Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ ಹರಿ ಸ್ವತಂತ್ರ ಸುಳಾದಿ
(ಹರಿ ಸ್ವಾತಂತ್ರ , ಜೀವ ಪರತಂತ್ರನೆಂದು ತಿಳಿದವರಿಗೆ , ಪರತಂತ್ರ ದೂರನಾದ ಶ್ರೀಹರಿಯು ಒಲಿವನು.)
ರಾಗ ಸೌರಾಷ್ಟ್ರ
ಧ್ರುವತಾಳ
ಆವನ್ನೀಧರಿಯ ವ್ಯಾಪ್ತನೆಂದೆನಿಸುವ
ಆವಪುರುಷನೆ ನಮ್ಮ ಸ್ವಾಮಿ ಕಾಣೊ
ಆವಾವ ನಿರ್ದೋಷ ಎಂದೆನಿಸುವನೊ
ಆವನೆ ಎನ್ನ ಭಾಗ್ಯದೊಡಿಯ ಕಾಣೊ
ಆವಾವ ಜ್ಞಾನ ಗುಣಪೂರ್ಣ ನೆಂದೆನಿಪನೊ
ಆವನೆ ಎನ್ನ ಮನದೊಡೆಯ ಕಾಣೊ
ಆವಾವ ಸರ್ವತ್ರ ವ್ಯಾಪ್ಥನಾಗಿಪ್ಪನೊ
ಆವನೇ ಎನಗೆ ಮುಖ್ಯ ವಿಷಯ ಕಾಣೊ
ಆವನಿಂದ ಜಾಗ್ರವು ಸೃಷ್ಟಿ ಸ್ಥಿತಿ ಲಯವು
ಆವನೇ ಎನ್ನ ದಾತಾಶ್ರಿತನು ಕಾಣೊ
ಆವನಿಂದ ಬಂಧಕ ಮೋಚಕಾದುದೊ
ಆವನೆ ಈಗ ಮನವೆ ಪಿಡಿಯೊ ಕಾಣೊ
ಆವನೆ ಕಾವನ್ನ ಬಾವನ್ನ ತಾವನ್ನ
ಈವನ್ನ ಪಾವನ್ನ ಪೂರ್ಣಗುಣಸಂಪನ್ನ
ಮಾವನ್ನ ಮರ್ದನ ಗೋಪಾಲವಿಟ್ಠಲ ನೆಂಬ
ದೇವನ್ನ ತಂದು ತೋರು ಅನುಭವಕ್ಕೆ ॥ 1 ॥
ಮಟ್ಟತಾಳ
ರಮ್ಮೆಯ ಅರಸನ್ನ ಬೊಮ್ಮನಯ್ಯನ್ನ
ಮೊಮ್ಮಗ ನೆಂದೆನಿಪ ಹರನ ಪೊರೆವನ್ನ
ಸುಮ್ಮನಸರನೆಲ್ಲ ಪರಿವಾರವು ಮಾಡಿ
ಬೊಮ್ಮಾಂಡವೆ ಮನಿಯ ಗಮ್ಯನೆಂದೆನಿಪನ
ಸುಮ್ಮನೆ ಹೋಗಿನ್ನು ಒಮ್ಮನದಲ್ಲಿ
ಘಮ್ಮನೆ ಅಳಗಿರಿ ತಿಮ್ಮನ್ನ ಕರದು ತಾ
ನಮ್ಮ ಸ್ಥಿತಿಯ ಪೇಳಿ ಸಮ್ಮತಿಸಿಕೊಂಬಾ
ಇಮ್ಮನ ಬ್ಯಾಡಿದಕೆ ಈಗಲೆ ಸಮ್ಯಯಿದಕೆ
ನಮ್ಮ ಪೊರೆವ ದಾತ ಗೋಪಾಲವಿಟ್ಠಲ
ಹಮ್ಮೆ ತೊರೆದು ಅಧಮ್ಮನೆಂದವಗೊಲಿವ ॥ 2 ॥
