ಕಂಡು ಧನ್ಯಳಾದೆ ನಾ
ಪಾಂಡುರಂಗವಿಠಲನಾ ಪ.
ಕಂಡು ಧನ್ಯಳಾದೆ ಹರಿಯ
ಪುಂಡರೀಕ ಪದದಿ ಎನ್ನ
ಮಂಡೆ ಇಟ್ಟು ವಂದಿಸುತಲಿ
ಪುಂಡರೀಕ ವರದ ನಾ ಅ.
ದೂರದಿಂದ ಬಂದು ಹರಿಯ
ಸೇರಿವಂದಿಸುತಲಿ ಈಗ
ಹಾರಹಾಕಿ ನಮಿಸಿ ಮನೋ
ಹಾರ ನೋಡಿ ದಣಿದೆನಿಂದು 1
ಗುರುಗಳಂತರ್ಯಾಮಿ ಹರಿಯ
ಇರಿಸಿ ಎನ್ನ ಬಿಂಬ ಸಹಿತ
ಸ್ಮರಿಸಿ ಚಿಂತಿಸಿ ವಿಠಲನಲ್ಲಿ
ಕರುಣಮೂರ್ತಿ ಪಾಂಡುರಂಗನ 2
ಗುರುಪುರಂದರ ಸ್ತಂಭ ಕಂಡೆ
ವರದ ಚಂದ್ರಭಾಗ ತೀರದಿ
ಚರಣ ಇಟ್ಟಿಗೆಯಲಿ ಇಟ್ಟು
ಸಿರಿ ಗೋಪಾಲಕೃಷ್ಣವಿಠಲನ 3
****