಿನೋಡೇನೆ?)

ವಿಶೇಷಾಂಶ :
ಸೃಷ್ಟಿಃಸ್ಥಿತಿಶ್ಚಸಂಹಾರೋ ನಿಯತಿರ್ಜ್ಞಾನಮಾವೃತಿಃ ।
ಬಂಧಮೋಕ್ಷಾದಯಃ ಸರ್ವೇ ಮಹಾಭೂತಿಪುರಸ್ಸರಾಃ ॥
ಅನಾದ್ಯನಂತಕಾಲೇಷು ಸರ್ವಸ್ಯ ಜಗತೋऽಪಿ ಚ ।
ಕಟಾಕ್ಷಲೇಶಮಾತ್ರೇಣ ಮಹಾಲಕ್ಷ್ಮ್ಯಾ ಭವಂತಿ ಹಿ ॥
ಸದಾ ಮುಕ್ತೌ ಚ ಸಂಸಾರೇ ಬಿಭರ್ತ್ಯೇತಾನ್ ಸದಾ ರಮಾ ।
ಸೈವ ಸರ್ವಸ್ಯ ಕರ್ತ್ರೀ ಚ ಸದಾ ಸರ್ವತ್ರ ಸಂಸ್ಥಿತಾ ॥
- (ಸತ್ತತ್ವರತ್ನಮಾಲಾ)
- ಪ್ರಮಾಣಗಳು ಶ್ರೀಮಹಾಲಕ್ಷ್ಮಿಯ ಶಕ್ತಿ ಜ್ಞಾನಾದಿ ವೈಭವಗಳನ್ನು ನಿರೂಪಿಸುತ್ತವೆ. ಈ ವಾಕ್ಯಗಳ ಭಾವಾರ್ಥ ಹೀಗಿದೆ : ಯಾವ ಅಧಿಕಾರಿಗೆ ಬ್ರಹ್ಮ , ರುದ್ರ , ಋಷಿಪದವಿಗಳನ್ನು ಕೊಡಲಿಚ್ಛಿಸುವೆನೋ ಅಂಥವನನ್ನು ಆ ಪದವಿಗಳಿಗೆ ಹೊಂದಿಸುತ್ತೇನೆ ; ಅಜ್ಞಾನಿಯನ್ನು ಮಹಾ ಮೇಧಾವಿಯನ್ನಾಗಿಸಬಲ್ಲೆನು ; ಬ್ರಹ್ಮಾದಿಗಳನ್ನು ತೃಣಪ್ರಾಯರನ್ನಾಗಿ ಎಣಿಸಬಲ್ಲೆನು ; ತೃಣಾದಿ ಅಲ್ಪಚೇತನರನ್ನೂ ಎತ್ತಿಹಿಡಿದು ಮಹತ್ಕಾರ್ಯಗಳನ್ನು ಮಾಡಿಸಬಲ್ಲೆನು . ಸೃಷ್ಟ್ಯಾದಿಗಳೆಲ್ಲವನ್ನೂ ಅನಾದ್ಯನಂತಕಾಲದಲ್ಲಿ (ಶ್ರೀಹರಿ ಚಿತ್ತಾನುಸಾರವಾಗಿ) ನಡೆಸಲು ನನ್ನ ಕಟಾಕ್ಷಲೇಶವು ಸಮರ್ಥವಾಗಿದೆ. ಮುಕ್ತಾಮುಕ್ತ ಬ್ರಹ್ಮಾದಿ ಸಕಲಜಗತ್ತಿನ ನಿಯಾಮಕಳು - ಸರ್ವಕರ್ತಳು.

ಮಂಜುಳೋಕ್ತಿಯ ಕೇಳಿ ಅಂಜಲೇಕೆಂದು ನವ -
ಕಂಜಲೋಚನೆಯ ಬಿಗಿದಪ್ಪಿ । ಬಿಗಿದಪ್ಪಿ ಪೇಳಿದ ಧ -
ನಂಜಯಪ್ರಿಯ ಸಥೆಯಿಂದ ॥ 16 ॥ ॥ 133 ॥

