ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ ll ಪ ll
ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ ll 1 ll
ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟು
ಮಸ್ತಕದಲಿ ಪರವಸ್ತು ತೋರಿದ ಕೃಷ್ಣ ll 2 ll
ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟು
ಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ ll 3 ll
ನಾರೇರು ಬಿಚ್ಚಿಟ್ಟ ಸೀರೆಗಳನೆ ವೊಯ್ದು
ಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ ll 4 ll
ಅಂಗನೆಯರ ವ್ರತಭಂಗವ ಮಾಡಿದ
ರಂಗವಿಟ್ಠಲ ಭವಭಂಗವ ಪರಿಹರಿಸೊ ll 5 ll
https://drive.google.com/file/d/1DYB-4r_ObXDz5njVIZJvxrclRwugdun8/view?usp=drivesdk
ಹದಿನೈದನೆಯ ಶತಮಾನದಲ್ಲಿ ಭಾರತದಾದ್ಯಂತ ದ್ವೈತತತ್ವದ ತಳಹದಿಯ ಮೇಲೆ ಭಕ್ತಿಪಂಥವು ಪ್ರಾರಂಭವಾಯಿತು. ಇದೇ ತತ್ವವನ್ನು ಪಸರಿಸುವ ಕಾರ್ಯ ಕನ್ನಡ ನಾಡಿನಲ್ಲೂ ಪ್ರಾರಂಭವಾಗಿ ಧರ್ಮವನ್ನು ಮಾನವೀಯ ನೆಲೆಗೆ ತರುವುದರ ಮೂಲಕ, ವೈಷ್ಣವ ಸಾಹಿತ್ಯವು ಜನಸಾಮಾನ್ಯರ ಜೀವನದೊಂದಿಗೆ ಬೆಸೆದುಕೊಂಡಿದೆ. ಸಾಹಿತ್ಯ, ಸಂಗೀತ ಮತ್ತು ಆಧ್ಯಾತ್ಮವನ್ನೊಳಗೊಂಡಂತೆ ಕೃತಿಗಳನ್ನು, ಕೀರ್ತನೆಗಳನ್ನು ಹಾಗೂ ಉಗಾಭೋಗಗಳನ್ನು ರಚಿಸಿದ್ದು ಹರಿದಾಸ ಸಾಹಿತ್ಯದ ವೈಶಿಷ್ಟ್ಯವಾಗಿದೆ. ಆದಿಯಲ್ಲಿ ಶ್ರೀಪಾದರಾಜರು ಕೀರ್ತನೆಯನ್ನು ರಚಿಸುವುದರ ಮೂಲಕ, ಹರಿದಾಸಸಾಹಿತ್ಯಕ್ಕೆ ಭವ್ಯ ಪರಂಪರೆಯನ್ನು ನಿರ್ಮಿಸಿಕೊಟ್ಟರು. ಕೀರ್ತನೆ, ಸೂಳಾದಿ, ಉಗಾಭೋಗ, ವೃತ್ತನಾಮ ಹಾಗೂ ದಂಡಕಾದಿಗಳನ್ನು ವೈವಿಧ್ಯವಾಗಿ ರಚಿಸಿ, ಹರಿದಾಸ ತತ್ವದ 0ಪರಿಮಳವನ್ನು ಸಾರಿದರು. ರಂಗವಿಟ್ಠಲ ಎಂಬುದು ಇವರ ಅಂಕಿತನಾಮವಾಗಿದ್ದು, ಇವರ ಮಾರ್ಗವನ್ನು ವ್ಯಾಸರಾಯರು ಹಾಗೂ ವಾದಿರಾಜರ ಮೂಲಕ ಮುಂದುವರೆಯಿತು.
ಯತಿಶ್ರೇಷ್ಠರುಗಳು ತಾವು ಮಾಡುತ್ತಿದ್ದ ವಿದ್ಯುಕ್ತ ಪೂಜೆಗಳನ್ನು ಮುಗಿಸಿದ ಬಳಿಕ ಶ್ರೀಹರಿಯ ಬಳಿ ತಮ್ಮ ಭಕ್ತಿಯನ್ನು ನಿವೇದನೆ ಮಾಡಿಕೊಳ್ಳಲು ಕೀರ್ತನೆಗಳನ್ನು, ಉಗಾಭೋಗಗಳನ್ನು ರಚಿಸಿಕೊಂಡು ಹಾಡುತ್ತಾ, ಚಿಟಿಕೆ, ತಾಳ, ತಂಬೂರಿಗಳನ್ನು ಬಾರಿಸಿಕೊಂಡು, ಮೈಮರೆತು ಕುಣಿಯುವ ರೂಢಿ ಇಲ್ಲಿಂದಲೇ ಪ್ರಾರಂಭವಾಯಿತೆಂದರೆ ತಪ್ಪಾಗಲಾರದು. ವೈಷ್ಣವ ದೇವಾಲಯಗಳಲ್ಲಿ ದೇವರ ಪೂಜೆಯಾದ ನಂತರ ಕೀರ್ತನೆಗಳನ್ನು ಹಾಡುವಿಕೆ ಪೂಜಾವಿಧಾನದ ಭಾಗವಾಗಿ ಈಗಲೂ ಮುಂದುವರೆದಿದೆ. ಶ್ರೀಪಾದರಾಜರ ಕೀರ್ತನೆಗಳನ್ನು, ಆತ್ಮಶೋಧನೆ- ದೈವಭಕ್ತಿ, ದ್ವೈತತತ್ವ ಪ್ರತಿಪಾದನೆ ಹಾಗೂ ನೀತಿಬೋಧಕ ಕಾವ್ಯವೆಂದು ವಿಂಗಡಿಸಬಹುದು. ಶ್ರೀಪಾದರಾಜರು ಕನ್ನಡ ಕೀರ್ತನ ಸಾಹಿತ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿಕೊಟ್ಟ ಹಾಗೂ ಹರಿದಾಸ ಸಾಹಿತ್ಯವನ್ನು ಒಂದು ಪ್ರಕಾರವನ್ನಾಗಿ ರೂಪಿಸಿಕೊಟ್ಟ ಮಹಾನ್ ಶಕ್ತಿಯಾಗಿದ್ದಾರೆ.
