ಶ್ರೀವ್ಯಾಸರಾಜ ವಿರಚಿತ ವ್ಯಾಪ್ತಿ ಸುಳಾದಿ
ರಾಗ ಮೋಹನ
ಧ್ರುವತಾಳ
ತಂದೆಯಾಗಿ ತಾಯಿಯಾಗಿ
ಇಂದಿರೇಶನೆ ಎನಗೆ ಬಂಧುವಾಗಿ ಬಳಗವಾಗಿ
ಶಿಂಧುಶಯನನೆ ಹಿಂದಾಗಿ ಮುಂದಾಗಿ ಮು -
ಕ್ಕುಂದನೆ ಎನಗೆ ಸ್ವಾಮಿಯಾಗಿ
ಭೂಮಿಯಾಗಿ ರಕ್ಕಸಾಂತಕನೆ
ಗುರುವಾಗಿ ದೈವವಾಗಿ ದೇವೋತ್ತಮನೆ ಎನಗೆ
ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ
ದಿಕ್ಕಾಗಿ ದೆಶೆಯಾಗಿ ರಾಮಚಂದ್ರನೆ ಎನಗೆ
ಇಹವಾಗಿ ಪರವಾಗಿ ಶ್ರೀಕೃಷ್ಣನೆ ॥ 1 ॥
ಮಠ್ಯತಾಳ
ಬೊಮ್ಮನಮ್ಮ ರುಗ್ಮಿಣಿ ರಾಣಿದೇವಿಯು
ಪೆರ್ಮೆಯ ಅಜನು ಹೆಮ್ಮಗ
ಹಮ್ಮಿನ ರುದ್ರ ಮೊಮ್ಮಗ
ಸುಮನಸರೆಲ್ಲ ಪರಿವಾರ
ನಮ್ಮ ಸ್ವಾಮಿ ಕೃಷ್ಣ ಎಂದರೆ
ಪೆರ್ಮೆ ಇಂದೊಲಿದಿಲ್ಲವೇ ॥ 2 ॥
ರೂಪಕತಾಳ
ದೂರದೊಳ್ ನಿಂದೊಮ್ಮೆ ಗೋವಿಂದ ಗೋವಿಂದ
ಅನಾಥಬಂಧುವೆ ದ್ವಾರಕಾವಾಸಿಯೆಂದು
ಚೀರಿದ ದ್ರೌಪದಿಗೆ ಸಾರಿದೆ ನಾ ನಿನ್ನ
ನಂಬಿದೆಯೆಂದು ಕೃಷ್ಣ ಚೀರಿದ ದ್ರೌಪದಿಗೆ ॥ 3 ॥
ಅಟ್ಟತಾಳ
ಅಂದು ವಿಷ್ಣು ಇಂದು ವಿಷ್ಣು
ಎಂದೆಂದು ವಿಷ್ಣು ತಾನೆ
ಅತ್ತ ವಿಷ್ಣು ಇತ್ತ ವಿಷ್ಣು
ಎತ್ತೆತ್ತ ವಿಷ್ಣು ತಾನೆ
ಸ್ವಪ್ನ ಸುಷುಪ್ತಿ ಜಾಗ್ರತಿಲಿ ವಿಷ್ಣು ತಾನೆ
ಸರ್ವಯಜ್ಞ ಸರ್ವಶಕ್ತಿ ಸಾಧುಗತಿ ವಿಷ್ಣು ತಾನೆ
ಓವಿನೋವಿ ಮನದಲ್ಲಿ ಕಾವ ಕೃಷ್ಣ ಇರುತಿರೆ
ಆವಾಗಲೆಲ್ಲಿಹ ದಾವ ಭಯ ನಿನಗೆ ಜೀವಾ ॥ 4 ॥
ಏಕತಾಳ
ಕರಿ ಹರಿ ಎನಲಾ ಸುಪ್ತಿಯ ತಳ್ಳಿ
ಸಿರಿಯೆ ಸಾರೆನುತ ಉರಗ ಮಂಚದಿಂ ಧುಮುಕಿ
ಕರವಿತ್ತ ವಿರಂಚನ ಕೈಲಾಗವಲ್ಲದೆ
ಭರದಿ ಹನುಮನಿತ್ತ ಹಾವಿಗೆಯ ದಾಂಟಿದಾಗ
ಗರುಡನೊದಗುತಿರೆ
ತಿರುಗಿ ನೋಡಿದ ನಿನ್ನ ಕರುಣವ ತೋರೆನಗೆ
ನಮೋ ನಮೋ ಸಿರಿ ಕೃಷ್ಣ ॥ 5 ॥
ಜತೆ
ನಾರಾಯಣಾ ಎಂದು ಮಗನ ಕರೆಯುತಿರೆ ಎನ್ನ
ಕರೆದವರಾರೆಂದು ಅಂಜದಿರೆನುತಲಿ ಅಜಮಿಳಗೆ ಶ್ರೀಕೃಷ್ಣ ॥
**************