15 ದಶಕಗಳಷ್ಟು ಪ್ರಾಚೀನ , ಕೆಳದಿ ಪ್ರಾಂತ್ಯದ ಸಂಪ್ರದಾಯದ ಕೃತಿ- ಸಂಕ್ಷೇಪ ರಾಮಾಯಣ
ಶ್ರೀ ರಾಮನಾಮವ ನುಡಿ ಮನವೆ| ||ಪ||
ಸೋಮ ಮೌಳಿ ಸತಿಗೆ ಪೇಳ್ದ ರಾಮ
ರಾಮ ರಾಮ ಎಂಬುವ||ಅ.ಪ||
ದೇವದೇವನಾಗಿ ಮಹಿಗೆ|
ಸೇವಿಸುವರ ಪೊರೆಯುವುದಕೆ|
ಭೂವರಂಗೆ ದಶರಥಂಗೆ|
ಕುವರನೆನಿಸಿ ಮುದವನಿತ್ತ ||೧||
ಮೌನಿವರ‍್ಯಗಾದಿ ಸುತನ|
ಮುಖವ ಪೊರೆದು ದೈತ್ಯ ದಮನ|
ನೆನಿಸಿ ನಡೆಯಲಾಗ ಚರಣ|
ರಜದಿ ಶಿಲೆಯ ಪೆಣ್ಣಗೈದ||೨||
ಜನಕರಾಜಪುರಕೆ ನಡೆದು|
ಘನಮಹೇಶ ಧನುವ ಮುರಿದು|
ಜನಕಸುತೆಯ ಕರವ ಪಿಡಿದು|
ಮುನಿ ಪರಶುರಾಮನ ಗೆಲ್ದ ||೩||
ಜನಕನಾಜ್ಞೆಯಿಂದ ಸಾರಿ|
ವನಕೆ ಸೀತೆಯೊಡನೆ ಸೇರಿ|
ವಿನಯ ಸಂಪದವನ್ನೆ ತೋರಿ|
ಮುನಿಜನಂಗಳ ಪೊರೆದ ಪಾವನ ||೪||
ಗೋತ್ರದೊಳು ಪವಿತ್ರನೆಂದು|
ಸ್ತೋತ್ರಪಾತ್ರನಾಗಿ ಬಂದು|
ಚಿತ್ರಕೂಟದೊಳು ನಿಂದು|
ಭ್ರಾತೃಗಿತ್ತ ಪಾದುಕೆಯನು ||೫||
ಪಂಚವಟಿಯ ಸೇರಿ ಸುಖಿಯ|
ವಂಚಿಸಿದಳಾ ಕಾಮಮುಖಿಯ|
ಪೊಂಚ ದಂಡಿಸಿ ಶೂರ್ಪನಖಿಯ|
ಕಾಂಚನಾಂಗ ಮೃಗವ ಮೆಟ್ಟಿದ ||೬||
ನೀಲವೇಣಿ ಹರಣದಿಂದ|
ಗೋಳಿಡಲಾಜಟಾಯುವಿಂದ|
ಕೇಳಲಾಗ ಕಥೆಯ ಬಂದ|
ವಾಲಿಪುರಕೆ ವೀರನಾ ರಘು ||೭||
ಮಾಡಿ ವಾಲಿಯ ವಧೆಯ ಬೇಗ|
ಕೂಡಿದಾ ಸುಗ್ರೀವನಾಗ|
ರೂಢಿಸುತ್ತ ಕಪಿಗಳಾಗ|
ನೋಡಿ ವಾಯುಸುತನ ಮೆಚ್ಚಿದ ||೮||
ದಾಸಗಾಂಜನೇಯಗರುಹಿ|
ಭೂಸುತೆಯ ಬಳಿಗೆ ಕಳುಹಿ|
ಆ ಸಮುದ್ರವನೆ ನೆನಹಿ|
ಘಾಸಿಯಿಲ್ದೆ ಲಂಕೆಗೈದ ||೯||
ರಾವಣಾದಿಗಳನು ಸಂಹರಿಸಿ|
ಆ ವಿಭೀಷಣನಿಗೆ ಹರಸಿ|
ಪಾವನೇಯ ಸ್ವೀಕರಿಸಿ|
ಭಾವಿಸಿದನು ಭರತಭಕ್ತಿಯ ||೧೦||
ಕಿಂಕರಾಳಿಗಿತ್ತು ವರವ|
ಬಿಂಕದಿಂದ ಸಾರಿಪುರವ|
ಪಂಕಜಾಕ್ಷಿಯೊಡನೆ ಮೆರೆವೊ|
ವೆಂಕಟಾರ್ಯ ಬಿಡದೆ ಪಾಡುವ ||೧೧||
***