ಧನ್ಯನಾದೆನೊ ಇಂದು ನಿನ್ನಪಾದ
ಸನ್ನಿಧಿಯ ಘನ್ನ ದರುಶನದಿಂದಲಿ ಪ
ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ
ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ
ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ
ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ
ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ
ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ
ಅಮಿತಶ್ರಮ ಪರಿಹರಿಸಿ ಈಗ
ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ
ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1
ನಿನ್ನ ದರುಶನವೆಂದಿಗಂದಿಗಾಗಲಿ ಎಂದು
ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ
ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ
ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ
ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ
ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು
ಘನ್ನ ದರುಶನವಿತ್ತೆ 2
ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ
ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ
ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ
ಪಂಕಜನಾಭ ಮುಕುಂದ ಗೋವಿಂದ
ಶಂಕರನುತಪೂಜಿತ
ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ
ವೇಂಕಟೇಶ ನಿನ್ನ ನೋಡಿದೆ ಬಿಡದೇ 3
****