Showing posts with label ಇಂದು ಎನಗೆ ನಿನ್ನ bheemesha krishna ankita suladi ಕೃಷ್ಣ ಪ್ರಾರ್ಥನಾ ಸುಳಾದಿ INDU ENAGE NINNA KRISHNA PRARTHANA SULADI. Show all posts
Showing posts with label ಇಂದು ಎನಗೆ ನಿನ್ನ bheemesha krishna ankita suladi ಕೃಷ್ಣ ಪ್ರಾರ್ಥನಾ ಸುಳಾದಿ INDU ENAGE NINNA KRISHNA PRARTHANA SULADI. Show all posts

Saturday, 10 April 2021

ಇಂದು ಎನಗೆ ನಿನ್ನ bheemesha krishna ankita suladi ಕೃಷ್ಣ ಪ್ರಾರ್ಥನಾ ಸುಳಾದಿ INDU ENAGE NINNA KRISHNA PRARTHANA SULADI

Audio by Mrs. Nandini Sripad


ಹರಪನಹಳ್ಳಿ ಭೀಮವ್ವನವರ ರಚನೆ

 ಶ್ರೀಕೃಷ್ಣ ಪ್ರಾರ್ಥನಾ ಸುಳಾದಿ 

 ರಾಗ ಕಾಪಿ 

 ಧ್ರುವತಾಳ 


ಇಂದು ಎನಗೆ ನಿನ್ನ ಸಂದರುಶನ ಸುಖ -

ವೊಂದು ತೋರೆನಗರವಿಂದನಯನ

ಮಂದಾಕಿನಿಯ ಪಡೆದ ಮುದ್ದು ಚರಣ

ಸುಂದರಾಂಗ ತೋರೆನಗೆ ಸುರೇಂದ್ರನಾಥ

ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ

ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ

ಇಂದಿರೆ ಕರಕಮಲದಿಂದ ಪೂಜಿತನಾದ

ಚಂದ್ರವದನ ನಿನ್ನ ಚೆಲುವ ಪಾದ

ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ -

ವಂದ್ಯ ನಿನಗೆ ಕೋಟಿ ನಮೋ ನಮೋ

ಎಂದು ಬೇಡುವೆ ದಯಾಸಿಂಧು ಎನಿಸಿದಾತ

ಕಂದನಂದದಿ ನೋಡಿ ಸಲಹೋ ಎನ್ನ

ಮಂದಬುದ್ಧಿಯ ಮಹಾಮದಡ ಪಾಮರ ಭವ -

ಬಂಧನದೊಳು ಸಿಲುಕಿ ನೊಂದೆನಯ್ಯ

ಸಂದೇಹ ಮಾಡದೆ ಸಲಹದಿದ್ದರೆ ನಿನ್ನ

ಹೊಂದಿ ಬಾಳುವುದೆಂತೊ ಮುಂದರಿಯೆ

ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ 

ತಂದು ನೀಡೆನಿಗೆ ಇಂದೀವರಾಕ್ಷ ॥ 1 ॥ 


 ಮಠ್ಯತಾಳ 


ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ

ಜಗದುದರನೆ ನಿನ್ನ ಜಾಣತನವ ಬಿಟ್ಟು

ಅಗಣಿತಗುಣಮಹಿಮ ಅಂತರಾತ್ಮಕ ದೇವ

ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ

ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ

ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ

ಚಿಗುರುದೋಷದ ಕುಡಿಯ ಚಿವುಟಿ ಹಾಕುತ ನಿನ್ನ

ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ

ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು

ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ 

ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ॥ 2 ॥ 


 ತ್ರಿವಿಡಿತಾಳ 

 (ವಚನ) 


ಸಕಲ ಸ್ನಾನವು ನೇಮ ಹೋಮ ಜಪಂಗಳು

ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು

ಸಕಲ ಪುರಾಣ ವೇದಾದಿಗ್ರಂಥಗಳು

ಸಕಲ ಕಾರ್ಯವು ಸರ್ವೇಷ್ಟ ಫಲಂಗಳು

ಸಕಲ ಸೌಭಾಗ್ಯ ಸಾಯುಜ್ಯ ಪದವಿಗಳು

ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ

ಸಕಲ ಪೊಂದಿದ್ದವು ಸಖನ ಸಾರಥಿ ಸಮದೃಷ್ಟಿಲಿ ನೋಡಲು

ಸಕಲ ಸಿದ್ಧಿಯು ಸರಿಯಾಗಿ ಕೈಗೂಡೋದು

ಶಕಟಸುರಾಂತಕ ಕಕುಲಾತಿ ಮಾಡದೆ

ಬಕನ್ವೈರಿ ಯೆನ್ನ ಭಾರವ ನೀ ವಹಿಸಲಿ ಬೇಕೊ

ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ

ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ

ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ 

ಭಕುತಿಜ್ಞಾನದಲಿಡೊ ಭಯಹಾರಿ ಎನ್ನ ॥ 3 ॥ 


 ಅಟ್ಟತಾಳ 


ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ -

ದಪರಾಧವೆಣಿಸದೆ ನೀ ಕರುಣದಲೆ ಸಾಂ -

ದೀಪಗೆ ಸುತರನಿಟ್ಟ ಪಯಾಂಬುಧಿವಾಸ

ಕೋಪದಿ ಬಯ್ದಾ ಶಿಶುಪಾಲಗೊಲಿದೆಯೊ

ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ

ಕಾಪಾಡೊ ಈ ಭವಕೂಪದೊಳಗೆ ಬಿದ್ದೆ

ನೀ ಪಿಡಿಕೈಯ ದಯಾಪರಮೂರುತಿ

ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ-

ಸೂಪರಣನಂತೆ ದೂರೇನೋ ಎನ್ನ ಸ -

ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ -

ತಾಪ ಬಡಿಸದಿರೆಂದಾಪನಿತು ಪೇಳ್ವೆ

ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ

ನಾ ಪೊಂದಿದೆನೊ ದೊರೆ ನೀ ಪೊರೆಯೆಂದು ॥ 4 ॥ 


 ಜತೆ 


ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ 

ಲೇಸು ನೀಡೆನಗೆ ಸದಾ ಸುಮಂಗಳವ ॥

*******