ರೂಪಕತಾಳ
ಜೀವನಲ್ಲಿ ಅಸ್ವತಂತ್ರವೆಂಬೋದು ಸಿದ್ಧ
ಅವನಲ್ಲೆ ಅವನಿರೂಪಾ ಅನುಭವ ತೋರುತಾ
ಅವನೆ ಅವನ ಮಹಿಮೆಯನು ಬಲ್ಲವ
ಅವನೆ ಸಕಲ ವಿಧಿಯನು ಮಾಡಿದವ
ಪಾವನ್ನನಾಗುವ ಅವನ ಕಂಡರೆ ಮನುಜ
ಈ ವೇಳ್ಯೆದಲಿ ಮನವೆ ಅನುಭೋಗವಲ್ಲದೆ
ದೇವಕಿನಂದನ ಗೋಪಾಲವಿಟ್ಠಲ ತ -
ನ್ನವನೆಂದವನಿಗೆ ತನ್ನ ತೋರಿಸಿಕೊಂಬ ॥ 3 ॥
ಅಟ್ಟತಾಳ
ಕುಣಿದು ಕುಣಿಸುವ ಮಣಿದು ಮಣಿಸುವ
ಉಣಿಸುವ ನುಂಡು ತನಗಭೇದಾಗಿ
ಎಣಿಕೆ ತಟ್ಟುವನಲ್ಲ ಅನುಮಾನ ವಸ್ತಲ್ಲ
ಘನ ಜಾಗ್ರ ಪ್ರತಾಪ ನಿತ್ಯವ್ಯಕ್ತ ದೇವ
ಎಣಿಸು ಮನವೆ ನಿನ್ನ ಎಲ್ಲ ಪ್ರಾವರ್ತಕ
ಕ್ಷಣಕ್ಷಣಕೆ ಇನ್ನು ಕಾಣಿಸುವನು ಆ -
ರನು ನಾಚದೆ ಪಿಡಿಯಿನ್ನು ನೂಕು ಸಕಲ ಅಘ
ಕ್ಷೀಣಿಸಿ ಪೋಗುವದಿದಕೆ ಅನುಮಾನ ಸಲ್ಲದು
ಘನ್ನಮಹಿಮ ನಮ್ಮ ಗೋಪಾಲವಿಟ್ಠಲನ್ನ
ನೆನೆಸುವದೆ ಸುಖ ನಿನಗದೆ ಬಹುಲಾಭ ॥ 4 ॥
ಆದಿತಾಳ
ಭಕ್ತರಿಗೆ ಭಕ್ತನಾಗು ಮುಕುತಿ ಬೇಕಿಚ್ಛೆ ಇತ್ತೆ
ಸಕಲ ವಿಷಯದಿ ವಿರಕ್ತಿವುಳ್ಳವನಾಗು
ಕಕುಲಾತಿ ಬಿಡು ಇನ್ನೊಂದು ದೈವಿಲ್ಲ ಯೆಂದು
ಲಕುಮಿರಮಣನಲ್ಲಾಸಕುತಿಯುಳ್ಳವನಾಗು
ಸಕಲ ವಿಧಿ ನಿಷೇಧ ಹರಿಗೆ ಆಧೀನವೆಂದು
ಉಕುತಿಗಳಿಂದ ಹರಿಯ ತುತಿಗೆ ದೀಕ್ಷಿತನಾಗು
ಭಕುತವತ್ಸಲ ರಂಗ ಗೋಪಾಲವಿಟ್ಠಲ
ಸಕಲ ಬಂಧವ ಬಿಡಿಸಿ ಸುಖ ಅಂಬುಧಿಯೊಳಿಡುವ ॥ 5 ॥
ಜತೆ
ಸ್ವಾತಂತ್ರಾಸ್ವತಂತ್ರ ತಿಳಿದವನಿಗೆ ಪಾರ -
ತಂತ್ರ ವಿದೂರ ಗೋಪಾಲವಿಟ್ಠಲ ವೊಲಿವ ॥
******