ಭಕ್ತಿಯೆಂಬುದು ಭಾವುಕ ಸ್ಥಿತಿಯಾಗಿದ್ದು, ಅದು ಯೋಗ, ವೈರಾಗ್ಯ, ಜ್ಞಾನದ ಮೂಲಕ ದೇವರೊಡನೆ ನಿಕಟ ಸಂಬಂಧ ಪಡೆಯಲು ಹಾಗೂ ಪರವನ್ನು ಗಳಿಸಲು ಪೂರಕವಾದ ಪ್ರಕ್ರಿಯೆಯಾಗಿದೆ. ಸ್ವಾರ್ಥವಿಲ್ಲದ ಶುದ್ಧ ಭಕ್ತಿಯಿಂದ ನಮ್ಮಲ್ಲಾ ಇಂದ್ರಿಯಗಳನ್ನು ಕೇಂದ್ರೀಕರಿಸಿಕೊಂಡು ಸೇವೆ ಸಲ್ಲಿಸುವುದರ ಮೂಲಕ ಭಗವಂತನೊಡನೆ ಐಕ್ಯನಾಗುವಿಕೆಯು ಭಕ್ತಿಯ ಪರಮೋಚ್ಚ ಗುರಿಯಾಗಿದೆ. ಇದನ್ನೇ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸುವಿಕೆ ಎನ್ನಲಾಗುತ್ತದೆ. ಶ್ರವಣ ಮತ್ತು ಕೀರ್ತನದ ಮೂಲಕ ಭಗವಂತನ ಸೇವೆಯನ್ನು ಸಲ್ಲಿಸಬಹುದು. ಭಗವಂತನನ್ನು ಕುರಿತು ಪ್ರವಚನ ಮಾಡುವಿಕೆ ಮತ್ತು ಕೇಳುವಿಕೆ, ಕೀರ್ತನೆ ಹಾಡುವಿಕೆ ಹಾಗೂ ಕೇಳಿಸಿಕೊಳ್ಳುವಿಕೆ, ಕೀರ್ತನೆ ರಚಿಸುವ ಮತ್ತು ವಾಚನ ಮಾಡುವಿಕೆಯು ಭಗವದಾರಾಧನೆಯ ಭಾಗವಾಗಿತ್ತು. ಕೃತಿ ಅಥವಾ ಕೀರ್ತನೆ ರಚನೆಯು ಭಕ್ತನ ಆಸಕ್ತಿ, ಸೃಜನಶೀಲತೆ ಹಾಗೂ ಜ್ಞಾನವನ್ನವಲಂಬಿಸಿರುತ್ತದೆ. ಶ್ರೀಮನ್ನಾರಾಯಣನ ಅಥವಾ ಹರಿಯ ಬಗೆಗಿನ ಯಾವುದೇ ವಿಷಯಗಳನ್ನು, ಪವಾಡಗಳನ್ನು ಹಾಗೂ ಭಕ್ತರೊಂದಿಗಿನ ಸಂಬಂಧಗಳನ್ನು ಕುರಿತು ಪ್ರವಚನ ಮತ್ತು ಹಾಡುಗಳ ಮೂಲಕ ವರ್ಣಿಸಲಾಗುತ್ತದೆ. ಈ ರೀತಿಯ ಕೀರ್ತನೆಗಳಲ್ಲಿ 'ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ' ಕೀರ್ತನೆಯೂ ಒಂದಾಗಿದೆ.
ಭಕ್ತರನ್ನು ರಕ್ಷಿಸುವುದೆಂದರೆ ಶ್ರೀಕೃಷ್ಣನಿಗೆ ವಿಶೇಷ ಆಸಕ್ತಿ. ಆದರೆ, ಭಕ್ತರು ಭಗವಂತನನ್ನು ಸ್ಮರಿಸಬೇಕಷ್ಠೆ. ಅವನ ಮೊರೆ ಹೋದ ಕೂಡಲೇ ಅವರ ಕಷ್ಟಗಳನ್ನು ಪರಿಹರಿಸುತ್ತಾನೆ. ಅತಿಯಾದ ಭಕ್ತಿ, ದೇವರ ಜೊತೆಗಿನ ಆತ್ಮೀಯತೆ ಅಥವಾ ಸಲುಗೆಯಿದ್ದಾಗ ಏಕವಚನ ಬಳಸುವಿಕೆಯು ಹಿಂದಿನಿಂದಲೂ ಕಂಡುಬಂದಿದೆ. ಅಥವಾ ಅದೊಂದು ಮಹತ್ವವಾದ ಅಂಶವೇ ಆಗುವುದಿಲ್ಲ. ಈ ಕಾರಣದಿಂದಾಗಿಯೇ ಅನೇಕ ಭಕ್ತರು ತಮ್ಮ ಕೀರ್ತನೆಯ ರಚನೆಯಲ್ಲಿ 'ಬಾ' 'ಬಾರೊ', ತೋರೋ, ನೀಡೋ ಕರುಣಿಸೋ, ಮುಂತಾದ ಸಂಬೋಧನೆಯನ್ನು ಮಾಡಿರುತ್ತಾರೆ. ಶ್ರೀಪಾದರಾಜರ 'ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ' ಕೀರ್ತನೆಯಲ್ಲೂ ಹಾಗೆಯೇ ಸಂಬೋಧಿಸಿದ್ದು. ಈ ಕೀರ್ತನೆಯಲ್ಲಿ ವರ್ಣಿತವಾಗಿರುವ ಶ್ರೀಮನ್ನಾರಾಯಣನು ಬಾಲಕೃಷ್ಣನಾಗಿದ್ದು, ಬಾಲ್ಯದ ಲೀಲೆಗಳು, ಗೋವುಗಳನ್ನು ಕಾಯುವಿಕೆ, ಗೋಪಿಕೆಯರ ವಸ್ತ್ರಾಪಹರಣ ಹಾಗೂ ತಾಯಿ ಯಶೋದೆಗೆ ಬ್ರಹ್ಮಾಂಡವನ್ನು ತೋರಿದ ಸಂದರ್ಭಗಳ ಪ್ರಸ್ತಾಪಗಳಿವೆ. ಇವುಗಳೆಲ್ಲವೂ ಶ್ರೀಕೃಷ್ಣ ರಾಜಕಾರಣಿ ಅಥವಾ ಮುತ್ಸದ್ಧಿಯಾಗುವ ಮೊದಲಿನ ಚಿತ್ರಣಗಳಾಗಿದ್ದು, ಎಲ್ಲರನ್ನು ಆಕರ್ಷಿಸುತ್ತವೆ. ಪವಾಡಗಳು ಅಥವಾ ದೈವೀಶಕ್ತಿಗಳು ಶ್ರೀಕೃಷ್ಣನ ಜೀವನದಲ್ಲಿ ನಿರಂತರವಾಗಿದ್ದು ಹುಟ್ಟಿಗೆ ಮೊದಲಿನಿಂದಲೂ ಇದು ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಈ ಕೀರ್ತನೆಯ ಆರಂಭದಲ್ಲಿ "ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿ, ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ" ಎಂದು