ಅರ್ಥ : ಮಂಜುಳೋಕ್ತಿಯ = (ರುಕ್ಮಿಣಿಯ) ಮನೋಹರವಾದ ಮಾತುಗಳನ್ನು , ಕೇಳಿ = (ಶ್ರೀಕೃಷ್ಣನು) ಕೇಳಿ , ಅಂಜಲೇಕೆಂದು = (ನನ್ನ ಪರಿಹಾಸದ ನುಡಿಗಳಿಂದ) ಭಯಪಟ್ಟಿದ್ದೇಕೆಂದು ಪುನಃ ಹೇಳಿ , ನವಕಂಜಲೋಚನೆಯ = ಆಗತಾನೆ ಅರಳಿದ ಕಮಲದಂತೆ ವಿಕಸಿತನೇತ್ರಳಾದ ರುಕ್ಮಿಣಿಯನ್ನು , ಬಿಗಿದಪ್ಪಿ = ಗಾಢವಾಗಿ ಆಲಂಗಿಸಿ , ಧನಂಜಯಪ್ರಿಯ = ಪಾರ್ಥಸಖನಾದ ಶ್ರೀಕೃಷ್ಣನು , ಸಥೆಯಿಂದ = ಸಲಿಗೆಯಿಂದ , ಪೇಳಿದ = (ಮುಂದಿನಂತೆ) ನುಡಿದನು.

ವಿಶೇಷಾಂಶ : ಈ ಮಾತುಗಳನ್ನು ಆಡಬಹುದೋ ಇಲ್ಲವೋ ಎಂಬ ಸಂಶಯಕ್ಕೆಡೆಗೊಡದ ಪ್ರೇಮಜನ್ಯಸರಳಮನೋಭಾವವು ' ಸಥೆ ' ಎನಿಸುವುದು.

ನಿನಗೆ ಎನ್ನಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು । ಎಂದೆಂದು ಇಹುದಿದಕೆ
ಅನುಮಾನವಿಲ್ಲ ವನಜಾಕ್ಷಿ ॥ 17 ॥ ॥ 134 ॥

ಅರ್ಥ : ನಾ =ನಾನು , ನಿನಗೆ , ಎನ್ನಲಿ = ನನ್ನಲ್ಲಿ , ಭಕ್ತಿ = ( ನನ್ನ ಮಹಾತ್ಮ್ಯಜ್ಞಾನಪೂರ್ವಕವಾದ ) ಪ್ರೇಮವು , ಎನಿತಿಹುದು = ಎಷ್ಟು ಅಪಾರವಾಗಿರುವುದೆಂಬುದನ್ನು , ಕಂಡೆ = ತಿಳಿದೆನು ; ಎನಗೆ = ನನಗೆ , ಎಂದೆಂದು = ಸರ್ವ ಕಾಲದಲ್ಲಿ , ಕರುಣ = (ನಿನ್ನಲ್ಲಿ) ವಾತ್ಸಲ್ಯವು (ದಯೆಯು - ಪ್ರಸಾದವು) , ಇಹುದು = ಇರುವುದು ; ಇಹುದಿದಕೆ = ನೀನು ಸರ್ವದಾ ಕೃಪಾಪಾತ್ರಳೆಂಬುವ ಈ ವಿಚಾರದಲ್ಲಿ , ವನಜಾಕ್ಷಿ = ಹೇ ಕಮಲಾಕ್ಷಿ ! ಅನುಮಾನವಿಲ್ಲ = ಸಂಶಯವೇ ಇಲ್ಲ.

ವಿಶೇಷಾಂಶ : ರಮಾದೇವಿಯು ಏಕಾಂತಭಕ್ತರಲ್ಲಿ ಶ್ರೇಷ್ಠಳು. ಆಕೆಯಂತೆ ಶ್ರೀಹರಿಯ ನಿತ್ಯಕೃಪಾಪಾತ್ರರು ಅನ್ಯರಾರೂ ಇಲ್ಲ. ಬ್ರಹ್ಮದೇವನಿಗಿಂತ ಕೋಟಿಗುಣಾಧಿಕ ಭಕ್ತಿಯುಳ್ಳವಳು ; ನಿತ್ಯಮುಕ್ತಳು , ಸಕಲ ದೋಷದೂರಳು , ಪೂರ್ಣಕಾಮಳು , ಶ್ರೀಹರಿಗೆ ಪ್ರಿಯತಮಳು.
ಯಂ ಯಂ ಕಾಮಯಸೇ ಕಾಮಂ ಮಯಿ ಕಾಮಯ ಕಾಮಿನಿ ।
ಸಂತಿ ಹ್ಯೇಕಾಂತಭಕ್ತಯಾಃ ತವ ಕಲ್ಯಾಣಿ ನಿತ್ಯದಾ ॥
- ' ಹೇ ಕಲ್ಯಾಣಿ , ನೀನು ಅಪೇಕ್ಷಿಸುವ ಸಕಲಭೋಗಗಳು ಏಕಾಂತಭಕ್ತಳಾದ ನಿನಗೆ ಸರ್ವಕಾಲದಲ್ಲಿ ಸಿದ್ಧವೇ ಆಗಿವೆ ' , ಎಂದು ಭಾಗವತದಲ್ಲಿ ಶ್ರೀಕೃಷ್ಣನು ರುಕ್ಮಿಣಿಗೆ ಹೇಳಿದನೆಂದು ಶ್ರೀಕೃಷ್ಣ ರುಕ್ಮಿಣಿಯರ ಪ್ರೇಮಕಲಹದ ವೃತ್ತಾಂತವನ್ನು ಉಪಸಂಹರಿಸಿ , ' ಸ್ವರತೋ ರಮಯಾ ರೇಮೇ ನರಲೋಕಂ ವಿಡಂಬಯನ್ ' - ' ಸ್ವರಮಣನಾದ ತಾನು , ರಮಾರೂಪಳಾದ ರುಕ್ಮಿಣಿಯಲ್ಲಿ ನರರಂತೆ ನಟಿಸುತ್ತ ಕ್ರೀಡಿಸಿದನು ' ಎಂಬುದಾಗಿ ಹೇಳಲಾಗಿದೆ.

