ಶ್ರೀ ಗುರುರಾಮವಿಠಲ ದಾಸರ ರಚನೆ
ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ
ಪ
ನಾಗಶಯನನಂಘ್ರಿ ನಳಿನ ನಂಬಿರುವಗೆ
ಅ.ಪ
ಬಂಧುಬಳಗವೆಲ್ಲ ಸಂದಣಿಯಾಗಿದ್ದರು
ಹಿಂದುಮುಂದಿಲ್ಲದೆ ತಾನೊಬ್ಬನಾದರು
1
ಹೊನ್ನು ಹೆಣ್ಣು ಮಣ್ಣು ಹೊಂದಿಕೊಂಡಿದ್ದರು
ಅನ್ನಕಿಲ್ಲದೆ ತಾ ನರಳುವಂತಾದರು
2
ಬೇಡದೆ ಸಕಲೈಶ್ವರ್ಯ ತಾನೆ ಬಂದರು
ಬೇಡಿದರೊ ಹೊಟ್ಟೆ ತುಂಬ ದೊರಕದಿದ್ದರು
3
ಯೋಗ್ಯನೆನ್ನುತ ಜನರು ಶ್ಲಾಘ್ಯವ ಮಾಡಿದರು
ಭಾಗ್ಯಹೀನನಿವನೆಂದು ಬೈಯ್ಯತಲಿದ್ದರು
4
ಕೊಟ್ಟಷ್ಟರಲ್ಲೆ ತೃಪ್ತಿಪಟ್ಟು ಶ್ರೀ ಗುರುರಾಮ-
ವಿಠ್ಠಲನ ಮನಮುಟ್ಟ ಭಜಿಸುವಗೆ 5
***