ಬಾಲ್ಯದಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾಗಿದ್ದ ಕಾರ್ಯವನ್ನು ಶ್ರೀಪಾದರಾಜರು ವರ್ಣಿಸಿದ್ದಾರೆ. ಶ್ರೀಕೃಷ್ಣನ ಬಾಲ್ಯದಲ್ಲಿ ತನ್ನ ಗೋಪಾಲಕ ಗೆಳೆಯರ ಜೊತೆ ಸೇರಿಕೊಂಡು ಕದ್ದು ಮೊಸರು, ಬೆಣ್ಣೆ ಸವಿಯುತ್ತಿದ್ದುದರ ಪ್ರಸ್ತಾಪವಿದ್ದು, ಇದನ್ನು ಕೃಷ್ಣಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ. ಇದೂ ಶ್ರೀಕೃಷ್ಣನ ದೈವಲೀಲೆಗಳಲ್ಲಿ ಒಂದಾಗಿದ್ದು, ಅದನ್ನು ತೆಗೆಳದೆ ತುಂಟಾಟವೆಂದು ಮೆಚ್ಚಿಕೊಳ್ಳಲಾಗಿದೆ. ಚಿಕ್ಕಮಕ್ಕಳು ಮಾಡುವ ಪ್ರತಿಯೊಂದು ಕೆಲಸವೂ ದೊಡ್ಡವರಿಗೆ ಇಷ್ಟವೇ ಆಗುತ್ತದೆಯಾದ್ದರಿಂದ ಈ ಪ್ರಸಂಗವೂ ಮತ್ತೆ ಮತ್ತೆ ನೆನಪಾಗುತ್ತದೆ. ಈ ಕಾರ್ಯದಲ್ಲಿ ಇತರ ಗೋಪಾಲಕರೂ ಸೇರಿದ್ದಿರಬಹುದಾದರೂ ಕೃಷ್ಣನೇ ಈ ಗುಂಪಿನ ನಾಯಕ. ಅನೇಕ ಸಂದರ್ಭಗಳಲ್ಲಿ ಏಕಾಂಗಿಯಾಗಿ ಅಥವಾ ಗೋಪಬಾಲಕರು ಇದ್ದರೂ ಅವರ ಪ್ರಯತ್ನಕ್ಕಿಂತಲೂ ಕೃಷ್ಣನದ್ದೇ ಮುಂದಾಳತ್ವ. ಮನೆಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತ ಹಾಲು, ಮೊಸರು, ಬೆಣ್ಣೆ ಮುಂತಾದುವನ್ನು ಎತ್ತರದ ನೆಲುವಿನ ಮೇಲಿಡುತ್ತಿದ್ದರು. ಈ ನೆಲವುಗಳು ಹಗ್ಗದಿಂದ ಮಾಡಿ ಬುಟ್ಟಿಯಾಕಾರವನ್ನು ಹೊಂದಿದ್ದಿತು.
ಇವುಗಳನ್ನು ಗೋಡೆಗೆ ಅಥವಾ ಮನೆಯ ಛಾವಣಿಗೆ ತೂಗುಹಾಕುತ್ತಿದ್ದರು. ಇದರಲ್ಲಿ ಒಂದರ ಮೇಲೊಂದರಂತೆ ಹಾಲು, ಮೊಸರು, ಬೆಣ್ಣೆಯ ಗಡಿಗೆಗಳನ್ನು ಇಟ್ಟು ಮುಚ್ಚುತ್ತಿದ್ದರು. ಬೆಕ್ಕು, ನಾಯಿ ಅಥವಾ ಮಕ್ಕಳುಗಳು ಇದನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಮಕ್ಕಳಿಗೆ ಎಟುಕದಷ್ಟು ಎತ್ತರದಲ್ಲಿರುತ್ತಿದ್ದುದರಿಂದ ಮಡಕೆಗಳನ್ನು ರಕ್ಷಿಸಿಕೊಳ್ಳಬಹುದಾಗಿದ್ದಿತು. ಆದರೆ, ಶ್ರೀಕೃಷ್ಣನಿಗೆ ಸಿಗದಂತೆ ಮುಚ್ಚಿಡಲು ಸಾಧ್ಯವೇ ? ಭಗವಂತನು ಸರ್ವಾಂತರ್ಯಾಮಿಯಲ್ಲವೇ ? ಮನೆಯ ಹೆಂಗಸರು ಹೊರಗಿರುವಾಗ ಅಥವಾ ನೀರು ತರಲು ಹೋದ ಸಂದರ್ಭವನ್ನೆ ಕಾದುಕೊಂಡಿರುತ್ತಿದ್ದ ಗೋಪಾಲಕೃಷ್ಣ. ಯಾರೂ ಅಡುಗೆ ಮನೆಯಲ್ಲಿ ಇಲ್ಲದ್ದನ್ನು ನೋಡಿ, ಬೆಣ್ಣೆಯನ್ನು ಕದ್ದು ಮೆಲ್ಲುವುದೆಂದರೆ ಕೃಷ್ಣನಿಗೆ ಎಲ್ಲಿಲ್ಲದ ಪ್ರಾಣ. ಮೊಸರಿನ ಗಡಿಗೆ ಎತ್ತರದ ನಿಲುವಿನಲ್ಲಿರುತ್ತಿದ್ದುದರಿಂದ, ಅದನ್ನು ಇಳಿಸಿಕೊಳ್ಳಲು ತನ್ನದೇ ಆದ ಮಾರ್ಗ ಕಂಡುಕೊಂಡಿದ್ದ. ಗೋಪಾಲಕರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ಹೆಗಲಿನ ಮೇಲೇರಿ ಗಡಿಗೆಗಳನ್ನು ಇಳಿಸಿಕೊಂಡು ತನಗೆ ಬೇಕಾದಷ್ಟು ಬೆಣ್ಣೆ ತಿಂದು ಉಳಿದುದನ್ನು ತನ್ನ ಗೆಳೆಯರಿಗೆ ಹಾಗೂ ಗೋಕುಲದಲ್ಲಿದ್ದ ಕೋತಿಗಳಿಗೆ ನೀಡುತ್ತಿದ್ದ. ಕೆಲವೊಮ್ಮೆ ಅವನೊಬ್ಬನೇ ತಿನ್ನುತ್ತಿದ್ದ. ಗಡಿಗೆಯನ್ನು ಇಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಮಡಕೆಯ ರಂಧ್ರ ಮಾಡಿ ಅಲ್ಲಿಂದ ಸೋರುತ್ತಿದ್ದ ಮೊಸರಿಗೆ ಬಾಯಿ ಒಡ್ಡುವುದರ ಮೂಲಕ ಮೊಸರು-ಬೆಣ್ಣೆ ಸವಿಯುತ್ತಿದ್ದ. ಇದು ಆಗ್ಗಿಂದಾಗ್ಗೆ ನಡೆಯುತ್ತಿದ್ದ ಘಟನೆಯಾಗಿದ್ದಿತು.
