..
kruti by Nidaguruki Jeevubai
ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ
ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ
ಹಡಗಿಂದ ಬಂದಿತು ಉತ್ತತ್ತಿ ಹಣ್ಣು
ಬಡವರಿಗೆ ಬೇಕಾದ ಬಾಳೆಯ ಹಣ್ಣು
ಕೂತರೆ ಏಳದು ಕುಂಬಳದ್ದಲ್ಲ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1
ಮಕ್ಕಳು ಬಯಸುವ ಚಕ್ಕೋತ ಹಣ್ಣು
ಸಕ್ಕರೆ ಸವಿಯಾದ ಅನಾಸಿನ ಹಣ್ಣು
ಜೇನು ತುಪ್ಪದ ರುಚಿ ಹಲಸಿನ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2
ದಾಹವಡಗಿಸುವದು ದ್ರಾಕ್ಷಿಯ ಹಣ್ಣು
ದೊರೆಗಳು ತಿನ್ನುವ ದಾಳಿಂಬೆ ಹಣ್ಣು
ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3
ಅತಿಮಧುರವಾದ ಕಿತ್ತಲೆ ಹಣ್ಣು
ಯತಿಗಳಿಗಾನಂದ ಸೀತಾಫಲದ್ಹಣ್ಣು
ಅತಿರುಚಿಯಾದ ಅಂಜೂರದ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4
ಮಾನವಂತರು ತಿನ್ನುವ ಮಾವಿನ ಹಣ್ಣು
ಜ್ಞಾನಿಗಳಿಗೆ ರಾಮನಾಮದ ಹಣ್ಣು
ದೀನಜನರು ತಿಂಬ ಮೂಸುಂಬೆ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5
ಅಪರೂಪದಲಿ ಬೆಳೆದ ಮಾದಳದ್ಹಣ್ಣು
ಕಪಿಗಳು ತಿನ್ನುವ ಸೀಬೆಯ ಹಣ್ಣು
ತಪಸ್ವಿಗಳಾಹಾರ ಜಂಬುನೇರಳೆಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6
ಪರಿ ಪರಿ ಔಪಧಕೆ ಹೆರಳೆಯ ಹಣ್ಣು
ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು
ಪರಮ ರೂಪಿಯಾದ ಕರಬೂಜದ್ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7
ಬಡವರಿಗೂ ಈ ಹುಣಸೇ ಹಣ್ಣಿರಬೇಕು
ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು
ಬಲ್ಲಿದರಿದರ ರುಚಿ ಎಲ್ಲ ಜನರುಗಳು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8
ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ
ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ
ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9
ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು
ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು
ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10
ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ
ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ
ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
***