ದೋಷವರ್ಜಿತ ರುಕ್ಮಿಣೀಶನ ವಿಲಾಸ ಸಂ -
ತೋಷದಲಿ ಕೇಳಿ ಪಠಿಸಿದ । ಪಠಿಸಿದಂಥವರ ಅಭಿ -
ಲಾಷೆ ಪೂರೈಸಿ ಸಲಹುವ ॥ 18 ॥ ॥ 135 ॥

ಅರ್ಥ : ದೋಷವರ್ಜಿತ = ದೋಷರಹಿತನಾದ , ರುಕ್ಮಿಣೀಶನ = ಶ್ರೀಕೃಷ್ಣನ , ವಿಲಾಸ = ಲೀಲೆಯನ್ನು , ಸಂತೋಷದಲಿ = ಪ್ರೀತಿಯಿಂದ (ಭಕ್ತಿಯಿಂದ) , ಕೇಳಿ ಪಠಿಸಿದಂಥವರ = ಕೇಳುವವರ ಮತ್ತು ಓದುವವರ , ಅಭಿಲಾಷೆ = ಅಭೀಷ್ಟಗಳನ್ನು , ಪೂರೈಸಿ = ಕೊಟ್ಟು (ಪೂರ್ಣಗೊಳಿಸಿ) , ಸಲಹುವ = ರಕ್ಷಿಸುವನು.

ನೀತಜನಕನು ಜಗನ್ನಾಥವಿಟ್ಠಲ ಜಗ -
ನ್ಮಾತೆಯೆನಿಸುವಳು ಮಹಲಕ್ಷ್ಮೀ । ಮಹಲಕ್ಷ್ಮಿಸುತ ಬ್ರಹ್ಮ -
ಭ್ರಾತನೆನಿಸುವನು ಗುರುರಾಯ ॥ 19 ॥ ॥ 136 ॥


ಅರ್ಥ : ನೀತಜನಕನು = ನಿಯತ (ಶಾಶ್ವತ) ತಂದೆಯು , ಜಗನ್ನಾಥವಿಟ್ಠಲ = ಜಗದೊಡೆಯನಾದ ವಿಟ್ಠಲನು , ಮಹಲಕ್ಷ್ಮೀ = ಮಹಾಲಕ್ಷ್ಮೀದೇವಿಯು , ಜಗನ್ಮಾತೆಯೆನಿಸುವಳು = ಜಗತ್ತಿನ ತಾಯಿಯೆನಿಸುತ್ತಾಳೆ. ಮಹಲಕ್ಷ್ಮಿಸುತ = ಮಹಾಲಕ್ಷ್ಮೀದೇವಿಯ ಮಗನಾದ , ಬ್ರಹ್ಮಭ್ರಾತನು = ಬ್ರಹ್ಮದೇವನ ಅನುಜನಾದ ಶ್ರೀವಾಯುದೇವನು , ಗುರುರಾಯ = ಗುರುಗಳ ರಾಜನು ( ಜಗದ್ಗುರುವು) , ಎನಿಸುವನು = ಎಂದು (ಶಾಸ್ತ್ರಗಳಿಂದ) ಹೇಳಲ್ಪಡುತ್ತಾನೆ.
ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
**********