ಅನೇಕ ಬಾರಿ ಸುತ್ತಮುತ್ತಲಿನ ಹೆಂಗಸರು ಕೋಪಿಸಿಕೊಂಡು ಯಶೋದೆಗೆ ದೂರು ನೀಡಿದ್ದೂ ಉಂಟು. ಆದರೆ ಈ ಕೋಪವೆಲ್ಲಾ ಕೆಲ ಗಳಿಗೆಯಷ್ಟೆ. ಶ್ರೀಕೃಷ್ಣನ ಮಂದಸ್ಮಿತ ಮುಖವನ್ನು ನೋಡಿದ ಕೂಡಲೇ ಆ ಹೆಂಗಸರ ಕೋಪವೆಲ್ಲಾ ಇಳಿದುಹೋಗುತ್ತಿತ್ತು. ಒಮ್ಮೆ ಎಲ್ಲರ ಮನೆಯಲ್ಲೂ ಒಟ್ಟಿಗೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಬಾಲಕೃಷ್ಣನನ್ನು ತಪ್ಪಿಸಿಕೊಂಡು ಹೋಗದಂತೆ ಹಿಡಿದು ಎತ್ತಿ ತಮ್ಮ ಸೊಂಟದ ಮೇಲೆ ಕೂಡಿಸಿಕೊಂಡು ಯಶೋದೆಯ ಬಳಿಗೆ ಕರೆತಂದರು. ಕೃಷ್ಣನನ್ನು ಎತ್ತಿಕೊಂಡು ಬಂದ ಎಲ್ಲರಿಗೂ ಆಶ್ಚರ್ಯ. ಏಕೆಂದರೆ ಎಲ್ಲರ ಮನೆಯಲ್ಲೂ ಏಕಕಾಲದಲ್ಲಿ ಕೃಷ್ಣ ಕಳ್ಳತನ ಮಾಡಿದ್ದ. ಎಲ್ಲರ ಮನೆಯಲ್ಲಿಯೂ ಒಬ್ಬೊಬ್ಬ ಬಾಲಕೃಷ್ಣ ಪ್ರತ್ಯಕ್ಷನಾಗಿದ್ದ. ಆದರೆ, ಯಶೋದೆಯ ಮನೆಗೆ ಬಂದು ನೋಡುತ್ತಾರೆ. ಅವರ ಕಂಕುಳಲ್ಲಿದ್ದ ಅನೇಕ ಬಾಲಕೃಷ್ಣರು ಮಾಯವಾಗಿ, ಎಲ್ಲರಿಗೂ ಆಶ್ಚರ್ಯವಾಗಿ, ಯಶೋದೆಗೆ ಏನನ್ನೂ ಹೇಳದೆ ಹಿಂತಿರುಗಿದರು. ಎಲ್ಲ ಹೆಂಗಸರು ತನ್ನ ಮಗನ ಮೇಲೆ ದೂರು ನೀಡುತ್ತಿದ್ದುದರಿಂದ ಯಶೋದೆಗೂ ಒಮ್ಮೊಮ್ಮೆ ಹುಸಿಮುನಿಸು ಬರುತ್ತಿತ್ತು.
ಕೃಷ್ಣನು ಕಳ್ಳತನ ಮಾಡಲು ಮನೆಯನ್ನು ಪ್ರವೇಶಿಸುತ್ತಿದ್ದುದೂ ಸಹ ವಿಶೇಷವಾಗಿತ್ತು. 'ಗುಲ್ಲು ಮಾಡದೆ' ಕಾಲ್ಬೆರಳಿನ ಮೇಲೆ ನಡೆದುಕೊಂಡು ಹೋಗಿ ಮನೆಯಿಂದ ಹೊರಬರುವವರೆಗೂ ಶಬ್ದ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಬಾಗಿಲು ತೆರೆಯಬೇಕಾಗಿದ್ದಿತು; ಇಲ್ಲವೇ ಕಿಟಕಿಯ ಮೂಲಕ ಇಳಿಯಬೇಕಾಗಿತ್ತು. ಇವೆರಡೂ ಸಾಧ್ಯವಾಗದಿದ್ದಾಗ, ಛಾವಣಿ ಹತ್ತಿ ಮನೆಯ ಹೆಂಚನ್ನು ಪಕ್ಕಕ್ಕೆ ಸರಿಸಿ ಮನೆಯೊಳಗೆ ಇಳಿಯಬೇಕಾಗುತ್ತಿತ್ತು. ಇಷ್ಟೆಲ್ಲಾ ಮಾಡಿದರೂ ಸ್ವಲ್ಪವೂ ಗದ್ದಲವಾಗದಂತೆ ಮಾಡುತ್ತಿದ್ದನು. ಇದು ಬಾಲಕೃಷ್ಣನ ವೈಶಿಷ್ಟ್ಯವಾಗಿತ್ತೆಂದು ಶ್ರೀಪಾದರಾಜರು ಸ್ಮರಿಸುತ್ತಾರೆ. ಶ್ರೀಕೃಷ್ಣ ಅವತಾರ ಪುರುಷನಾದರೂ ಸಾಮಾನ್ಯ ಮನುಷ್ಯರಂತೆಯೇ ಜೀವನ ಸವೆಸಿರುವುದನ್ನು ಇಲ್ಲಿ ಕಾಣಬಹುದು.
