ಪುಟ್ಟಿಸಿದ್ದೇನು ಕಾರಣವೋ ಸೃಷ್ಟಿಗೋಡೆಯಾ ಪ.
ಶ್ರೀಕೃಷ್ಣ ಮೂರುತಿವೊಂದಿಷ್ಟು ತಿಳಿಯದೋ
ನಿನ್ನ ಮಾಯಾ ಜೀಯಾ ಅ.ಪ.
ಆವಾವ ಸಾಧನವಾಗಲಿಲ್ಲಾ ಯನ್ನಿಂದ ಶ್ರೀದೇವಾ
ಎನ್ನ ಕರವ ಬಿಡುವುದುಚಿತವೇನು ಮಾಧವಾ
ನಿನ್ನ ಮನದಣಿಯ ನೋಡಾದೆ ಹಾಗಾದೆ 1
ಹರಿಮೂರ್ತಿ ನೋಡಲೊಲ್ಲಾದು ಯನ್ನಮನವು
ಪರಪುರುಷರ ನೋಡಿತು ಮನಸು
ಹೊಲೆಗೆಡಿಸಿತು ಪುರುಷೋತ್ತಮನ ಮರಿತಿತು 2
ಹರಕಥಾ ಶ್ರವಣ ಕೇಳದು ಎನ್ನ ಕರ್ಣಂಗಳು
ಪರವಾರ್ತೆಗೆ ಹೊತ್ತು ಸಾಲದು ಸರ್ವೋತ್ತಮನೆ
ನಿನ್ನ ಮರೆತೆನು ಉನ್ಮತ್ತಳಾದೆ 3
ಹರಿನಿರ್ಮಾಲ್ಯವ ಕೊಳ್ಳದು ಯನ್ನ ಮೂಗು
ಪರಪುರುಷರಾ ಮೈಗಂಧವಾ ಆಘ್ರಾಣಿಸುವುದು
ನಿನ್ನ ನಾಮ ಸ್ಮರಣೆಯನು ಮರೆತೆನು 4
ಹರಿಯಾತ್ರೆಯಾ ಮಾಡಲಿಲ್ಲ ಯನ್ನ ಕಾಲು
ಜಾರಸ್ತ್ರೀಯರ ಮನೆಮನೆ ತಿರುಗುವೆನು
ಈ ಪರಿ ನೀಯನ್ನ ಮರೆಯುವುದುಚಿತವೆ 5
ಎನ್ನ ಇಂದ್ರಿಯಗಳು ಈ ಪರಿವ್ಯರ್ಥವಾಯಿತು
ಸಾರ್ಥವಾಗಲಿಲ್ಲ ಪಾರ್ಥಸಾರಥಿ
ನಿನ್ನ ನೋಡಿ ಪವಿತ್ರಳಾಗಲಿಲ್ಲ
ಏಕಿನ್ನ ಈ ಪರಿಯ ಮರುಳು ಮಾಡುವಿದೇವಾ
ಧರೆಯೊಳಗೆನ್ನ ತಂದುದಕೆ ಬಂದಕಾರ್ಯವಾಗಲಿಲ್ಲ 6
ಆವಬಾಧೆಯು ನಾನರಿಯೆ ಪರಜಾತಿಯ ಆ ಮನಸು
ಪೋಗುವುದು ಕೋತಿಯಂದದಿ
ಕುಣಿಸುವರು ಇದು ರೀತಿಯೆ 7
ಭವಸಾಗರದೊಳು ಇದ್ದು ಸೊರಗಲಾರೆನೊ
ಘಾಸಿಗೊಳಿಸುವುದು ನಿನಗೆ ಧರ್ಮವೆ
ವಾಸುದೇವನೆ ನಿಮ್ಮ ನಾಮವನು ನೆನೆಯದೇ 8
ಇರುಳು ಹಗಲು ಹೀಗೆ ದುರುಳತನದಲಿ
ತಿರುಗಿದೆನು ಗುರು ಹಿರಿಯರಂಘ್ರಿಗೆ
ಶಿರವ ಬಾಗದೆ 9
ಎಷ್ಟು ಮೊರೆ ಹೊಕ್ಕರೇನು ಒಂದಿಷ್ಟು ದಯಪುಟ್ಟದು
ನಾನೀಗ ದ್ವೇಷಿಯೇನೋ ಶೇಷಶಯನನೆ
ನಮ್ಮ ಕಾಳೀಮರ್ಧನಕೃಷ್ಣನೆ 10
****