ankita ಶ್ರೀಕರವಿಠಲ
ಕೂಗಿದರು ಧ್ವನಿ ಕೇಳದೆ ಶಿರ
ಬಾಗಿದರು ದಯಬಾರದೆ ಗುರುವೆ ಪ
ಯೋಗಿವರ್ಯ ಕೃಪಾಸಾಗರ ನಿನ್ನಯ
ಆಗಮವೆಂದಿಗೆ ಆಗುವುದೊ ಪ್ರಭುವೆ ಅ.ಪ
ಸುಂದರ ವೃಂದಾವನ ಮಂದಿರ ಘನ್ನ
ಮುಂದಾರಿಗಾಣದೆ ಪೊಂದಿದೆ ದ್ವಂದ್ವಚರಣ
ಒಂದುದಿನವಾದರೂ ಬಂದು ನೀ ಸ್ವಪ್ನದಿ
ಸಂದರುಶನವನು ಕರುಣಿಸು ತವಕದಿ 1
ಶರಣರಸುರತರು ನೀನಲ್ಲವೆ ಖರೆ
ಕರಿಕರಿಗಾರದೆ(?) ಇಡುವೆ ನಿನಗೆ ಮೊರೆ
ಮೊರೆಹೊಕ್ಕವರಿಗೆ ಮರೆಯಾಗುವರೆ
ಸರಿಯೆ ನಿನಗಿದು ಗುರುಪರಿಮಳಾರ್ಯ 2
ನಾ ಕೈಸೋತವ ವಾಕುಲಾಲಿಸೊ ಎನ್ನ
ನೀ ಕೈ ಪಿಡಿದು ಬಂದು ಸಾಕದಿದ್ದರೆ ಎನ್ನ
ನಾಕಾಧಿಪನುತ ಶ್ರೀಕರವಿಠಲನು
ತಾ ಕರಪಿಡಿಯನು ಪುಸಿಯಲ್ಲ ಎನ್ನಾಣೆ 3
***
ರಾಗ: ಅಠಾಣ/ಧನಶ್ರಿ ತಾಳ: ಆದಿ/ತ್ರಿವಿಡ (raga tala may differ in audio)