ಕನಕದಾಸರ 'ಹರಿಭಕ್ತಿಸಾರ' ಕೃತಿಯಲ್ಲಿ ಶ್ರೀಕೃಷ್ಣನ ಲೀಲೆಗಳ ಬಗ್ಗೆ ಪ್ರಸ್ತಾಪಿಸುತ್ತಾ, "ಸಾಗರನ ಮಗಳರಿಯದಂತೆ ಸರಾಗದಲಿ ಸಂಚರಿಸುತಿಹ ವುದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ, ಭಾಗವತರಾದವರ ಸಲಹುವವನಾಗಿ ಸಂಚರಿಸುವುದು ಈ ಭವಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ" ಎಂದು ಭವಸಾಗರದಲ್ಲಿ ಮುಳುಗಿಸಬೇಡ ಎಂದು ಪ್ರಾರ್ಥಿಸಿರುವುದನ್ನೇ ಶ್ರೀಪಾದರಾಜರು ಶ್ರೀಕೃಷ್ಣನ ಲೀಲೆಯನ್ನು ಸ್ಮರಿಸಿದ್ದಾರೆ. ಗೋಪಿಕೆಯರ ವಿಷಯದಲ್ಲಿಯೂ ಅದನ್ನೇ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.
ಬಾಲ್ಯದಲ್ಲಿದ್ದಾಗ ಶ್ರೀಕೃಷ್ಣ ಗೋಕುಲದಲ್ಲಿದ್ದ ಎಲ್ಲಾ ಮಕ್ಕಳಂತೆಯೇ ಬೆಳೆಯುತ್ತಿದ್ದ. "ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟು ಮಸ್ತಕದಲಿ ಪರವಸ್ತು ತೋರಿದ ಕೃಷ್ಣ, ಮುಜ್ಜಗವನೆಲ್ಲ ಬೊಜ್ಜೆಯೊಳಿಟ್ಟು ಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ" ಸಾಮಾನ್ಯ ಬಾಲಕನಾಗಿಯೇ ಬೆಳೆಯುತ್ತಿದ್ದ. ಇತರ ಮಕ್ಕಳಂತೆ ಕಂಡು ಬರುತ್ತಿದ್ದನಾದರೂ, ಅವತಾರ ಪುರುಷನಾದ್ದರಿಂದ ವಿಶೇಷವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಇಡೀ ಬ್ರಹ್ಮಾಂಡವನ್ನೇ ತನ್ನ ದೇಹದಲ್ಲಿ ಅಡಗಿಸಿಕೊಂಡಿದ್ದನೆಂಬುದು ಎಲ್ಲರಂತೆ ಶ್ರೀಪಾದರಾಜರೂ ನಂಬಿದ್ದರು. ಯಶೋದೆಯು ಶ್ರೀಕೃಷ್ಣನ ಹಣೆಯ ಮೇಲೆ ಕಸ್ತೂರಿ ತಿಲಕವನ್ನು ಇಡುತ್ತಾ ಅಲಂಕರಿಸುತ್ತಿದ್ದಳು. ಕೃಷ್ಣನ ಮುಖದಿಂದ ಹೊಮ್ಮುತ್ತಿದ್ದ ಕಳೆಯು ಎಲ್ಲರನ್ನೂ ಆಕರ್ಷಿಸುತ್ತಿತ್ತು. ತಾಯಿ ಯಶೋದೆಗೆ ತನ್ನ ಮಗನನ್ನು ನೋಡುವುದೇ ಒಂದು ಆನಂದ. ಮಗನು ಬೆಣ್ಣೆ ಕದಿಯುವನೆಂದು ಅಥವಾ ಮಣ್ಣು ತಿನ್ನುವನೆಂದು ಅವರಿವರು ಚಾಡಿ ಹೇಳಿದಾಗ ಯಶೋದೆಗೆ ಬೇಸರವಾಗುತ್ತಿತ್ತು.
ಒಮ್ಮೆ ಕೃಷ್ಣನು ಮಣ್ಣು ತಿಂದನೆಂದು ಬಲರಾಮನು ಚಾಡಿ ಹೇಳಿದಾಗ, ಕೃಷ್ಣನು ಅಣ್ಣ ಸುಳ್ಳು ಹೇಳುತ್ತಿದ್ದಾನೆ ಎಂದು ಹೇಳಿದ. ಆದರೆ ಬಾಯಿ ತೆಗೆಯುವಂತೆ ಹೇಳಿ ಬಾಯನ್ನು ತೆಗೆಸಿ ನೋಡಿದರೆ, ಯಶೋದೆಗೆ ಇಡೀ ಬ್ರಹ್ಮಾಂಡವನ್ನೇ ತೋರಿಸಿದ. ಆಕಾಶ, ದಿಕ್ಕುಗಳು, ಸೂರ್ಯ-ಚಂದ್ರ, ಗ್ರಹ-ನಕ್ಷತ್ರಗಳು, ನದಿ, ಬೆಟ್ಟ, ಮರಗಳು, ಮಾನವರು, ದೇವತೆಗಳು ಎಲ್ಲವೂ ಅಲ್ಲಿಯೇ ಕಾಣುತ್ತಿವೆ. ಚಿತ್ರವಿಚಿತ್ರವಾದ ಜಗತ್ತಿನ ಮಧ್ಯದಲ್ಲಿ ಗೋಕುಲ, ತನ್ನ ಮನೆ ಬಾಯ್ದೆರೆದುಕೊಂಡು ನಿಂತಿರುವ ಕೃಷ್ಣ ಎಲ್ಲವೂ ಕಾಣುತ್ತಿದೆ. ಯಶೋದೆಯು ತನ್ನ ಕಣ್ಣನ್ನು ನಂಬದಾದಳು. ಆಕೆಗೆ ಅದು ಕನಸೋ-ನನಸೋ ಅಥವಾ ಮಾಯೆಯೋ ಒಂದೂ ಅರ್ಥವಾಗಲಿಲ್ಲ.. ಈ ಮಗವು ಸಾಕ್ಷಾತ್ ದೈವ ಸ್ವರೂಪಿ ಎಂದುಕೊಂಡ ಯಶೋದೆಯಲ್ಲಿದ್ದ ಅಹಂಕಾರ ಅಳಿದು, ತನ್ನನ್ನು ಕಾಪಾಡು ಎಂದು ತನ್ನಿಂದ ತಾನೇ ಉಚ್ಚರಿಸಿದಳು. ಆ ಕೂಡಲೇ ಕೃಷ್ಣನು, 'ಅಮ್ಮ ನಾನು ಆಡುವುದಕ್ಕೆ ಹೋಗುತ್ತೇನಮ್ಮಾ' ಎಂದು ಹೊರಟ ಕೂಡಲೇ ಯಶೋದೆ ಮತ್ತೆ ವಾಸ್ತವಕ್ಕೆ ಹಿಂದಿರುಗಿದಳು. ಯಶೋದೆಗೆ ಇದನ್ನು ನೋಡಿ ಬೆರಗು ಮತ್ತು ಸಂತೋಷವೂ ಆಗಿ, ಮಗನ ಮೇಲಿನ ಮಮತೆ ಮತ್ತಷ್ಟು ಹೆಚ್ಚಾಯಿತು. ಇಡೀ ಬ್ರಹ್ಮಾಂಡವನ್ನೇ ತನ್ನಲ್ಲಿ ಅಡಗಿಸಿಕೊಂಡಿದ್ದ ಶ್ರೀಕೃಷ್ಣ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ಎಡವುತ್ತಾ ಓಡಾಡುತ್ತಿದ್ದ.
