..
ಯಾತರ ಭಯ ಯತಿನಾಥನ ಪದಯುಗ
ಪ್ರೀತಿಲಿ ಭಜಿಪನಿಗೆ ಪ
ಪೋತರು ಸತಿ ಮಹಭೂತಿಯ ನೃಪತನ
ನಾಥನಿಗರ್ಪಿಸಿ ದೂತ ನಾನೆಂಬುವಗೆ ಅ.ಪ
ವಂದಿಸಿ ಧನವನು ತಂದು ಜನರು ತನ
ಮುಂದೆ ಸುರಿಸಲೇನೂ
ವಂದನೆ ಮಾಡದೆ ನಿಂದಿಸಲೇನದ
ರಿಂದ ಪೋದದೇನೂ
ಬಂದ ಬಂದ ಜನರಾನಂದದಿ ತನ್ನನು
ಪೊಂದಿ ನಡೆಯಲೇನೂ
ಸುಂದರ ಗುರುಪದ ಮಂದಜಯುಗ ಮನೊ
ಮಂದಿರದಲಿ ತಾ ತಂದು ಭಜಿಪನಿಗೆ 1
ಉದಯದಲಮರರ ನದಿಯಲಿ ಸ್ನಾನಕೆ
ಒದಗದೆ ಮಲಗಿರಲೇನೂ
ಮದನ ಕೇಳಿಯೊಳು ಸುದತಿಯ ಸಹಿತದಿ
ಮುದದಲಿ ಕುಳಿತಿರಲೇನೂ
ಕದನದ ವಾರ್ತೆಯ ವÀದನದಲ್ಯಾಡುತ
ಮದಕವ ಮಾಡಿದರೇನೂ
ಸದಮಲ ಗುರುಪದ ಪದುಮವ ತನ್ನಯ
ಹೃದಯದೊಳಗೆ ಬಲು ಮುದದಲಿ ಭಜಿಪನಿಗೆ 2
ಅನ್ಯರ ಮನೆಯಲಿ ಮನ್ನಣೆ ದಿನ ದಿನ
ಘನ್ನವಾಗಿ ಮಾಡಿದರೇನೂ
ಭಿನ್ನಮನದಿ ಜನರನ್ಯಾಯದಿ ಬಲು
ಬನ್ನ ನುಡಿಯಾಡಿದರೇನೂ
ತನ್ನಯ ಸತಿಸುತರನ್ಯರ ವಚನದಿ
ತನ್ನನು ಲೆಕ್ಕಿಸದಿರಲೇನೂ
ಘನ್ನ ಗುರುಜಗನ್ನಾಥವಿಠಲನ
ಸನ್ನುತಿಪ ಗುರುರನ್ನ ಚರಗೆ 3
***