ಏಕನಾದ
ಹರಿಗುರುಗಳ ಬಿಟ್ಟು ನರಸ್ತುತಿಗಳನು ಮಾಡಬಾರ್ದು ಪ
ಸಿರಿವುರಿಯಲಿ ಸಿಕ್ಕಿ ನರಹರಿ ಚರಣವ ಬಿಡಬಾರ್ದು ಅ.ಪ.
ಒಂಟಿಲಿ ಸತಿಯನು ಪತಿವ್ರತೆ ಎನ್ನುತ ಬಿಡಬಾರ್ದು
ನೆಂಟೆಗೆ ಮಿತ್ರಗೆ ಸೂಳೆಗೆ ಸಾಲವ ಕೊಡಬಾರ್ದು
ತುಂಟರ ಕುಡುಕರ ಜಾರರ ನೆರೆಹೊರೆ ಇರಬಾರ್ದು
ಒಂಟಿಯ ಊಟವ ಪಯಣವ ಕಲಹವ ಬೆಳೆಸಬಾರ್ದು 1
ಮಾವನ ಮನೆಯಲಿ ದುಡಿಯದ ಅಳಿಯನು ನಿಲ್ಲಬಾರ್ದು
ಕೋವಿದರಡಿಗಳ ಸುಜನರ ಸಂಗವ ಬಿಡಬಾರ್ದು
ಜೀವರು ಹರಿ ಸಮ ಮಾಯವೆ ಜಗಸರಿ ಎನಬಾರ್ದು
ದೇವನ ದೂಡುತ ವಿಷಯವ ಹರಿಸುತ ಕೆಡಬಾರ್ದು 2
ಮನೆಕದ ಮುಂದಿಲಿ ಪತಿವ್ರತೆ ತಾನು ನಿಲಬಾರ್ದು
ತನುವನು ತೋರುತ ಸೆರೆಗನು ಬೀರುತ ನಡಿ ಬಾರ್ದು
ವನಿತೆಯ ಸಂಗಡ ಗುಟ್ಟಿನ ವಿಷಯವ ನುಡಿಬಾರ್ದು
ಮಣಿಯದೆಲೆಂದಿಗು ಹಿರಿಯರ ಚರಣಕೆ ನಡಿಬಾರ್ದು3
ನುಡಿಯುವ ತೆರೆದಲಿ ನಡೆಯದ ಮನುಜನ ನಂಬಬಾರ್ದು
ತಡೆಯದೆ ಕೋಪವ ದುಡುಕುವ ನೆಡೆಯಲಿ ನಿಲ್ಲಬಾರ್ದು
ಬೆಡಗನು ತೋರುವ ನಾರಿಯ ಕಡೆಯಲಿ ನೋಡಬಾರ್ದು
ದುಡುಕುತ ಲೊಡನೆಯೆ ಯಾವುದು ನಿಶ್ಚಯ ಮಾಡಬಾರ್ದು 4
ಕೆಟ್ಟರೆ ನೆಂಟರನೆಂದಿಗು ಮಾನಿಯು ಸೇರಬಾರ್ದು
ಕಷ್ಟವು ಬಂದೆಡೆ ಧೈರ್ಯವನೆಂದಿಗು ಬಿಡಬಾರ್ದು
ಗುಟ್ಟಿನ ಮಂತ್ರವು ಘಟ್ಟಿಲಿ ಜಪಿಸುತ ಕೂಗಬಾರ್ದು
ಶಿಷ್ಯರಿಗಲ್ಲದೆ ದುಷ್ಟಗೆ ಶಾಸ್ತ್ರವ ನುಡಿಬಾರ್ದು 5
ತಿಂಡಿಯ ಚಪಲವ ನರಹರಿ ತೊಂಡನು ಮಾಡಬಾರ್ದು
ಹೆಂಡರ ಭಜಕನ ಜಾರನ ನುಡಿಗಳ ನಂಬಬಾರ್ದು
ಗಂಡನಿಗಂಜದ ಸತಿ ಸಹ ಸರಸವ ಮಾಡಬಾರ್ದು
ಮಂಡೆಲಿ ಚರಣದಿ ಬರಿತೆರ ವೆಂದಿಗು ಹೋಗಬಾರ್ದು 6
ಹುಡುಗರ ಶಾಲೆಗೆ ಕಲಿಯಲು ಹುಡುಗಿಯ ಕಳಿಸಬಾರ್ದು
ಮಡದಿಗೆ ಭಂಟಗೆ ಒಡನೆಯೆ ಸದರವ ನೀಡಬಾರ್ದು
ಹುಡುಗಿಯ ಕಾಣದ ಜನರಿಗೆ ದೇಶಕೆ ಕೊಡಬಾರ್ದು
ನಡೆನುಡಿ ನೋಟ ವಿಶೇಷದಿ ನೇಮವನಿಡದಲೆ ಇರಬಾರ್ದು 7
ಯಾಚಕ ಸವಿನುಡಿ ವಿನಯ ವಿವೇಕವ ಮರಿಬಾರ್ದು
ಯೋಚನೆ ಗೈಯದೆ ನೆರೆಹೊರೆ ಹಗೆತನ ಗಳಿಸಬಾರ್ದು
ಆಚೆಗೆ ಸತಿಪತಿ ಒಗೆತನ ಹುಳುಕನು ಹಾಕಬಾರ್ದು
ಮೋಚಕ ನಿಜ ಸಖ ಹರಿತಾನೆಂಬುದ ಮರಿಬಾರ್ದು 8
ದೊಡ್ಡವರೆಡೆಯಲಿ ಹುಡುಗರು ಸರಸವ ಮಾಡಬಾರ್ದು
ದುಡ್ಡಿನ ಜನಗಳನೆದುರಿಸಿ ಬಡವನು ನಿಲ್ಲಬಾರ್ದು
ಸಡ್ಡೆಯ ಮಾಡದೆ ಅಡ್ಡಿಗಳೆಲ್ಲವ ಸರ್ವರಿಂ
ದೊಡ್ಡವ ಶ್ರೀ ಕೃಷ್ಣವಿಠಲನ ಭಜನೆಯ ಬಿಡಬಾರ್ದು 9
****