ಶ್ರೀಕೃಷ್ಣ ಒಂದು ಬಾರಿ ಹಾಲು ಕುಡಿಯುತ್ತಿದ್ದಾಗ, ಅವನ ಬಾಯಿಯನ್ನು ನೋಡಿದಾಗ, ಇಡೀ ಬ್ರಹ್ಮಾಂಡವೇ ಕಾಣಿಸಿದ್ದು ಯಶೋದೆಗೆ ಆಶ್ಚರ್ಯ ತರುತ್ತದೆ. ಸಾಮಾನ್ಯ ಮಕ್ಕಳಂತೆಯೇ ಇರುತ್ತಿದ್ದನಾದರೂ, ಅವನ ಅಸಾಮಾನ್ಯ ಶಕ್ತಿಯನ್ನು ನೋಡಿದಾಗ ಯಶೋದೆಗೆ ಗೌರವವೂ ಬರುತ್ತಿತ್ತು.. ಇಡೀ ಮೂರು ಲೋಕವನ್ನು ತನ್ನ ಒಡಲಿನಲ್ಲಿಯೇ ಅಡಗಿಸಿಕೊಂಡಿದ್ದರೂ, ಅದನ್ನು ಎಲ್ಲಿಯೂ ತೋರಿಸಿಕೊಳ್ಳದೆ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದ ಕೃಷ್ಣನ ನಡಿಗೆಯನ್ನು ನೋಡುವುದು ಮುದವನ್ನು ನೀಡುತ್ತಿತ್ತು.. ಇದನ್ನೇ ಶ್ರೀಪಾದರಾಜರು ಸ್ಮರಿಸಿಕೊಂಡು ಅದೇ ರೀತಿ ತಮ್ಮ ಮನೆಗೂ ಪುಟ್ಟ ಪುಟ್ಟ ಹೆಜ್ಜೆಗಳನ್ನಿರಿಸುತ್ತಾ ಬರಬೇಕೆಂದು ಬೇಡುತ್ತಾರೆ. ಇಂದಿಗೂ ಕೆಲವು ಆಚರಣೆಗಳ ಸಂದರ್ಭದಲ್ಲಿ ಪುಟ್ಟ ಹೆಜ್ಜೆಗಳ ಚಿತ್ತಾರವನ್ನು ಮನೆಯ ಬಾಗಿಲಿನಿಂದ ದೇವರ ಮನೆಯವರೆಗೂ ಸಾಂಕೇತಿಕವಾಗಿ ಹಾಕುವುದರ ಮೂಲಕ ಇಲ್ಲಿ ಪ್ರಸ್ತಾಪವಾಗಿರುವ ವಿಷಯವನ್ನು ನೆನೆಯುವಂತೆ ಮಾಡುತ್ತಾರೆ.
ಶ್ರೀಕೃಷ್ಣನೂ ಬಾಲ್ಯ ಜೀವನದಲ್ಲಿ ಕಂಡುಬರುವ ಮತ್ತೊಂದು ತುಂಟಾಟವೆಂದರೆ ಯಮುನಾ ನದಿಯಲ್ಲಿ ಗೆಳೆಯರೊಂದಿಗೆ ಈಜಾಡುವುದೆಂದರೆ ಅತ್ಯಂತ ಪ್ರಿಯವಾದ ಮೋಜಿನ ವಿನೋದವಾಗಿತ್ತು. ಗೆಳೆಯರೊಂದಿಗೆ ಈಜುವಾಗ ಪಂದ್ಯ ಕಟ್ಟುವುದು ಸಾಮಾನ್ಯವಾಗಿತ್ತು. ಮುಖಕ್ಕೆ ನೀರನ್ನು ಎರಚಿಕೊಳ್ಳುವಿಕೆ, ಇನ್ನೊಬ್ಬರ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸೋಲಿಸುವುದು, ಸೋತವರ ಮೇಲೆ ಸವಾರಿ ಮಾಡುವುದು ಕೃಷ್ಣನ ಆಟಗಳಲ್ಲೊಂದಾಗಿತ್ತು. ಈ ಆಟಗಳಲ್ಲಿ ಶ್ರೀಕೃಷ್ಣನೆಂದಿಗೂ ಸೋಲುತ್ತಿರಲಿಲ್ಲ. ಕೆಲವೊಮ್ಮೆ ಗೋಪಿಕೆಯರೂ ಇದೇ ಸಮಯಕ್ಕೆ ಯಮುನಾ ನದಿಗೆ ಸ್ನಾನ ಮಾಡಲು ಬರುತ್ತಿದ್ದರು. ಗೋಪಿಕಾಸ್ತ್ರೀಯರ ಹೃದಯವು ಶ್ರೀಕೃಷ್ಣಪ್ರೇಮದಿಂದ ತುಂಬಿರುತ್ತಿತ್ತು. ಸಖಿಯರೊಡನೆ ಶ್ರೀಕೃಷ್ಣನ ರೂಪ, ಗುಣ ಅವನ ವೇಣುಗಾನದ ಚಿತ್ತಾಪಹಾರಕ ಮಾಧುರ್ಯ ಅವರ ಕಣ್ಣ ಮುಂದೆ ಸುಳಿಯುತ್ತಿತ್ತು. ಶ್ರೀಕೃಷ್ಣನ ಕೆಂದುಟಿ, ಕುಡಿನೋಟ, ಆಕರ್ಷಕ ಹುಬ್ಬುಗಳು, ನ್ಅವನ ತಲೆಯ ಮೇಲಿನ ನವಿಲುಗರಿ, ಗುಂಗುರುಕೂದಲು, ಅವನ ತುಟಿಗಳ ಮೇಲಿನ ಮುಗುಳುನಗೆ ಗೋಪಿಕಾಸ್ತ್ರೀಯರನ್ನು ಆಕರ್ಷಿಸುತ್ತಿತ್ತು. ಒಮ್ಮೊಮ್ಮೆ ಕೃಷ್ಣನು ನದಿಯಿಂದ ಹೊರಹೋಗುವವರೆಗೂ ಗೋಪಿಕೆಯರು ನೀರಿನಿಂದ ಹೊರಬರದೆ ಒರೆನೋಟದಿಂದ ಕೃಷ್ಣನನ್ನೇ ನೋಡುತ್ತಾ ಕಾಲ ಕಳೆಯುತ್ತಿದ್ದುದು ಕೃಷ್ಣನಿಗೂ ತಿಳಿದಿದ್ದಿತು.
