ಶ್ರೀ ವೇಣುಗೋಪಾಲಕೃಷ್ಣಮೂರ್ತೇ ಪ
ಕಾವುದೀತನ ನಿನ್ನ ದಾಸನೆಂದನವರತ ಅ.ಪ
ಕಾಯದಿಂದಲಿ ನಿನ್ನ ಚರಣಸೇವೆಯ ಮಾಡಿ
ತೋಯಜಾಂಬಕ ನಿನ್ನ ನಾಮ ವಾಚಿಸುತ
ಜೀಯ ನಿನ್ನಯ ಮೂರ್ತಿ ಮಾನಸದಿ ಧೇನಿಸುತ
ಈ ಉಪಾಸನೆಯನ್ನನವರತ ಕೊಡು ದೇವ 1
ಲೌಕಿಕದಲ್ಲಿದ್ದರು ಲೋಕೈಕನಾಥನೆ
ಏಕಾಂತದಲಿ ನಿನ್ನ ನೆನಪು ಒಂದಿರಲಿ
ಮಾಕಳತ್ರನೆ ನಿನ್ನ ಸಕಲಮಂಗಳವಿತ್ತು
ಲೋಕದೊಳು ನಿನ್ನ ಭಕುತರೊಳಿಡು ಇನ್ನು 2
ಪವನಾಂತರಾತ್ಮ ಶ್ರೀ ವೇಂಕಟೇಶಾತ್ಮಕ
ಶ್ರೀ ವೇಣುಗೋಪಾಲಕೃಷ್ಣಮೂರುತೇ
ಭಾವಶುದ್ಧನಮಾಡಿ ಶ್ರೀವರನ ದಾಸರ
ಸೇವೆಯನು ಕೊಟ್ಟು ಭವದುಃಖವನೆ ಹರಿಸೊ3
****