ಶ್ರೀಕೃಷ್ಣನ ಜೀವನದಲ್ಲಿನ ಎಲ್ಲ ಪ್ರಸಂಗಗಳೂ ಏನಾದರೂ ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಿದ್ದಿತು. "ಅಂಗನೆಯರ ವ್ರತ ಭಂಗವ ಮಾಡಿ, ರಂಗವಿಟ್ಠಲ ಭವಭಂಗವ ಪರಿಹರಿಸೋ" ಎಂದು ಕೃಷ್ಣನ ಜೀವನದ ಮತ್ತೊಂದು ಪವಾಡವನ್ನು ಶ್ರೀಪಾದರಾಜರು ಉಲ್ಲೇಖಿಸಿದ್ದು, ಪ್ರತಿಯೊಬ್ಬ ಮನುಷ್ಯನ ಅಂತಿಮ ಗುರಿಯೂ ಇದೇ ಆಗಿರುತ್ತದೆ. ಹೇಮಂತ ಋತುವಿನ ಮಾರ್ಗಶಿರ ಮಾಸದ ಒಂದು ದಿನ ಗೋಪಕನ್ಯೆಯರು ಅರುಣೋದಯ ಕಾಲದಲ್ಲಿ ತಮ್ಮ ವಸ್ತ್ರಗಳನ್ನು ದಡದ ಮೇಲಿಟ್ಟು ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೃಷ್ಣನು ಗೋಪಿಕೆಯರ ವಸ್ತ್ರಗಳನ್ನು ಅಪಹರಿಸಿ ಮರದ ಮೇಲಿಟ್ಟುಕೊಂಡು ಕುಳಿತನು. ಸ್ನಾನ ಮಾಡುತ್ತಿದ್ದ ಗೋಪಿಕೆಯರು ಎಷ್ಟು ಕೇಳಿಕೊಂಡರೂ ವಸ್ತ್ರ ಕೊಡದ ಶ್ರೀಕೃಷ್ಣನು, ನಿರ್ವಸ್ತ್ರಿತರಾಗಿಯೇ ಬಂದು ವಸ್ತ್ರವನ್ನು ಸ್ವೀಕರಿಸಬೇಕೆಂದು ಹೇಳಿದನು. ಆಗ ಗೋಪಿಕೆಯರು ನಿರ್ವಸ್ತ್ರಿತರಾಗಿಯೇ ನದಿಯಿಂದ ಹೊರಬಂದು, ತಮ್ಮ ಕರಗಳಿಂದ ಅರೆ ಮೈಮುಚ್ಚಿಕೊಂಡು ವಸ್ತ್ರ ಕೇಳಿದಾಗ, ಎರಡೂ ಕೈಗಳಿಂದ ನಮಸ್ಕರಿಸುವಂತೆ ಸೂಚಿಸಿದ. ನಂತರ ಅವರು ತಮ್ಮ ಮೈ ಮುಚ್ಚಿಕೊಂಡಿದ್ದ ಕೈಯನ್ನು ತೆಗೆದು ಎರಡೂ ಕೈಗಳಿಂದ ನಮಸ್ಕರಿಸಿದಾಗ, ಶ್ರೀಕೃಷ್ಣನು ಅವರ ವಸ್ತ್ರಗಳನ್ನು ಹಿಂದಿರುಗಿಸಿದನು. ಈ ಸಂದರ್ಭವನ್ನು ಶ್ರೀಕೃಷ್ಣನೇ ಸೃಷ್ಟಿಸಿದ್ದು, ಅದಕ್ಕೆ ನಿರ್ದಿಷ್ಟ ಕಾರಣವಿದೆ.
ಗೋಪಿಕೆಯರೆಲ್ಲರಿಗೂ ಶ್ರೀಕೃಷ್ಣನನ್ನು ಕಂಡರೆ ವಿಶೇಷ ವ್ಯಾಮೋಹವಿತ್ತು. ಆ ವ್ಯಾಮೋಹ ನಿರಂತರವಾಗಿರುವಂತೆ ಮಾಡುವುದರ ಮೂಲಕ ಅವರ ಜೀವನಪೂರ್ತಿ ಅವನ ಸ್ಮರಣೆಯಲ್ಲಿಯೇ ಕಾಲ ಕಳೆಯಲೆಂದು ಹಾಗೂ ಅವರಿಗೆ ಸಂಸಾರ ಬಂಧನದಿಂದ ವಿಮೋಚನೆ ಮಾಡಲು ಈ ನಾಟಕವಾದಿದ್ದು ಸ್ಪಷ್ಟವಾಗಿದೆ. ಲೌಕಿಕ ಸುಖವನ್ನು ಮೀರಿದ ಪ್ರೀತಿಯನ್ನು ಕೃಷ್ಣ ಅವರಿಗೆ ನೀಡಿದನು. ಗೋಪಿಕೆಯರು ಶ್ರೀಕೃಷ್ಣನನ್ನು ಬಯಸಿದ್ದು ನಿಜವಾದರೂ, ಕೃಷ್ಣನಿಂದ ಮರಳಿ ವಸ್ತ್ರ ಪಡೆದು ಧರಿಸಿದ ನಂತರ ಅವರೆಲ್ಲರೂ ಸಂತುಷ್ಟರಾಗಿ ಜೀವಿಸಿದರು. ಕೃಷ್ಣನೇ ಸರ್ವಸ್ವವೆಂದು ನಂಬಿದ್ದ ಅವರಿಗೆ ಯಾವುದೇ ಲೌಕಿಕ ವ್ಯಾಮೋಹ ಬಯಕೆಗಳು ಆವರಿಸದಂತೆ ಅವರೆಲ್ಲರನ್ನೂ ಮುಕ್ತಿಗೊಳಿಸಿದ. ಕೃಷ್ಣನ ಸ್ಮರಣೆಯಲ್ಲಿಯೇ ಇಡೀ ಜೀವನವನ್ನು ಕಳೆಯುವಂತಹ ಅಸಾಧಾರಣವಾದ ನೆಮ್ಮದಿಯನ್ನು ಗೋಪಿಕೆಯರಿಗೆ ಕರುಣಿಸಿರುವುದನ್ನು ಶ್ರೀಪಾದರಾಜರು ಕೀರ್ತನೆಯಲ್ಲಿ ಸ್ಮರಿಸಿದ್ದಾರೆ. ವಸ್ತ್ರ ಧರಿಸದ ಗೋಪಿಕೆಯರ ಬಗೆಗೆ ಪ್ರೀತಿ, ಅನುಕಂಪ ಇದ್ದಿತಾದರೂ, ಅವರಿಗೆ ಎಲ್ಲದ್ದರಿಂದ ಮುಕ್ತಿಯನ್ನು ಕರುಣಿಸುವುದೇ ಅವನ ಉದ್ದೇಶವಾಗಿದ್ದಿತು. ಮೋಕ್ಷವನ್ನು ಗಳಿಸಿಕೊಳ್ಳುವುದೇ ಎಲ್ಲಾ ಭಕ್ತರ ಅಂತಿಮ ಮನೋಭೀಷ್ಟವಾಗಿದ್ದು, ನಾರಿಯರ ವಸ್ತ್ರದ ಅಪಹರಣ ಪ್ರಸಂಗವು ಗೋಪಿಕೆಯರಿಗೆ ವರವಾಗಿ ಪರಿಣಮಿಸಿತು. ಅದೇ ದಿನದಂದು ಎಲ್ಲಾ ಗೋಪಿಕೆಯರು ಕಾತ್ಯಾಯನಿ ವ್ರತವನ್ನು ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ವ್ರತಕ್ಕೆ ಫಲವನ್ನು ನೀಡುವುದರ ಮೂಲಕ ಗೋಪಿಕೆಯರನ್ನು ಲೌಕಿಕತೆಯಿಂದ ಶ್ರೀಕೃಷ್ಣ ಮುಕ್ತಿಗೊಳಿಸಿದ. ಶ್ರೀಕೃಷ್ಣನ ಧ್ಯಾನದಲ್ಲಿ ಮುಳುಗಿರುತ್ತಿದ್ದ ಗೋಪಿಕೆಯರು ಜೀವನಪೂರ್ತಿ ಇತರ ವಿಷಯಗಳೆಡೆ ಗಮನ ನೀಡಲಿಲ್ಲ.
ಆಧ್ಯಾತ್ಮ ಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬರ ಆಸೆಯೂ ಇದೇ ಆಗಿರುತ್ತದೆ. ಎಲ್ಲಾ ಧರ್ಮದಲ್ಲಿಯೂ ಕಂಡುಬರುವ ಪ್ರಮುಖವಾದ ಅಂಶವೆಂದರೆ, ಭವಬಂಧನದ ಮುಕ್ತಿಯಾಗಿದ್ದು, ಭವಗಳಿಂದ ಮುಕ್ತರಾಗುವವರೆಗೂ, ಭಕ್ತರಿಗೆ ಭಗವಂತನ ಅನುಗ್ರಹ ಅನಿವಾರ್ಯವಾಗಿರುತ್ತದೆ. ಅವನ ಕೃಪೆಗೆ ಪಾತ್ರರಾಗುವುದಕ್ಕೆ ಅನೇಕ ಮಾರ್ಗಗಳಿದ್ದು, ಭಕ್ತಿಯು ಅತ್ಯಂತ ಪವಿತ್ರವಾದ ಹಾಗೂ ಕೃಷ್ಣನಿಗೆ ಪ್ರಿಯವಾದ ಮಾರ್ಗವಾಗಿದೆ. ದಾಸಶ್ರೇಷ್ಠರೆಲ್ಲರೂ ಅನುಸರಿಸಿದ್ದು ಭಕ್ತಿಮಾರ್ಗವನ್ನೇ. ಈ ಮಾರ್ಗದಲ್ಲಿ ಭಗವಂತನ ಲೀಲೆಗಳನ್ನು ಸ್ಮರಿಸುವುದು ಅತ್ಯವಶ್ಯವಾಗಿದೆ. ದೇವನ ಸುತ್ತಲೂ ನಡೆದ ಘಟನೆಗಳು ಪವಾಡಗಳನ್ನು ಪ್ರಸ್ತಾಪಿಸುವುದರ ಮೂಲ ಅವನನ್ನು ಒಳಿಸಿಕೊಳ್ಳುವಿಕೆಯನ್ನು ಕಾಣಬಹುದು. ಶ್ರೀಪಾದರಾಜರು ಸಹ ಇದೇ ರೀತಿಯಲ್ಲಿ ಭಗವದನುಗ್ರಹಕ್ಕೆ ಪಾತ್ರರಾಗಿ "ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ" ಎನ್ನುವ ಕೀರ್ತನೆಯಲ್ಲಿ ಶ್ರೀಕೃಷ್ಣನ ಕೆಲವು ಲೀಲೆಗಳನ್ನು ಉಲ್ಲೇಖಿಸಿರುವುದನ್ನು ಕಾಣಬಹುದು.
ಲೇಖಕರು - ಡಾ. ಡಿ. ಕೆ. ನಟರಾಜ
ಶ್ರೀ ಶ್ರೀಪಾದರಾಜರ ಕೃತಿಗಳಲ್ಲಿನ ಕೃಷ್ಣಾವತಾರದ ನೆನಹು
ರಂಗನಾಥನ ನೋಡುವ ಬನ್ನಿ
(ಶ್ರೀ ಶ್ರೀಪಾದರಾಜರ ಕೃತಿಗಳ ವಿಮರ್ಶೆ ಭಾಗ - 2)
ಪ್ರಕಾಶಕರು: ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ (ರಿ.)
ಶ್ರೀ ಶ್ರೀಪಾದರಾಜ ಮಠ (ಮುಳುಬಾಗಿಲು ಮಠ)
ಬೆಂಗಳೂರು 560018
***